ಅಡಿಕೆ ಜೊತೆ ತೋಟಗಾರಿಕಾ ಬೆಳೆಯಲ್ಲಿ ಉಪಬೆಳೆಯಾಗಿ ಬೆಳೆಯುವ ವೀಳ್ಯದೆಲೆ ರೈತರ ಪಾಲಿಗೆ ನಿರಂತರ ಆದಾಯ ತರುತ್ತಿದ್ದ ಬೆಳೆಯಾಗಿತ್ತು. ಆದರೆ ಕೊರೊನಾ ಕಾಲಘಟ್ಟದಲ್ಲಿ ಕಳೆದ ಆರೇಳು ತಿಂಗಳಿಂದ ಒಮ್ಮೆಯೂ ಕೊಯ್ಲನ್ನೇ ಕಾಣದೇ ಬಳ್ಳಿಯಲ್ಲಿಯೇ ಹಣ್ಣಾಗಿ ಉದುರುವ ಜೊತೆಗೆ ಎಲೆಯ ವಿಪರೀತ ಹೇರಿಕೆಯಿಂದಾಗಿ ಕೊಳೆ ರೋಗಕ್ಕೂ ಸುಲಭವಾಗಿತುತ್ತಾಗಿ ಬಳ್ಳಿಯೇ ನಾಶವಾಗುತ್ತಿರುವುದು ರೈತರ ಚಿಂತೆಗೆ ಕಾರಣವಾಗಿದೆ.

ಮಳೆಗಾಲದಲ್ಲಿ ಒಂದೆರಡು ತಿಂಗಳು ವೀಳ್ಯದೆಲೆ ಬೇಡಿಕೆ ಕೊಂಚ ಕಡಿಮೆಯಾಗುವುದು ಬಿಟ್ಟರೆ ಉಳಿದೆಲ್ಲಾ ದಿನಗಳಲ್ಲೂ ಮಾರುಕಟ್ಟೆ ಸ್ಥಿರವಾಗಿಯೇ ಇರುತ್ತಿತ್ತು. ಕೊರೊನಾ ಲಾಕ್ಡೌನ್ ಕಾರಣಕ್ಕೆ ಸ್ಥಗಿತವಾಗಿದ್ದ ಮಾರುಕಟ್ಟೆ ಕೆಲವೇದಿನಗಳಲ್ಲಿ ಪುನರಾರಂಭವಾಯಿತಾದರೂ ಇಂದಿಗೂ ಚೇತರಿಕೆ ಹಾದಿಯನ್ನು ಮಾತ್ರ ಕಂಡುಕೊಳ್ಳುವುದು ಸಾಧ್ಯವಾಗಿಲ್ಲ ಎಂದು ವ್ಯಾಪಾರಿಗಳು ಅಸಹಾಯಕತೆ ತೋಡಿಕೊಳ್ಳುತ್ತಿದ್ದಾರೆ.
ಲಾಹೋರ್. ಡಾಕಾ ಮೂಂತಾದ ವಿದೇಶಿ ಮಾರುಕಟ್ಟೆ ಸೇರಿದಂತೆ ದೆಹಲಿ, ಪೂನಾಗಳಿಗೂ ರಫ್ತಾಗುತ್ತಿದ್ದ ತಾಲೂಕಿನ ವೀಳ್ಯದೆಲೆಗಳಿಗೆ ಅತೀ ದೊಡ್ಡ ಮಾರುಕಟ್ಟೆ ಮಾತ್ರ ರಾಣೆಬೆನ್ನೂರು ಆಗಿತ್ತು. ಕಳೆದೊಂದು ವರ್ಷದಿಂದ ರಾಣೆಬೆನ್ನೂರಿನಲ್ಲಿಯೂ ವೀಳ್ಯದೆಲೆಗೆ ಬೇಡಿಕೆ ಇಲ್ಲವಾಗಿದೆ. ಒಂದು ಕಟ್ಟು ರಾಣಿ (100 ಎಲೆ) ಎಲೆಯನ್ನು 8-10 ರುಪಾಯಿಗೆ ಕೇಳುತ್ತಾರೆ. ಅಷ್ಟು ಕಡಿಮೆ ಬೆಲೆಗೆ ಕೊಟ್ಟರೆ ಬೆಳೆ ಬೆಳೆದ ರೈತರಿಗೆ ಲಾಭದ ಮಾತಿರಲಿ ಕೊಯ್ಲು ಮಾಡಿದವರಿಗೆ ಸಂಬಳವನ್ನೂ ಕೈಯಿಂದಲೇ ಕೊಡಬೇಕಾಗುತ್ತದೆ. ಹಾಗಾಗಿ ಯಾರೂ ಎಲೆ ಕೊಯಲಿಗೆ ಮುಂದಾಗುತ್ತಿಲ್ಲ ಎನ್ನುವ ಮಾತಿದೆ.

ಬೆಲೆ ಇಲ್ಲ ಎಂದು ವೀಳ್ಯದೆಲೆ ಬಳ್ಳಿಗಳನ್ನು ಹಾಗೇ ಬಿಟ್ಟರೆ ಎಲೆಗಳು ಹಣ್ಣಾಗಿ ಕೊಯ್ಲಿಗೇ ಬರದಂತಾಗುತ್ತದೆ ಮಾತ್ರವಲ್ಲ ಮಳೆಗಾಲದಲ್ಲಿ ಬಳ್ಳಿಯಲ್ಲಿ ಎಲೆ ಹೆಚ್ಚಿದ್ದರೆ ಕೊಳೆ ರೋಗವೂ ಕಾಣಿಸಿಕೊಳ್ಳುತ್ತದೆ. ಇದೇ ಕಾರಣಕ್ಕೆ ಒಂದು ರೂಪಾಯಿ ಕೊಡುವುದೂ ಬೇಡ ಎಲೆಯನ್ನಾದರೂ ಕೊಯ್ದುಕೊಂಡು ಹೋಗಿ ಎಂದರೆ ಅದಕ್ಕೂ ವ್ಯಾಪಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಸಾವಿರಾರು ರುಪಾಯಿ ಮುಂಗಡ ಕೊಟ್ಟು ಗುತ್ತಿಗೆ ಪಡೆದ ತೋಟಗಳ ಎಲೆಯನ್ನೇ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ ಹೀಗಿರುವಾಗ ಬೇರೆ ಎಲೆಯನ್ನು ತೆಗೆದುಕೊಂಡರೆ ಏನು ಮಾಡುವುದು ಎನ್ನುವುದು ವ್ಯಾಪಾರಿಗಳ ಪ್ರಶ್ನೆಯಾಗಿದೆ.
ಅಡಿಕೆಗೆ ರೇಟು ಬಂದಿದೆ ಎಂದ ಖುಷಿಪಟ್ಟಿದ್ದ ರೈತರ ಮುಖದಲ್ಲಿ ವೀಳ್ಯದೆಲೆ ಬಳ್ಳಿಗಳು ನಾಶವಾಗುತ್ತಿರುವ ಚಿಂತೆಯ ಗೆರೆ ಕಾಣಿಸಿಕೊಳ್ಳತೊಡಗಿದೆ. ಮಳೆ ನಿಂತರೂ ಮರದ ಹನಿ ನಿಲ್ಲದು ಎನ್ನುವಂತೆ ಕೊರೊನಾ ಮುಗಿದರೂ ಕೊರೊನಾ ಉಂಟುಮಾಡಿದ ಪರಿಣಾಮಗಳು ಜನರನ್ನು ಬಹುಕಾಲ ಕಾಡಲಿದೆ ಎನಿಸುತ್ತಿದೆ.
Leave a Comment