ಪಶು ಪಕ್ಷಿಗಳಲ್ಲಿಯೂ ಮಧುಮೇಹವೇ? ನಿಜ. ಅವುಗಳಲ್ಲಿಯೂ ಸಹ ಮಧುಮೇಹ ಬರುತ್ತದೆ. ಅವುಗಳಿಗೂ ಸಹ ಸಾಕಷ್ಟು ವ್ಯಾಯಾಮ, ಆಹಾರದಲ್ಲಿ ಪಥ್ಯ, ಇತ್ಯಾದಿ ಸಲಹೆಗಳನ್ನು ಪಶುವೈದ್ಯರು ನೀಡಿಯೇ ನೀಡುತ್ತಾರೆ. ಸಾಕುಪ್ರಾಣಿಗಳಿಗೇನೋ ಹೊಸ ರೀತಿಯ ಜೀವನಕ್ರಮದಿಂದ ಮಧುಮೇಹ ಬರಬಹುದು. ಮ್ರಗಾಲಯದಲ್ಲಿ ಬಂಧಿತ ಕಾಡು ಪ್ರಾಣಗಳಿಗೆ ಕ್ರತಕ ಜೀವನ ಕ್ರಮದಿಂದ ಬರಬಹುದು. ಆದರೆ ಕಾಡಿನಲ್ಲ ಸ್ವಚ್ಛಂದವಾಗಿರುವ ಕಾಡು ಪ್ರಾಣಿಗಳಿಗೆ ಅದು ಬರುತ್ತದೆಯೇ? ಎಂದು ಕೇಳಿದರೆ ಉತ್ತರ “ಹೌದು”. ಕಾಡುಪ್ರಾಣಿಗಳಲ್ಲಿಯೂ ಸಹ ಮಧುಮೇಹ ಕಂಡುಬ0ದಿದೆ. ಅಂದರೆ ಈ ಕಾಯಿಲೆ ಯಾರನ್ನೂ ಬಿಟ್ಟಿಲ್ಲ. ಹಾಗಿದ್ದರೆ ಹೇಗೆ ಈ ಮಧುಮೇಹ ಬರುತ್ತದೆ ಎಂಬ ಬಗ್ಗೆ ಸಂಕ್ಷಿಪ್ತವಾಗಿ ತಿಳಿಯೋಣವೇ?ಮಧುಮೇಹ ಎಂದರೇನು?ಮಧುಮೇಹ ನಿಮ್ಮ ರಕ್ತದಲ್ಲಿ ಗ್ಲುಕೋಸ್ ಅಥವಾ ಸಕ್ಕರೆ ಮಟ್ಟ ತುಂಬಾ ಅಧಿಕವಾಗಿರುವ ಒಂದು ಕಾಯಿಲೆ.
ಶರೀರದಲ್ಲಿ ಮೇದೋಜೀರಕಾಂಗದಿ೦ದ ಸಾಕಷ್ಟು ಇನ್ಸುಲಿನ್ ಹಾರ್ಮೋನು ಉತ್ಪಾದಿಸದಿದ್ದರೆ ಅಥವಾ ದೇಹವು ಇನ್ಸುಲಿನ್ಗೆ ಸರಿಯಾಗಿ ಸ್ಪಂಧಿಸದೇ ಇದ್ದಲ್ಲಿ ಮಧುಮೇಹ ಉಂಟಾಗುತ್ತದೆ. ದೇಹದಲ್ಲಿರುವ ಮೇದೋಜೀರಕಾಂಗದಲ್ಲಿರುವ ಲಾಂಗರ್ ಹಾನ್ಸ್ ಕಿರುದ್ವೀಪದಲ್ಲಿನ ಬೀಟಾ ಜೀವಕೋಶಗಳು ಇನ್ಸುಲಿನ್ ಎಂಬ ಹಾರ್ಮೋನನ್ನು ಉತ್ಪಾದಿಸುತ್ತದೆ. ದೇಹದಲ್ಲಿನ ಕೋಟ್ಯಾಂತರ ಜೀವಕೋಶಗಳಿಗೆ ಸಹಸ್ರಾರು ಕ್ರಿಯೆಗಳನ್ನು ನಡೆಸಲು ಶಕ್ತಿಯ ಆಗರವಾಗಿ ಗ್ಲುಕೋಸ್ ಬೇಕೇ ಬೇಕು. ಈ ಎಲ್ಲಾ ಜೀವಕೋಶಗಳ ಮೇಲ್ಪದರದಲ್ಲಿ ಇನ್ಸುಲಿನ್ ಸ್ಪಂದಕಗಳು ಅಥವಾ ರಿಸೆಪ್ಟಾರುಗಳು ಇದ್ದೇ ಇರುತ್ತವೆ. ಇನ್ಸುಲಿನ್ ಈ ಸ್ಪಂಧಕದ ಜೊತೆ ಬಂಧನಗೊ೦ಡಾಗ ಗ್ಲುಕೋಸ್ ಜೀವಕೋಶದೊಳಗೆ ನುಗ್ಗುತ್ತದೆ. ಒಂದು ಅರ್ಥದಲ್ಲಿ ಇನ್ಸುಲಿನ್ ಜೀವಕೋಶಗಳಿಗೆ ಸಕ್ಕರೆ ಅಂಶವನ್ನು ಸರಬರಾಜು ಮಾಡುವ ದ್ವಾರಪಾಲಕನಂತೆ ಕೆಲಸ ಮಾಡುತ್ತದೆ. ಗ್ಲುಕೋಸ್ ಅಂಶ ಜೀವಕೋಶದ ಹತ್ತಿರ ಬಂದ ಕೂಡಲೇ ಅದನ್ನು ಲಬಕ್ಕನೇ ಒಳಗೆ ದಬ್ಬುವುದು ಇನ್ಸುಲಿನ್ ಕೆಲಸ. ಆದರೆ ಮಧುಮೇಹ ಕಾಯಿಲೆಯಲ್ಲಿ ದೇಹದ ಜೀವಕೋಶಗಳು ಇನ್ಸುಲಿನ್ ವಿರುದ್ಧ ಬಂಡೆದ್ದು ಅದರ ಮಾತೇ ಕೇಳುವುದಿಲ್ಲ.
