(ಎದುರುಬದುರಾಗಿ ವಾಹನ ಬಂದರೆ ಮುಖ ಮುಖ ನೋಡಿಕೊಳ್ಳುವ ಚಾಲಕರು – ಕೆಳಗಿಳಿಸಿದರೆ ಮೇಲೆ ಹತ್ತಿಸಲು ಹರಸಾಹಸ)
ಹೊನ್ನಾವರ – ತಾಲೂಕಿನಲ್ಲಿ ಅನೇಕ ಕಡೆ ಕಾಂಕ್ರೀಟ್ ರಸ್ತೆಗಳು ನಿರ್ಮಾಣವಾಗುತ್ತಿದ್ದು ಜನರ ಬಹುದಿನದ ಬೇಡಿಕೆಗಳು ಈಡೇರುತ್ತಿರುವ ಖುಷಿ ಒಂದೆಡೆಯಾದರೆ ರಸ್ತೆ ಮಾಡುವ ಗುತ್ತಿಗೆದಾರರು ಸೈಡ್ ಸೋಲಿಂಗ್ ಮಾಡದೇ ಸತಾಯಿಸುತ್ತಿರುವುದು ಜನರ ಅಸಮದಾನಕ್ಕೆ ಕಾರಣವಾಗುತ್ತಿದೆ.
ರಸ್ತೆ ನಿರ್ಮಿಸಿ ತಿಂಗಳುಗಳೇ ಉರುಳಿದರೂ ರಸ್ತೆಯಂಚಿಗೆ ಮಣ್ಣು ಹಾಕಲು ಗುತ್ತಿಗೆದಾರರು ಮುಂದಾಗುತ್ತಿಲ್ಲ. ಇದರಿಂದ ಬಾರೀ ವಾಹನಗಳಿಗೆ ಅಷ್ಟೇನು ಸಮಸ್ಯೆ ಎನಿಸದಿದ್ದರೂ ಬೈಕ್, ರಿಕ್ಷಾ, ಬೊಲೆರೊದಂತ ಸಣ್ಣಪುಟ್ಟ ವಾಹನ ಚಾಲಕರಿಗೆ ಅಪಾಯವನ್ನುಂಟುಮಾಡುತ್ತಿದೆ. ಒಂದೆ ವಾಹನ ಚಲಿಸುವಾಗ ತೊಂದರೆ ಇಲ್ಲವಾದರೂ ಎದುರಿನಿಂದ ಯಾವುದಾದರೂ ವಾಹನ ಬಂದಾಗ ಬದಿಗೆ ಸರಿದು ಆ ವಾಹನಕ್ಕೆ ಮುಂದೆ ಸಾಗಲು ಅನುವುಮಾಡಿಕೊಡುವುದಕ್ಕೆ ಸಾಧ್ಯವಾಗುತ್ತಿಲ್ಲ ಎನ್ನುವ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.
ಕೆಲವೊಮ್ಮೆ ಅಚಾನಕ್ಕಾಗಿ ಯಾರಾದರೂ ರಸ್ತೆಯಿಂದ ವಾಹನವನ್ನು ಕೆಳಗಿಳಿಸಿದರೂ ಮತ್ತೆ ರಸ್ತೆಗೆ ಹತ್ತಿಸಲು ನಾಲ್ಕೈದು ಮಂದಿ ಹಿಂಬದಿಯಿಂದ ನೂಕಬೇಕು ಇಲ್ಲವೇ ಕ್ರೇನ್ ತರಬೇಕು. ಈ ಬಗ್ಗೆ ಗುತ್ತಿಗೆದಾರರು ನಿರ್ಲಕ್ಷ್ರ್ಯ ತೋರಿದರೂ ಇಂಜನಿಯರ್ಗಳಾದರೂ ಅವರಿಗೆ ಬುದ್ಧಿ ಹೇಳಿ ಸೈಡ್ ಸೋಲಿಂಗ್ ಮಾಡದಿದ್ದರೆ ಬಿಲ್ ಮಾಡುವುದಿಲ್ಲ ಎಂದು ಪಟ್ಟು ಹಿಡಿದರೆ ಎಲ್ಲಾ ಗುತ್ತಿಗೆದಾರರೂ ತಮ್ಮ ಕೆಲಸವನ್ನು ಸರಿಯಾಗಿಯೇ ಮಾಡುತ್ತಿದ್ದರು. ಈ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು ಎನ್ನುವ ಒತ್ತಾಯಕೇಳಿಬರುತ್ತಿದೆ.
