ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು ಎನ್ನುವುದು ಡಿವಿಜಿಯವರ ಕಗ್ಗದ ಪ್ರಸಿದ್ಧ ಸಾಲುಗಳು.. ಜಾನುವಾರಗಳ ಮೇವಿನ ಸಮಸ್ಯೆಯಿಂದ ಕಂಗೆಟ್ಟಿದ್ದ ಕರಾವಳಿಯ ರೈತರ ಪಾಲಿಗೆ ಬೆಟ್ಟದಲ್ಲಿನ ಹುಲ್ಲು (ಕರಡ) ಜಾನುವಾರುಗಳ ಮೇವು ಹುಲ್ಲಿಗೆ ಪರ್ಯಾಯವಾಗುತ್ತಿದೆ.

ಭೂಮಿಗೆ ಬಂಗಾರದ ಬೆಲೆ ಬಂದ ನಂತರ ಭತ್ತ ಬೆಳೆಯುತ್ತಿದ್ದ ಗದ್ದೆಗಳೂ ಅಧಿಕಾರಿಗಳ ಕೃಪಾಕಟಾಕ್ಷದಿಂದ ಸುಲಭವಾಗಿ ಕೃಷಿಯೇತರ ಭೂಮಿಯ ಪಟ್ಟ ಪಡೆದುಕೊಂಡು ರಿಯಲ್ ಎಸ್ಟೇಟ್ ಕುಳಗಳ ಪಾಲಾಗುತ್ತಿದೆ. ಇನ್ನೊಂದೆಡೆ ಭತ್ತದ ಬೆಳೆಗಿಂತ ಲಾಭದಾಯಕವೆನಿಸಿರುವ ವಾಣಿಜ್ಯಬೆಳೆ ಅಡಿಕೆಯತ್ತ ರೈತರ ಆಕರ್ಷಣೆಯೂ ಗದ್ದೆಗಳು ಮಾಯವಾಗುವುದಕ್ಕೆ ಕಾರಣವಾಗಿದೆ. ಇವೆಲ್ಲವುಗಳ ನಡುವೆಯೂ ಅಸ್ಥಿತ್ವ ಉಳಿಸಿಕೊಂಡಿರುವ ಅಲ್ಪ ಸ್ವಲ್ಪ ಗದ್ದೆಗಳಲ್ಲಿ ಭತ್ತ ಬೆಳೆಯುವ ರೈತರು ತಾವು ಬೆಳೆದ ಭತ್ತದ ಅಕ್ಕಿಯನ್ನಾದರೂ ಮಾರುತ್ತಾರೆ ಹೊರತು ಹುಲ್ಲನ್ನು ಮಾತ್ರ ಮಾರುವುದಕ್ಕೆ ಮುಂದಾಗುತ್ತಿಲ್ಲ. ಪರಿಣಾಮ ಹೈನುಗಾರಿಕೆಗಾಗಿ ಅಥವಾ ತೋಟಕ್ಕೆ ಗೊಬ್ಬರವಾದರೂ ಆಗುತ್ತದೆ ಎನ್ನುವ ಕಾರಣಕ್ಕಾಗಿಯಾಗಲೀ ಜಾನುವಾರುಗಳನ್ನು ಸಾಕಲು ಮುಂದಾದವರಿಗೆ ವರ್ಷವಿಡೀ ಸಾಕಾಗುವಷ್ಟು ಮೇವನ್ನು ಹೊಂದಿಸುವುದೇ ಸವಾಲಿನ ಕೆಲಸವಾಗಿಬಿಟ್ಟಿದೆ.
ಸಾಗರ ಶಿವಮೊಗ್ಗ, ಹಾವೇರಿ ಮುಂತಾದ ಕಡೆಯಿಂದ ಘಾಟಿ ಹುಲ್ಲನ್ನು ಕರಾವಳಿಗೆ ಪೂರೈಸುವವರ ಸಂಖ್ಯೆ ಸಾಕಷ್ಟಿದೆ. ಆದರೆ ದುಬಾರಿ ಬೆಲೆ ಮತ್ತು ಜಾನುವಾರುಗಳು ಘಾಟಿ ಹುಲ್ಲನ್ನು ಅರ್ಧಂಬರ್ದ ತಿಂದು ಉಳಿದಿದನ್ನು ಕಾಲಡಿಗೆ ಹಾಕುತ್ತವೆ ಎನ್ನುವ ಕಾರಣಕ್ಕೆ ಖರೀದಿಗೆ ಹಿಂದೇಟು ಹಾಕುತ್ತಾರೆ. ಮೇವಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರವೆನ್ನುವಂತೆ ಇಂದು ಹೆಚ್ಚಿನ ರೈತರು ಮಳೆಗಾಲದಲ್ಲಿ ಗುಡ್ಡದಲ್ಲಿ ಬೆಳೆದ ಈಗಷ್ಟೇ ಹಣ್ಣಾಗಿ ಒಣಗುತ್ತಿರುವ ಕರಡವನ್ನು ಕೊಯ್ದು ಹೊರೆಮಾಡಿಕೊಂಡು ಸಾಗಿಸುತ್ತಿರುವುದು ಕಂಡುಬರುತ್ತಿದೆ.

ಯಾರ ಆರೈಕೆಯಿಲ್ಲದೇ ಬೆಳೆದ ಕರಡದ ರಾಶಿಯನ್ನು ಹಾಗೇ ಬಿಟ್ಟರೆ ಕಾಡ್ಗಿಚ್ಚಿಗೆ ಆಹ್ವಾನ ಕೊಟ್ಟಂತಾಗುತ್ತದೆ ಎನ್ನುವ ಕಾರಣಕ್ಕೆ ಬಹುತೇಕ ಕಡೆ ಅರಣ್ಯ ಇಲಾಖೆಯವರೇ ಬೆಂಕಿ ಹಚ್ಚಿ ಹುಲ್ಲನ್ನು ಸುಡುತ್ತಾರೆ. ಸುಟ್ಟು ಹಾಕುವುದರಿಂದ ಯಾರಿಗೂ ಪ್ರಯೋಜನವಿಲ್ಲ ಅದನ್ನೇ ಕೊಯ್ದು ಸಂಗ್ರಹಿಸಿಟ್ಟುಕೊಂಡರೆ ಒಂದೆರಡು ತಿಂಗಳ ಮೇವಿಗಾದರೂ ಸಹಾಯವಾಗುತ್ತದೆ ಎನ್ನುವ ಯೋಚನೆಯೊಂದಿಗೆ ರೈತರು ಕರಡ ಕೊಯ್ಯಲು ಮುಂದಾಗುತ್ತಿದ್ದಾರೆ.
Leave a Comment