ಜೀವಕೋಶದ ಮೇಲಿನ ಸ್ಪಂಧಕಗಳು ಇನ್ಸುಲಿನ್ ಕ್ರಿಯೆಗೆ ಪ್ರತಿಕ್ರಿಯೆಯನ್ನೇ ತೋರದೇ ಮುಗುಮ್ಮಾಗಿ ಮುಷ್ಕರ ಮಾಡುತ್ತವೆ. ಮಧುಮೇಹದಲ್ಲಿ ಕೆಲವೊಮ್ಮೆ ಇನ್ಸುಲಿನ್ ಉತ್ಪಾದನೆಯೂ ಸಹ ಸಾಕಾಗುವಷ್ಟು ಇರುವುದಿಲ್ಲ. ಜೀವಕೋಶಗಳಿಗೆ ಅವಶ್ಯವಿರುವ ಗ್ಲುಕೋಸ್ ಅಂಶ ರಕ್ತದೊಳಗೆ ಸಾಕಷ್ಟು ಇದ್ದರೂ ಸಹ ಇವುಗಳನ್ನು ಬಳಸುವ ಬಗ್ಗೆ ಅವು ನಿಸ್ಸಹಾಯಕವಾಗುತ್ತವೆ. ಇದರಿಂದ ಶರೀರದ ರಕ್ತದಲ್ಲಿನ ಗ್ಲುಕೋಸ್ ಮಟ್ಟ ಅನಿಯಂತ್ರಿತವಾಗಿ ಏರುತ್ತಾ ಹೋಗುತ್ತದೆ. ಶರೀರದಲ್ಲಿ ಗ್ಲುಕೋಸ್ ಅಂಶ ಸಾಕಷ್ಟು ಇದ್ದರೂ ಸಹ, ಅವುಗಳು ಜೀವಕೋಶದೊಳಗೆ ದಬ್ಬಲ್ಪಡದೇ ಇರುವುದರಿಂದ ಮಧುಮೇಹ ಕಾಯಿಲೆ ಉಂಟಾಗುತ್ತದೆ. ಒಂದು ಹಂತದಲ್ಲಿ ಸಕ್ಕರೆಯ ಮಟ್ಟ ಜಾಸ್ತಿಯಾಗಿ ಅದು ಮೂತ್ರದಲ್ಲೂ ವಿಸರ್ಜನೆಯಾಗುವುದರಿಂದ ಮಧುಮೇಹವನ್ನು “ಸಕ್ಕರೆ ಕಾಯಿಲೆ” ಎಂದೂ ಕರೆಯುತ್ತಾರೆ.ಮಧುಮೇಹದಲ್ಲಿ ಎರಡು ವಿಧ. ಮೊದಲ ವಿಧದಲ್ಲಿ ಮೇದೋಜೀರಕ ಗೃಂಥಿಯ ಲ್ಯಾಂಗರ್ಹ್ಯಾನ್ಸ್ ಕಿರುದ್ವೀಪದ ಬೀಟಾ ಕೋಶಗಳು ಸಾಕಷ್ಟು ಪ್ರಮಾಣದಲ್ಲಿ ಇನ್ಸುಲಿನ್ ಹಾರ್ಮೋನನ್ನು ಉತ್ಪಾದನೆಮಾಡಲು ವಿಫಲಗೊಳ್ಳುತ್ತವೆ. ಇದನ್ನು ಮಧುಮೇಹದ ಮೊದಲ ಮಾದರಿ ಎನ್ನಬಹುದು. ಇದನ್ನು ಇನ್ಸುಲಿನ್ ಅವಲಂಬಿತ ಮಧುಮೇಹ ಎಂದೂ ಕರೆಯಬಹುದು.ಎರಡನೇ ವಿಧದಲ್ಲಿ ದೇಹದಲ್ಲಿ ಇನ್ಸುಲಿನ್ ಇದ್ದರೂ ಸಹ ಜೀವಕೋಶಗಳ ಮೇಲಿರುವ ಇನ್ಸುಲಿನ್ ಸ್ಪಂಧಕಗಳು ಕಾರ್ಯನಿರ್ವಸಿದೆ ಗ್ಲುಕೋಸ್ ಒಳಗೆ ತಳ್ಳಲ್ಪಡುವುದಿಲ್ಲ.
