ಮಕ್ಕಳು ಒಬ್ಬರಿಗೊಬ್ಬರು ದೀಪವನ್ನು ಹಂಚುತ್ತಾ ಬೆಳಗಿಸುತ್ತಾ ಬೆಳೆಯುವವರು. ಸಮಾಜದ ಕತ್ತಲನ್ನು ಕಳೆಯಲು ಈ ಮಕ್ಕಳಿಂದ ಸಾಧ್ಯವಾಗುವಂತ ವಾತಾವರಣ ಸೃಷ್ಟಿಸಬೇಕಿದೆ. ಆದರೆ, ಬಾಲ್ಯವನ್ನು ಅತ್ಯುತ್ತಮವಾಗಿ ಕಳೆಯಲು ಬಿಡದೇ ಪರೀಕ್ಷೆ ಕೇಂದ್ರಿತವಾಗಿ ಪರಿವರ್ತನೆ ಮಾಡಲಾಗಿದ್ದು ಮಕ್ಕಳ ಬಾಲ್ಯದ ಮೇಲೆ ದೊಡ್ಡ ಏಟು ನೀಡಿದಂತೆ ಆಗಿದೆ. ಪರೀಕ್ಷೆಯನ್ನು ಯುದ್ಧವಾಗಿ ಕಾಣುವ ಭಯದಿಂದ ಮಕ್ಕಳು ಹೊರಬರುವಂತಾಗಲಿ.
ಜೊತೆಗೆ ಸರ್ಕಾರದ ವಿವಿಧ ಯೋಜನೆಗಳು ಮಹಿಳೆ ಮತ್ತು ಮಕ್ಕಳ ಸಲುವಾಗಿಯೇ ಇದ್ದರೂ ಅವುಗಳ ಮಹತ್ವ ಕಡಿಮೆ ಮಾಡುವ ನಿಟ್ಟಿನಲ್ಲಿ ಸೂಕ್ಷ್ಮ ಹುನ್ನಾರಗಳು ನಡೆಯುತ್ತಿದೆ. ಮಕ್ಕಳ ದಿನಾಚರಣೆ ಸಂದರ್ಭದಲ್ಲಾದರೂ ಇವುಗಳನ್ನು ಅರ್ಥ ಮಾಡಿಕೊಳ್ಳೋಣ. ನಾಡಿನ ಅನೇಕ ಹಿರಿಕಿರಿಯರಿಗೆ ಮಾರ್ಗದರ್ಶನ ಮಾಡಿದ ಸಾಹಿತಿ ಡಾ. ಆರ್. ವಿ. ಭಂಡಾರಿಯವರ ನೆನಪಿನಲ್ಲಿ ಪ್ರಾರಂಭವಾದ ಸಹಯಾನ ಸಮಾಜದ ಓರೆಕೋರೆಗಳನ್ನು ತಿದ್ದಲುಕೆಲಸ ಮಾಡುತ್ತಿರುವುದು ಮಕ್ಕಳು ಮತ್ತು ಯುವಜನತೆಯ ಸಲುವಾಗಿಯೇ ಈ ನೆಲದಲ್ಲಿ ಅನೇಕ ಕಾರ್ಯಕ್ರಮ ಆಗುತ್ತಿರುವುದು ಬದಲಾವಣೆಯ ಸಂಕೇತ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ರಾಜ್ಯ ಅಧ್ಯಕ್ಷರಾದ ಎಸ್.ವರಲಕ್ಷ್ಮಿ ಹೇಳಿದರು. ಅವರು ಹೊನ್ನಾವರದ ಕೆರೆಕೋಣದಲ್ಲಿ ಸಹಯಾನದಿಂದ ಸಂಘಟಿಸಿದ ಮಕ್ಕಳ ದಿನಾಚರಣೆ ಮತ್ತು ದೀಪಾವಳಿ ನಿಮಿತ್ತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸಲು ಶ್ರಮಿಸಿದ ಗೌರಿ ಭಂಡಾರಿ ದಾವಣಗೆರೆ, ದುಡಿಯುವ ಮಹಿಳೆಯರ ರಾಜ್ಯ ಸಂಚಾಲಕರಾದ ಎಚ್.ಎಸ್. ಸುನಂದಾ, ಮೈಸೂರು, ಅಕ್ಷರದಾಸೋಹ ನೌಕರರ ಸಂಘದ ರಾಜ್ಯ ಪ್ರಧಾನಕಾರ್ಯದರ್ಶಿ ಮಾಲಿನಿ ಮೇಸ್ತ ಶುಭಕೋರಿದರು. ಕಲಾವಿದರು ರೈತ ಹೋರಾಟಗಾರರು ಆದ ಗಣೇಶ ಭಂಡಾರಿಯವರು ಮಕ್ಕಳ ಯಕ್ಷಗಾನಕ್ಕಾಗಿ ನಿರ್ದೇಶಿಸಿದ ಕೆಲವು ಕುಣಿತವನ್ನು ಬಾಲಕಲಾವಿದರಾದ ಅನನ್ಯಾ ಶೆಟ್ಟಿ, ಶ್ವೇತಾ ಭಂಡಾರಿ, ಅಭಯ್ ಮತ್ತು ಅದಿತಿ ಅಭಿನಯಿಸಿದರು. ಎಚ್.ಎಸ್.ಸುನಂದಾ ಮತ್ತು ಮಾಧವಿ ಭಂಡಾರಿಯವರು ಜನಜೀವನ ಪ್ರತಿಬಿಂಬಿಸುವ ಕೆಲವು ಹಾಡುಗಳನ್ನು ಪ್ರಸ್ತುತಪಡಿಸಿದರು. ಸಹಯಾನದ ಕಾರ್ಯದರ್ಶಿ ವಿಠ್ಠಲ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ಎಂ.ಎಸ್. ಶೆಟ್ಟಿ ವಂದಿಸಿದರು.
Leave a Comment