ಪಂಚಾಯತ್‍ರಾಜ್ ವ್ಯವಸ್ಥೆ ಜಾರಿಯಾಗುವ ಪೂರ್ವದಲ್ಲಿ ಗ್ರಾಮಗಳ ಪಾಲಿಗೆ ನ್ಯಾಯದೇಗುಲಗಳಾಗಿದ್ದ ಗ್ರಾಮ ಚಾವಡಿಗಳು, ಬಹುತೇಕ ಗ್ರಾಮಗಳಲ್ಲಿ ಇಂದು ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿ ಶಿಥಿಲಾವಸ್ಥೆಯನ್ನು ಮುಟ್ಟಿವೆ.

ಶಾನುಭೋಗರು ಎಂದು ಕರೆಸಿಕೊಳ್ಳುತ್ತಿದ್ದ ಪ್ರಸ್ಥುತ ಗ್ರಾಮ ಲೆಕ್ಕಿಗರು ಎಂದು ಸಂಬೋದಿಸಲ್ಪಡುವ ಅಧಿಕಾರಿ, ಗ್ರಾಮದ ಕುಟುಂಬಗಳ ಬಗ್ಗೆ ಆಸ್ಥಿ ಪಾಸ್ತಿಗಳ ಬಗ್ಗೆ ಕಳೆದ ಮೂರ್ನಾಲ್ಕು ದಶಕಗಳಿಂದ ಗ್ರಾಮದಲ್ಲಿ ಹುಟ್ಟಿದವರು ಸತ್ತವರ ಲೆಕ್ಕವನ್ನೆಲ್ಲಾ ಕಡತದ ಜೊತೆ ತಲೆಯಲ್ಲಿಯೂ ತುಂಬಿಕೊಂಡಿರುವ ಉಗ್ರಾಣರು ನಿತ್ಯ ಕರ್ತವ್ಯಕ್ಕೆ ಹಾಜರಾಗುವ ಕಛೇರಿಯ ಬಗ್ಗೆ ಈ ಪರಿಯ ನಿಷ್ಕಾಳಜಿ ಯಾಕೆನ್ನುವ ಬಗ್ಗೆ ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳು ಆಯಾ ಭಾಗದ ಜನಪ್ರತಿನಿಧಿಗಳೇ ಉತ್ತರಿಸಬೇಕು.
ಜನನ ಮರಣ ದಾಖಲೆ, ವಿಧವಾವೇತನ, ವೃದ್ದಾಪ್ಯ ವೇತನ, ಸಂಧ್ಯಾ ಸುರಕ್ಷಾ, ಅಂಗವಿಕಲರ ವೇತನ, ರಾಷ್ಟ್ರೀಯ ಕುಟುಂಬ ನೆರವು ಯೋಜನೆ, ಅಂತ್ಯ ಸಂಸ್ಕಾರ, ಭೂ ಹಿಡುವಳಿ, ಆದಾಯ, ಜಾತಿ, ಹಿಂದುಳಿದವರ್ಗ ಸಟೀಫಿಕೇಟ್ ಸೇರಿದಂತೆ

ನಾಡಕಛೇರಿಯಲ್ಲಿ ಸಲ್ಲಿಸುವ ಪ್ರತಿಯೊಂದು ಅರ್ಜಿಯೂ ಗ್ರಾಮ ಚಾವಡಿಗೆ ಬಂದು ಪರಿಶೀಲನೆಗೊಳಪಟ್ಟು ಮುಂದಿನ ಹಂತಕ್ಕೆ ಕಳುಹಿಸಲಾಗುತ್ತದೆ. ಸರ್ಕಾರದ ಯೋಜನೆಗಳನ್ನು ಜನ ಸಾಮಾನ್ಯರಿಗೆ ತಲುಪಿಸುವುದಿರಲಿ, ಜನಸಾಮಾನ್ಯರು ತಮ್ಮ ದಾಖಲಾತಿಗಳನ್ನು ಅಧಿಕೃತವಾಗಿ ಯಾವುದೇ ಇಲಾಖೆಗೆ ಸಲ್ಲಿಸುವುದಿದ್ದರೂ ಗ್ರಾಮಲೆಕ್ಕಿಗರ ಪರಿಶೀಲನೆ ಅತೀ ಅಗತ್ಯ. ಆದಾಗ್ಯೂ ಗ್ರಾಮ ಚಾವಡಿಗಳ ಬಗ್ಗೆ ವ್ಯವಸ್ಥೆಯ ತಾತ್ಸಾರವೇಕೆ ಎನ್ನುವ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲವಾಗಿದೆ.
ಹೊಸಾಕುಳಿ, ಸಾಲ್ಕೋಡ, ಕಡತೋಕಾದಲ್ಲಿರುವ ಗ್ರಾಮ ಚಾವಡಿಯ ಮೇಲ್ಛಾವಣಿಗಳು ದುರ್ಬಲವಾಗಿ ಪಕಾಸಿ ಹೆಂಚುಗಳೆಲ್ಲಾ ಆಗೋ ಈಗೋ ಬೀಳುವಂತಿದ್ದು ಕಟ್ಟಡ ತನ್ನ ಕೊನೆಯ ದಿನಗಳನ್ನು ಎಣಿಸುತ್ತಿರುವಂತೆ ಭಾಸವಾಗುತ್ತಿದೆ. ಕಟ್ಟಡದೊಳಗಿನ ವ್ಯವಸ್ಥೆಯೂ ಸಂಪೂರ್ಣ ಹದಗೆಟ್ಟಿದ್ದು ಬಹುತೇಕ ಕಡೆ ಕನಿಷ್ಠ ವಿದ್ಯುತ್ ಸಂಪರ್ಕವೂ ಸರಿಯಿಲ್ಲದೇ ಎಷ್ಟೋದಿನ ಸಿಬ್ಬಂದಿಗಳು ಮೇಣದ ಬತ್ತಿ ಬೆಳಕಲ್ಲಿ ಕರ್ತವ್ಯ ನಿರ್ವಹಿಸಿದ ಅನುಭವವನ್ನೂ ಹೇಳಿಕೊಳ್ಳುತ್ತಿದ್ದಾರೆ. ಅನುದಾನದ ಕೊರತೆಯೋ ಇಚ್ಚಾಶಕ್ತಿಯ ಕೊರತೆಯೋ ಗ್ರಾಮಚಾವಡಿಗಳು ಮಾತ್ರ ನೇಪಥ್ಯಕ್ಕೆ ಸರಿಯುವ ಲಕ್ಷಣಗಳಂತೂ ಕಂಡುಬರುತ್ತಿದೆ.
Leave a Comment