ಇದಕ್ಕೆ ಮಧುಮೇಹದ ಎರಡನೇ ಮಾದರಿ ಎನ್ನಬಹುದು. ಮನುಷ್ಯನಲ್ಲಿ ಈ ವಿಧದ ಕಾಯಿಲೆ ಬಹಳ ಸಾಮಾನ್ಯ. ಒಂದಷ್ಟು ಅಂಕಿ ಅಂಶಗಳತ್ತ ಗಮನಹರಿಸುವುದಾದರೆ 40 ವರ್ಷಕ್ಕಿಂತಲೂ ಅಧಿಕ ವಯಸ್ಸಿನ ಜನ ಇದಕ್ಕೆ ಸಾಮಾನ್ಯವಾಗಿ ತುತ್ತಾಗುತ್ತಿದ್ದು, ಪ್ರಪಂಚದ 366 ಮಿಲಿಯ ಜನ ಈ ರೋಗಕ್ಕೆ ತುತ್ತಾಗಿದ್ದಾರೆ. ಪ್ರಪಂಚದಲ್ಲಿ ಜನರ ಮರಣಕ್ಕೆ ಇದು ಏಳನೇ ಮುಂಚೂಣಿ ಕಾರಣವಂತೆ! ಚೀನಾ ದೇಶದಲ್ಲಿ ಅತಿ ಹೆಚ್ಚು ಅಂದರೆ 116 ಮಿಲಿಯ ಜನ ಮಧುಮೇಹಕ್ಕೆ ತುತ್ತಾಗಿದ್ದರೆ ಭಾರತವೂ ಸಹ ಅಗ್ರಮಾನ್ಯ ಸ್ಥಾನದಲ್ಲಿದೆ ಎಂಬುದು ಹೆಮ್ಮೆಯಿಂದ ಹೇಳಿಕೊಳ್ಳುವ ಸಂಗತಿಯಲ್ಲ. ಈ ಸಂಖ್ಯೆ ಜಾಸ್ತಿಯಾಗಲು ಜನರ ಅನಿಯಮಿತ ಆಹಾರ ವಿಧಾನ, ಮಾನಸಿಕ ಒತ್ತಡ, ಶರೀರಕ್ಕೆ ವ್ಯಾಯಾಮವಿಲ್ಲದಿರುವುದು ಮುಖ್ಯ ಕಾರಣವಾದರೆ ಬಹಳ ಸುಲಭವಾಗಿ ಒಂದು ಹನಿ ರಕ್ತದಿಂದ ಈ ಖಾಯಿಲೆಯನ್ನು ಪತ್ತೆ ಮಾಡಲು ಸಾಧ್ಯವಿರುವುದೂ ಸಹ ರೋಗ ಸಂಖ್ಯೆ ಹೆಚ್ಚಲು ಒಂದು ಕಾರಣ. ಪ್ರಾಣಿಗಳ ಮಧುಮೇಹಪ್ರಾಣಿಗಳಲ್ಲಿ ಈ ಕಾಯಿಲೆ ಮೊದಲಿಂದ ಇದ್ದರೂ ಸಹ ಅನೇಕ ಸಹ ಪತ್ತೆಯಾಗದೇ ಹೋಗುವುದೇ ಜಾಸ್ತಿ.
ಬೊಜ್ಜುಗಟ್ಟಿದ ದೇಹ, ಭಾರೀ ಶರೀರ ತೂಕ ಹೊಂದುವ ಪ್ರಾಣಿಗಳಿಗೆ ಈ ಕಾಯಿಲೆ ಅಟಕಾಯಿಸುತ್ತದೆ. ಬೆಕ್ಕು ಮತ್ತು ನಾಯಿಗಳಲ್ಲಿ ಬಹಳ ಸಾಮಾನ್ಯವಾದ ಈ ಕಾಯಿಲೆ ಜಾನುವಾರುಗಳು, ಹಂದಿಗಳು, ಅನೇಕ ಬಗೆಯ ಕಾಡು ಪ್ರಾಣಿಗಳು ಮತ್ತು ವಿವಿಧ ಹಕ್ಕಿಗಳಲ್ಲಿ ಈ ಕಾಯಿಲೆಯನ್ನು ಗುರುತಿಸಲಾಗಿದೆ. ಕುದುರೆಗಳಲ್ಲಿ ಪದೇ ಪದೇ ಗೊರಸಿನ ಉರಿಯೂತ ಕಂಡುಬAದರೆ ಮಧುಮೇಹಕ್ಕೆ ಶಂಕಿಸಬೇಕು.