ಈ ಬಗ್ಗೆ ಲೋಕೋಪಯೋಗಿ ಇಲಾಖೆಯ ಇಂಜನಿಯರುಗಳನ್ನು ವಿಚಾರಿಸಿದರೆ ಕಾಂಕ್ರೀಟ್ ರಸ್ತೆಗಳು ನೆಲಮಟ್ಟದಿಂದ 8 ಇಂಚು ಎತ್ತರ ಇರುವುದರಿಂದ ವಾಹನ ಸವಾರರಿಗೆ ತೊಂದರೆಯಾಗುವುದು ನಿಜ. ನಮ್ಮ ಇಲಾಖೆಯಿಂದ ನಿರ್ಮಿಸಿದ ರಸ್ತೆಗಳಿಗೆ ಸೈಡ್ ಸೋಲಿಂಗ್ ಮಾಡಿಸಿದ್ದೇವೆ. ಭೂ ಸೇನಾ ನಿಗಮ ಹಾಗೂ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲೂ ರಸ್ತೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಎಲ್ಲೆಲ್ಲಿ ಈ ರೀತಿಯ ತೊಂದರೆಯಾಗಿದೆ ಎನ್ನುವ ಮಾಹಿತಿಯಿಲ್ಲ ಎನ್ನುತ್ತಿದ್ದಾರೆ.
ನೆಲಮಟ್ಟಕ್ಕೆ ಕಾಂಕ್ರೀಟ್ ರಸ್ತೆ ನಿರ್ಮಿಸಲು ತೊಡಕೇನು..?
ಎಲ್ಲಿಯೇ ನೂತನ ರಸ್ತೆ ನಿರ್ಮಾಣವಾದರೂ ಮೊದಲಿದ್ದ ರಸ್ತೆಗೆ ಕಾಂಕ್ರೀಟಿಕರಣ ಅಥವಾ ಡಾಂಬರೀಕರಣ ನಡೆಯುತ್ತದೆಯೇ ಹೊರತು ಹೊಸ ಮಾರ್ಗದ ನಿರ್ಮಾಣವೇನೂ ಆಗುತ್ತಿಲ್ಲ. ಹದಗೆಟ್ಟ ರಸ್ತೆಯನ್ನು ಆರರಿಂದ 8 ಇಂಚು ಆಳಕ್ಕೆ ಗುಂಡಿತೋಡಿ ಜಲ್ಲಿ ಕಲ್ಲುಗಳಿಂದ ಸೋಲಿಂಗ್ ಮಾಡಿ ಅದರಮೇಲೆ ಕಾಂಕ್ರೀಟ್ ರಸ್ತೆ ನಿರ್ಮಿಸಿದರೆ ಸೈಡ್ ಸೋಲಿಂಗ್ ಅವಶ್ಯಕತೆಯೇ ಇರುವುದಿಲ್ಲ ಈ ಬಗ್ಗೆ ತಾಂತ್ರಿಕ ವರ್ಗ ಯೋಚಿಸಬೇಕು ಎನ್ನುವ ಸಲಹೆ ಸಾರ್ವಜನಿಕರದ್ದಾಗಿದೆ.
[ಎಲ್ಲಿಯೇ ಕಾಂಕ್ರೀಟ್ ರಸ್ತೆ ನಿರ್ಮಿಸಿದರೂ 21 ದಿನಗಳ ಕಾಲ ವಾಹನ ಸಂಚಾರಕ್ಕೆ ಅವಕಾಶಮಾಡಿಕೊಡುವುದಿಲ್ಲ. ಲೋಕೋಪಯೋಗಿ ಇಲಾಖೆಯಿಂದ ನಿರ್ಮಿಸಿದ ಎಲ್ಲಾ ರಸ್ತೆಗಳಿಗೂ ಸೈಡ್ ಸೋಲಿಂಗ್ ಮಾಡಿಸಿದ್ದೇವೆ. ಲ್ಯಾಂಡ್ ಆರ್ಮಿ ಮತ್ತು ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲೂ ರಸ್ತೆ ನಿರ್ಮಾಣವಾಗುತ್ತಿದ್ದು ಅಲ್ಲಿ ಸೈಡ್ಸೋಲಿಂಗ್ ಮಾಡಿಸಿದ್ದಾರೋ ಇಲ್ಲವೋ ನಮಗೆ ಮಾಹಿತಿ ಇಲ್ಲ – ಯೋಗಾನಂದ, ಇಂಜನಿಯರ್ ಲೋಕೋಪಯೋಗಿ ಇಲಾಖೆ]
[ಗಾಣಗೇರಿ, ಕಪ್ಪೆಕೆರೆ, ಕೆಂಚಗಾರ ಮೊದಲಾದ ಕಡೆ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿ ಹಲವು ದಿನಗಳಾದರೂ ಸೈಡ್ ಸೋಲಿಂಗ್ ಮಾಡಿಲ್ಲ. ಇದರಿಂದ ಸಣ್ಣ ಸಣ್ಣ ವಾಹನ ಚಾಲಕರಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ನಾವು ಅಭಿವೃದ್ಧಿ ಕೆಲಸವನ್ನು ವಿರೋಧಿಸುವುದಿಲ್ಲ ಆದರೆ ಮಾಡಿದ ಕೆಲಸವನ್ನು ಚೊಕ್ಕವಾಗಿ ಚೆಂದವಾಗಿ ಮಾಡಿ ಎಂದು ಕೇಳುತ್ತಿದ್ದೇವೆ ಅಷ್ಟೇ – ಸುಬ್ರಾಯ ನಾಯ್ಕ ,ಕವಲಕ್ಕಿ]
Leave a Comment