ಹೊನ್ನಾವರ : ತಾಲೂಕಿನ ಹಿರಿಯ ಯಕ್ಷಗಾನ ಕಲಾವಿದ ಹಡಿನಬಾಳ ಶ್ರೀಪಾದ ಹೆಗಡೆ(67)ಯವರು ಅನಾರೋಗ್ಯದಿಂದ ಗುರುವಾರ ಇಹಲೋಕ ತ್ಯಜಿಸಿದರು.
ಇವರು ಕಳೆದ ವರ್ಷ ಆಕಸ್ಮಿಕವಾಗಿ ಬೈಕ್ ಅಪಘಾತಕ್ಕೊಳಗಾಗಿ ಮಿದುಳಿನ ಶಸ್ತ್ರಚಿಕಿತ್ಸೆಗೊಳಗಾಗಿದ್ದರು.1953 ರಂದು ಜನಿಸಿದ ಶ್ರೀಪಾದ ಹೆಗಡೆ ಎಸ್‍ಎಸ್‍ಎಲ್‍ಸಿ ವರೆಗೆ ಶಿಕ್ಷಣ ಪಡೆದಿದ್ದರು. 1976, 77 ರಲ್ಲಿ ಗುಂಡಬಾಳಾ ಮುಖ್ಯಪ್ರಾಣ ದೇವರ ಸನ್ನಿಧಿಯಲ್ಲಿ ನಡೆದ ಹರಿಕೆ ಬಯಲಾಟದ ವೇಳೆ ಯಕ್ಷಗಾನಕ್ಕೆ ಪ್ರವೇಶಿಸಿದ್ದರು. ಬಳಿಕ ಅಮೃತೇಶ್ವರಿ, ಹಿರೇಮಹಾಲಿಂಗೇಶ್ವರ ಮೇಳ, ಪಂಚಲಿಂಗೇಶ್ವರ ಮೇಳ ಶಿರಸಿ, ಪೆರ್ಡೂರು, ಬಚ್ಚಗಾರು, ರಾಮನಾಥೇಶ್ವರ, ಮಂದಾರ್ತಿ, ಶಿರಸಿ ಮಾರಿಕಾಂಬ, ಸಾಲಿಗ್ರಾಮ, ಇಡಗುಂಜಿ, ನೀಲಾವರ ಮೇಳದಲ್ಲಿ ಕಲಾ ಸೇವೆ ಸಲ್ಲಿಸಿದ್ದರು.

ಪ್ರಸ್ತುತ ಅತಿಥಿ ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದ ಇವರು ತಾಲೂಕಿನ ಕೊಂಡಾಕುಳಿಯಲ್ಲಿ ಕುಟುಂಬಸ್ಥರೊಂದಿಗೆ ವಾಸವಾಗಿದ್ದರು. ಪ್ರಮುಖ ರಾಜ ವೇಷಗಳು, ಗಂಭೀರ ಪಾತ್ರಗಳು ಹಾಗೂ ಹಾಸ್ಯಪಾತ್ರಗಳಾದ ಬ್ರಾಹ್ಮಣ, ಬಾಗಿಲದೂತ, ವನಪಾಲ, ಅಜ್ಜಿ, ಮಂಥರೆ, ಕಪ್ಪದದೂತ, ಕಾಶಿಮಾಣಿ, ಸ್ತ್ರೀಪಾತ್ರದಲ್ಲಿ ಚಿತ್ರಾಂಗದೆ, ಅಂಬೆ, ಬಣ್ಣದ ವೇಷದಲ್ಲಿ ಘೋರ ಶೂರ್ಪನಖಿ, ಹಾಗೂ ಇನ್ನಿತರ ಪ್ರಮುಖ ಪಾತ್ರಗಳಲ್ಲಿಯೂ ಕಾಣಿಸಿಕೊಂಡು ಸೈ ಎನಿಸಿಕೊಂಡಿದ್ದರು.
ಎಲ್ಲ ಪಾತ್ರಕ್ಕೂ ಸೈ ಎನಿಸಿಕೊಂಡ ವೀರಳಾತೀವಿರಳ ಯಕ್ಷಗಾನ ಕಲಾವಿದರಲ್ಲಿ ಹಡಿನಬಾಳ ಶ್ರೀಪಾದ ಹೆಗಡೆಯವರು ಪ್ರಮುಖರು. ಭಿನ್ನವಿಭಿನ್ನ ಪಾತ್ರಗಳನ್ನು ಮಾಡಿ ಯಕ್ಷರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಖ್ಯಾತ ಕಲಾವಿದರಾಗಿದ್ದರು.
ಇಡಗುಂಜಿ ಮೇಳದಲ್ಲಿ ಹಲವಾರು ವರುಷದಿಂದ ಅನೇಕ ಪ್ರಮುಖ ಪಾತ್ರನಿರ್ವಹಣೆ ಮಾಡಿದ್ದು ,ಮಂಡಳಿಯ ಸಂಘಟನೆಗೆ ಆಪ್ತರಾಗಿ ಒದಗಿದವರು. ತನ್ನ ಪಾತ್ರಕ್ಕೆ ವ್ಯಕ್ತಿತ್ವಕ್ಕೆ ಗೌರವತಂದ ಒಬ್ಬ ಧಿಮಂತ ಕಲಾವಿದರು. ಬಂದ ಸಂಭಾವನೆಯನ್ನ ಬಹಳ ಗೌರವದಿಂದ ಖುಷಿಯಿಂದ ಸ್ವೀಕರಿಸುವ ಅವರ ಈ ಗುಣ ಇಂದು ಅತ್ಯಂತ ವಿರಳ.

ವೈಯಕ್ತಿಕ ಜೀವನದಲ್ಲಿ ದೈವಭಕ್ತರು, ಗುರುಭಕ್ತರೂ ಆಗಿ ನಿತ್ಯ ನೈಮಿತ್ತಿಕ ಕಾರ್ಯದಲ್ಲಿ ಎಷ್ಟೇ ಕಷ್ಟಬಂದರೂ ಬಿಡದೇ ನಡೆಸಿಕೊಂಡು ಬಂದವರು. ಹಲವಾರು ಮೇಳದಲ್ಲಿ ಕಲಾವಿದರಾಗಿ ದುಡಿದರು. ಎಲ್ಲಿಯೂ ತನ್ನ ವ್ಯಕ್ತಿತ್ವಕ್ಕೆ ಕಳಂಕ ತಂದುಕೊಂಡವರಲ್ಲ. ತಾನಾಯಿತು, ತನ್ನ ಕಸುಬಾಯಿತು ಎಂಬಂತೆ ಇದ್ದವರು. ರಂಗಸ್ಥಳದಲ್ಲಿ ಶ್ರೀಪಾದ ಹೆಗಡೆಯವರು ಅತ್ಯಂತ ತನ್ಮಯತೆಯಿಂದ ಪಾತ್ರ ನಿರ್ವಹಣೆ ಮಾಡುವುದು ಅವರ ಹೆಗ್ಗಳಿಕೆ. ಅವರನ್ನ ಹಲವಾರು ಸಂಘಟನೆಗಳು ಸನ್ಮಾನಿಸಿವೆ. ಕರ್ನಾಟಕ ಯಕ್ಷಗಾನ ಅಕಾಡಮಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಒಲಿದು ಬಂದಿದೆ.ಶುಕ್ರವಾರ ಬೆಳಿಗ್ಗೆ ಹಡಿನಬಾಳ ಸ್ವಗ್ರಹದ ಸನಿಹ ಅಂತ್ಯಸಂಸ್ಕಾರ ನೆರವೇರಿತು
Leave a Comment