ಬೆಕ್ಕುಗಳ ಮಧುಮೇಹ:ಬೆಕ್ಕಿನಲ್ಲಿ ಈ ಕಾಯಿಲೆ ಅತ್ಯಂತ ಸಾಮಾನ್ಯ. ವಿಶ್ವ ಪ್ರಾಣಿ ಸಂಸ್ಥೆಯ ಅಧ್ಯಯನದ ಪ್ರಕಾರ 230 ಬೆಕ್ಕುಗಳಲ್ಲಿ ಒಂದು ಬೆಕ್ಕು ಈ ಕಾಯಿಲೆಗೆ ತುತ್ತಾದರೆ ನಾಯಿಗಳಲ್ಲಿ ಈ ಪ್ರಮಾಣ 308 ಕ್ಕೆ ಒಂದರ0ತಿದೆ. ಸಾಮಾನ್ಯವಾಗಿ 7.4 % ಈ ಕಾಯಿಲೆ ಬೆಕ್ಕುಗಳಲ್ಲಿದೆ. ಆಸ್ಟೆçÃಲಿಯಾದ ಬರ್ಮೀಸ್ ಬೆಕ್ಕುಗಳಲ್ಲಿ ಈ ಕಾಯಿಲೆಯನ್ನು ಬಹಳ ಸಾಮಾನ್ಯವಾಗಿ ಗಮನಿಸಲಾಗಿದ್ದು ಇದು ಶೇ: 23 ರಷ್ಟಿದೆಯಂತೆ. ಅದರಲ್ಲೂ ಸಂತಾನಹರಣ ಚಿಕಿತ್ಸೆಗೊಳಗಾದ ಬೆಕ್ಕುಗಳಲ್ಲಿ ಇದು ಬಹಳ ಸಾಮಾನ್ಯವಾದರೆ ಹೆಣ್ಣು ನಾಯಿಗಳಲ್ಲಿ ಮಧುಮೇಹ ಬಹಳ ಸಾಮಾನ್ಯವಂತೆ. ಸಾಮಾನ್ಯವಾಗಿ ದಡೂತಿ ಬೆಕ್ಕು ಮತ್ತು ನಾಯಿಗಳಲ್ಲಿ ಕಾಯಿಲೆ ಜಾಸ್ತಿಯಾದರೆ ಬಕಾಸುರನಂತೆ ಯದ್ವಾ ತದ್ವಾ ಇಲ್ಲಸಲ್ಲದ ಜಂಕ್ ಆಹಾರ ತಿಂದು ದೇಹದ ತುಂಬೆಲ್ಲಾ ಕೊಬ್ಬನ್ನು ಹೇರಿಕೊಂಡು ಕೊಬ್ಬಿಹೋದ ಪ್ರಾಣಿಗಳಲ್ಲೇ ಮಧುಮೇಹ ಜಾಸ್ತಿ. ಸಾಕಷ್ಟು ಮುಕ್ಕಿ ಸೋಮಾರಿಯಾಗಿ ವ್ಯಾಯಾಮವಿಲ್ಲದೇ ಮಲಗಿ ನಿದ್ರೆ ಹೊಡೆಯುವ ಬೆಕ್ಕುಗಳಲ್ಲಿ ಮತ್ತು ನಾಯಿಗಳಲ್ಲಿ ಈ ಕಾಯಿಲೆ ಬಹಳ ಸಾಮಾನ್ಯ.ಪ್ರಾಣಿ ಕುಲದಲ್ಲೇ ಬೆಕ್ಕುಗಳು ಮಧುಮೇಹ ಕಾಯಿಲೆಗೆ ಜಾಸ್ತಿ ತುತ್ತಾಗುವುದು.
ಬೆಕ್ಕುಗಳು ಮನುಷ್ಯನಂತೆ ಮಾದರಿ 2 ಮಧುಮೇಹಕ್ಕೆ ತುತ್ತಾಗುತ್ತವೆ. ಮಧ್ಯವಯಸ್ಕ ಬೆಕ್ಕುಗಳಲ್ಲಿ ಕಾಯಿಲೆ ಸಾಮಾನ್ಯ. ಇದಕ್ಕೆ ಅವುಗಳ ತಿಂಡಿಪೋತ ಬುದ್ಧಿಯೂ ಸಹ ಒಂದು ಕಾರಣ. ಒಡತಿಯ ಕಾಲಿಗೆ ದೇಹವನ್ನು ತಿಕ್ಕುತ್ತಾ ತಿಂಡಿ ಬೇಡುವ ಕೆಲ ಬೆಕ್ಕುಗಳು ಮಹಾ ಸೋಮಾರಿಗಳು. ಯಾವಾಗಲೋ ಮಾಂಸಾಹಾರ ಇಷ್ಟವಾದಾಗ ಬೇಟೆ ವಿದ್ಯೆಯು ಮರೆಯಬಾರದೆಂದೋ ಆಗಾಗ ಒಳ್ಳೆ ಮೂಡಿದ್ದಾಗ ಇಲಿಯನ್ನು ಬೇಟೆಯಾಡುತ್ತವೆ. ಅರೆ ಮರೆ ಸತ್ತ ಇಲಿಯನ್ನು ಒಡತಿಗೆ ತೋರಿಸಿ ತಾನೂ ಬೇಟೆಯಾಡಬಲ್ಲೆನೆಂದು ಬೀಗುತ್ತದೆ. ಇಡೀ ದಿನ ಸೋಮಾರಿಯಂತೆ ಬಿದ್ದುಕೊಂಡಿರುವುದರಿAದ ವ್ಯಾಯಾಮವಿಲ್ಲದೇ ಇರದೇ ಬೊಜ್ಜು ಬೆಳೆದು ಮಧುಮೇಹಕ್ಕೆ ತುತ್ತಾಗುತ್ತವೆ.
ರೋಗ ಲಕ್ಷಣಗಳೇನು?1. ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಜಾಸ್ತಿಯಾದಂತೆಲ್ಲ ಪ್ರಾಣಿಗೆ ನೀರಡಿಕೆ ಜಾಸ್ತಿಯಾಗುತ್ತದೆ. 2. ನೀರನ್ನು ಜಾಸ್ತಿ ಕುಡಿದಂತೆ ಮೂತ್ರದ ವಿಸರ್ಜನೆಯ ಪ್ರಮಾಣವೂ ಸಹ ಜಾಸ್ತಿಯಾಗುತ್ತದೆ. 3. ಶರೀರದ ಜೀವಕೋಶಗಳಿಗೆ ಗ್ಲುಕೋಸ್ ಸಿಕ್ಕದೇ ಪ್ರೊಟೀನ್ ಇತ್ಯಾದಿಗಳನ್ನು ಉಪಯೋಗಿಸಲಾಗದೇ ಇರುವುದರಿಂದ ಶರೀರದ ತೂಕ ಕಡಿಮೆಯಾಗುವುದು ಸಹಜ. 4. ದೇಹದಲ್ಲಿ ಗ್ಲುಕೋಸ್ ಅಂಶ ಆಗಲೇ ಜಾಸ್ತಿ ಇರುವುದರಿಂದ ಹಸಿವೇ ಆಗುವುದಿಲ್ಲ. 5. ಶಕ್ತಿಯ ಅಂಶ ಸಾಕಷ್ಟು ಇದ್ದರೂ ಸಹ ಅದು ಜೀವಕೋಶಗಳಿಗೆ ದೊರಕದೇ ಇರುವುದರಿಂದ ಮಧುಮೇಹದಲ್ಲಿ ತುಂಬಾ ಸುಸ್ತಾಗುವುದು ಸಹಜ. 6. ಆಮ್ಲೀಯತೆ ಜಾಸ್ತಿಯಾಗಿ ಹೊಟ್ಟೆಯ ಪದಗಳ ಉರಿಯೂತದಿಂದ ವಾಂತಿಯ ಲಕ್ಷಣ ಕಾಣಿಸಬಹುದು.7. ದೇಹದ ಜೀವಕೋಶಗಳಿಗೆ ಸರಿಯಾದ ಪ್ರಮಾಣದಲ್ಲಿ ಗ್ಲುಕೋಸ್ ಸಿಗದೇ ಅನಾವಶ್ಯಕ ವಸ್ತುಗಳನ್ನು ಉತ್ಪಾದಿಸುವುದರಿಂದ ನರದ ಕಣಗಳು ತೊಂದರೆಗೊಳಗಾಗುವುದರಿAದ ನೋವು ಹೆಚ್ಚುತ್ತದೆ8. ಕಣ್ಣಿನ ಜೀವಕೋಶಗಳು ತೊಂದರೆಗೊAಡು ಕಣ್ಣು ಮಂಜಾಗಬಹುದು.9. ಮೂತ್ರಜನಕಾಂಗವು ದೇಹಕ್ಕೆ ಅನವಶ್ಯವಾದ ವಸ್ತುಗಳನ್ನು ವಿಸರ್ಜಿಸಲು ಅಸಮರ್ಥಗೊಂಡು ಅದಕ್ಕೆ ಹಾನಿಯಾಗಿ ಮೂತ್ರದ ಮೂಲಕ ಗ್ಲುಕೋಸ್ ಮತ್ತು ಪ್ರೊಟೀನುಗಳು ವಿಸರ್ಜನೆಗೊಳ್ಳಬಹುದು.
10. ಜೀವಕೋಶಗಳಿಗೆ ಗ್ಲುಕೋಸ್ ಸದುಪಯೋಗ ಪಡೆಯುವ ಅವಕಾಶವಿರದೇ ಗಾಯ ವಾಸಿಯಾಗಲು ಬಹಳ ತಡವಾಗಬಹುದು.11. ಕಿವಿ ಕೇಳಿಸದಿರುವುದು, ವಾಸನಾ ಗೃಹಣ ಶಕ್ತಿ ಕಡಿಮೆಯಾಗುವುದು ಆಯಾ ಜೀವಕೋಶಗಳಿಗೆ ಆಗುವ ಹಾನಿಯಿಂದ. 12. ಕಣ್ಣಿಗೆ ಪೊರೆ ಬಂದAತೆ ಆಗಿ ಬೆಳ್ಳಗಾಗಬಹುದು.13. ಕೀಟೋನ್ ಕಾಯಗಳ ಉತ್ಪಾದನೆಯಾಗಿ ಕಿಟೋಸಿಸ್ ಸಹ ಆಗಬಹುದು.ಈ ರೀತಿಯ ಲಕ್ಷಣಗಳಿದ್ದಾಗ ಇನ್ಸುಲಿನ್ ನೀಡುವುದರ ಮೂಲಕ ಚಿಕಿತ್ಸೆ ನೀಡಬೇಕಾಗುತ್ತದೆ. ದೇಹದ ಕೊಬ್ಬನ್ನು ಕರಗಿಸುವುದೂ ಸಹ ಅಷ್ಟೇ ಮುಖ್ಯ. ಹಿತಮಿತವಾದ ಆಹಾರ, ಸೂಕ್ತ ವ್ಯಾಯಾಮ ಮತ್ತು ಸೂಕ್ತಚಿಕಿತ್ಸೆ ಬೆಕ್ಕುಗಳಿಗೆ ಅವಶ್ಯ.
ಶ್ವಾನಗಳಲ್ಲಿ ಮಧುಮೇಹ:ಶ್ವಾನಗಳಲ್ಲಿ ಒಂದನೇ ಮಾದರಿಯ ಮಧುಮೇಹ ಬಹಳ ಸಾಮಾನ್ಯ. ಇವುಗಳಲ್ಲಿ ಮೇದೋಜೀರಕಾಂಗದ ಲ್ಯಾಂಗರ್ ಹ್ಯಾನ್ಸಿನ ಕಿರುದ್ವೀಪಗಳು ತೊಂದರೆಗೊಳಗಾಗಿದ್ದು ಇನ್ಸುಲಿನ್ ಉತ್ಪಾದನೆ ಗಣನೀಯವಾಗಿ ಕಡಿಮೆಯಾಗುತ್ತದೆ. ಕೆಲವೊಮ್ಮೆ ಮಾದರಿ 2 ಮಧುಮೇಹವೂ ಸಹ ಅವುಗಳನ್ನು ಕಾಡಬಹುದು. ಮೇದೋಜೀರಕಾಂಗದ ಇನ್ಸುಲಿನ್ ಉತ್ಪಾದಿಸುವ ಜೀವಕೋಶಗಳ ವಿರುದ್ದವೇ ಪ್ರತಿಬಂಧಕ ಕಣಗಳು ಬೆಳೆದುಕೊಂಡು, ಈ ಜೀವಕೋಶಗಳ ಜೊತೆ ಹೊಡೆದಾಡಿ ಅವುಗಳನ್ನೇ ನಾಶಗೊಳಿಸಿ ತೀವ್ರ ಇನ್ಸುಲಿನ್ ಕೊರತೆಯಾಗುತ್ತದೆ.ಬೆಕ್ಕಿನಲ್ಲಿ ಮಧುಮೇಹದಿಂದ ಆಗಬಹುದಾದ ಎಲ್ಲ ತೊಂದರೆಗಳು ನಾಯಿಯಲ್ಲಾಗುತ್ತವೆ. ಜರ್ಮನ್ ಶೆಫರ್ಡ್, ಗೋಲ್ಡನ್ ರಿಟ್ರೆöÊವರ್, ಪೂಡ್ಲ್, ಡಾಶ್ ಹಂಡ್, ಸಾಮೋಯಡ್ ಇತ್ಯಾದಿ ತಳಿಯ ಶ್ವಾನಗಳು ಬಹಳ ಸಾಮಾನ್ಯವಾಗಿ ವಯಸ್ಸಾದಾಗ ಮಧುಮೇಹಕ್ಕೆ ತುತ್ತಾಗುತ್ತವೆ. ಮನೆಯಲ್ಲೇ ಕಟ್ಟುವ ವ್ಯಾಯಾಮವಿಲ್ಲದ ತಿಂಡಿಪೋತ ಡುಮ್ಮಣ್ಣ ನಾಯಿಗಳಲ್ಲಿ ಮಧುಮೇಹದ ಕಾಟ ಜಾಸ್ತಿ. ನೀರಡಿಕೆ ಜಾಸ್ತಿಯಾಗಿ ನೀರನ್ನು ಜಾಸ್ತಿ ಕುಡಿಯುವ ಇವು ಹೋದ ಬಂದಲ್ಲೆಲ್ಲಾ ಮೂತ್ರ ವಿಸರ್ಜನೆ ಮಾಡುತ್ತವೆ. ನರದೌರ್ಬಲ್ಯದಿಂದ ನಡೆದಾಡುವ ತೊಂದರೆ, ಕಿವಿ ಕೆಪ್ಪಾಗುವುದು ಇತ್ಯಾದಿಗಳೂ ಸಹಜ. ಇವೆಲ್ಲಾ ವಯೋಸಹಜ ಲಕ್ಷಣಗಳು ಎಂದು ತಿಳಿದು ಕೆಲವೊಮ್ಮೆ ಚಿಕಿತ್ಸೆ ನೀಡದೇ ನಾಯಿ ಮರಣದೆಡೆಗೆ ಸಾಗಿದ ಎಷ್ಟೋ ಘಟನೆಗಳಿವೆ. ಜಾನುವಾರುಗಳ ಮಧುಮೇಹದನ ಕರುಗಳಲ್ಲಿ ಮತ್ತು ನಾಲ್ಕು ಹೊಟ್ಟೆಯಿರುವ ರೋಮಾಂತಕ ಪ್ರಾಣಿಗಳಲ್ಲಿಯೂ ಸಹ ಮಧುಮೇಹ ವರದಿಯಾಗಿದೆ. ಆದರೆ ಅವುಗಳಲ್ಲಿ ಬರುವುದು ಮಾದರಿ 1 ಮಧುಮೇಹ. ಇವುಗಳಲ್ಲಿ ಪಿತ್ತಜನಕಾಂಗದ ಇನ್ಸುಲಿನ್ ಸ್ರವಿಸುವ ಕೋಶಗಳು ಬೇಧಿಯನ್ನುಂಟು ಮಾಡುವ ವೈರಾಣು ಕಾಯಿಲೆಯಿಂದ ನಿಷ್ಕ್ರಿಯಗೊಂಡಾಗ ಮಧುಮೇಹ ಕಾಣಿಸಿಕೊಳ್ಳುತ್ತದೆ. ಕಾಲ್ಗೊರಸು ವೇದನೆ ಇದ್ದಾಗ, ಅನೇಕ ಬಗೆಯ ಔಷಧಗಳನ್ನು ಉಪಯೋಗಿಸಿದಾಗಲೂ ಸಹ ಇನ್ಸುಲಿನ್ ಸ್ರವಿಸುವ ಕೋಶಗಳು ಹಾಳಾಗಬಹುದು. ತಳಿಬೇಧವಿಲ್ಲದೇ ಈ ಕಾಯಿಲೆ ಬರುತ್ತಿದ್ದು, ರಕ್ತದ ಗ್ಲುಕೋಸ್ ಮಟ್ಟ ತುಂಬಾ ಜಾಸ್ತಿಯಾಗುವುದನ್ನು ಗಮನಿಸಲಾಗಿದೆ. ಕಾಯಿಲೆಯ ಚಿಕಿತ್ಸೆ ದುಬಾರಿಯಾಗುವುದರಿಂದ ಈ ರೀತಿಯ ಜಾನುವಾರನ್ನು ವಿದೇಶದಲ್ಲಿ ಸುಖಮರಣಕ್ಕೆ ಈಡು ಮಾಡುತ್ತಾರೆ. ಕುದುರೆಯ ಮಧುಮೇಹಕುದುರೆಗಳಲ್ಲಿಯೂ ಸಹ ಮಧುಮೇಹ ಪತ್ತೆಯಾಗಿದ್ದು, ಮೇದೋಜೀರಕಾಂಗದ ಉರಿಯೂತ ಇದಕ್ಕೆ ಮುಖ್ಯ ಕಾರಣ. ಚಿಕ್ಕ ಮಕ್ಕಳಲ್ಲಿ ಕಾಣಬರುವ ಮಧುಮೇಹದ ಮಾದರಿಯಲ್ಲಿ ಕಾಯಿಲೆಯಿರುತ್ತಿದ್ದು, ಅನೇಕ ಸಲ ಕುದುರೆಯ ದೇಹದ ತೂಕ ಜಾಸ್ತಿಯಾಗುತ್ತದೆ. ಬಾಲದ ಬುಡದಲ್ಲಿ ಬೊಜ್ಜು ಶೇಖರಣೆಯಾಗುವುದು ಕಾಯಿಲೆಯ ಗುರುತರ ಲಕ್ಷಣ. ಕಣ್ಣು ಗುಡ್ಡೆಯು ಹೊರಗೆ ಚಾಚಿದಂತೆ ಕಾಣುವುದೂ ಸಹ ಒಂದು ವಿಶಿಷ್ಟ ಲಕ್ಷಣ. ಕುದುರೆಯ ರಕ್ತದಲ್ಲಿನ ಇನ್ಸುಲಿನ್ ಪ್ರಮಾಣದ ಪತ್ತೆ ಮಾದಬೇಕಾಗುತ್ತದೆ. ಇವುಗಳಿಗೆ ಉತ್ತಮ ಗುಣ ಮಟ್ಟದ ಆಹಾರ ಮತ್ತು ನಿಯಮಿತ ವ್ಯಾಯಾಮದಿಂದ ರೋಗ ವಾಸಿಯಾಗುತ್ತದೆ.ಕಾಡು ಪ್ರಾಣಿಗಳ ಮಧುಮೇಹ: ಕಾಡಿನಲ್ಲಿ ಸ್ವಚ್ಛಂದವಾಗಿ ಓಡಾಡಿಕೊಂಡಿರುವ ಕಾಡು ಪ್ರಾಣಿಗಳಿಗೆ ಮಾನಸಿಕ ಒತ್ತಡ ಕಡಿಮೆಯಿರುವುದರಿಂದ ಮಧುಮೇಹ ಬರುವುದು ಆಶ್ಚರ್ಯವಾದರೂ ಸತ್ಯ. ಅನೇಕ ಕಾಡು ಪ್ರಾಣಿಗಳಲ್ಲಿ ಎರಡನೇ ಮಾದರಿಯ ಮಧುಮೇಹವನ್ನು ಗುರುತಿಸಲಾಗಿದೆ. ಚಿಂಪಾAಜಿ, ಚಿರತೆ, ಮಂಗಗಳು, ರಾಕ್ ಹೈರೆಕ್ಸ್, ಸಮುದ್ರ ಸಿಂಹ, ಇತ್ಯಾದಿ ಪ್ರಾಣಿಗಳಲ್ಲಿ ಮಧುಮೇಹ ತೊಂದರೆ ಕೊಡುತ್ತದೆ. ಇವುಗಳಲ್ಲಿ ಹೃದಯ ಸಂಬAಧಿ ಕಾಯಿಲೆಗಳು ಮಧುಮೇಹದ ಕೊಡುಗೆಯಾಗಿ ಬರುತ್ತವೆ. ಮೃಗಾಲಯಗಳಲ್ಲಿರುವ ಬೆಕ್ಕಿನ ಜಾತಿಗೆ ಸೇರಿದ ಹುಲಿ, ಚಿರತೆ, ಸಿಂಹ ಇತ್ಯಾದಿ ಪ್ರಾಣಿಗಳಲ್ಲಿ ಮಧುಮೇಹ ಸಾಮಾನ್ಯವಾದರೂ ಸಹ ಕಾಡಲ್ಲೇ ಇರುವ ಈ ರೀತಿಯ ಪ್ರಾಣಿಗಳಲ್ಲಿ ಇದರ ಪ್ರಮಾಣ ಕಡಿಮೆ. ಮಧ್ಯವಯಸ್ಸಿನ ನಂತರ ಕಾಡು ಪ್ರಾಣಿಗಳನ್ನು ಕಾಡುವ ಈ ಕಾಯಿಲೆ ಅವುಗಳಲ್ಲಿ ಕುರುಡುತನ ತಂದೊಡ್ಡಬಹುದು. ಅತಿಯಾದ ಬಾಯಾರಿಕೆ ಮತ್ತು ಅತಿಮೂತ್ರವೂ ಸಹ ಒಂದು ಮುಖ್ಯ ಲಕ್ಷಣ. ಕಾಡುಪ್ರಾಣಿಗಳು ಕೆಲ ರೀತಿಯ ಸಸ್ಯಗಳ ಮೊಗ್ಗೆಗಳನ್ನು ತಿಂದು ರಕ್ತದ ಗ್ಲುಕೋಸ್ ಮಟ್ಟ ಕಡಿಮೆ ಮಾಡಿಕೊಳ್ಳುತ್ತವೆ ಎಂಬುದು ಪ್ರತೀತಿ. ಪಕ್ಷಿಗಳ ಮಧುಮೇಹಅನೇಕ ರೀತಿಯ ಪಕ್ಷಿಗಳಲ್ಲಿಯೂ ಸಹ ಮಧುಮೇಹ ಪತ್ತೆಯಾಗಿದೆ. ಹಕ್ಕಿಗಳಲ್ಲಿ ಹೆಚ್ಚಿನ ಗ್ಲುಕಗಾನ್ ಅಂಶ ಮತ್ತು ಕಡಿಮೆ ಪ್ರಮಾಣದ ಇನ್ಸುಲಿನ್ ಅಂಶ ಮಧುಮೇಹಕ್ಕೆ ಕಾರಣವಂತೆ.
ಅನೇಕ ರೀತಿಯ ಬಾತುಕೋಳಿಗಳಲ್ಲಿಯೂ ಸಹ ಈ ಕಾಯಿಲೆ ಕಾಣಿಸಿಕೊಂಡಿದೆ ಎಂದರೆ ಉತ್ಪೆçÃಕ್ಷೆ ಅಲ್ಲ. ಅತ್ಯಂತ ಚುರುಕಾಗಿರುವ, ಸದಾ ಕ್ರಿಯಾಶೀಲ ಹಕ್ಕಿಗಳಲ್ಲಿ ಮೇದೋಜೀರಕ ಗ್ರಂಥಿಯ ಉರಿಯೂತದಿಂದ ಈ ಕಾಯಿಲೆ ಬರುವುದಂತೆ. ಪಕ್ಷಿಗಳಲ್ಲಿ ರಕ್ತದ ಗ್ಲುಕೋಸ್ ಮಟ್ಟವೇ ಜಾಸ್ತಿ ಎಂದರೆ 200-400 ಮಿಲಿಗ್ರಾಂ/ಡೆಸಿಲೀಟರ್ ಇರುತ್ತದೆ. ಗ್ಲುಕೋಸ್ ಮಟ್ಟ ಮಧುಮೇಹವಾದಾಗ 600-800 ಮಿಲಿಗ್ರಾಂ/ಡೆಸಿಲೀಟರ್ ದಾಟುತ್ತದೆ. ಆದರೆ ಮೃಗಾಲಯಗಳಲ್ಲಿ ಕೂಡಿಟ್ಟ ಪಕ್ಷಿಗಳಲ್ಲಿ ಮಧುಮೇಹ ಜಾಸ್ತಿ ಎನ್ನುತ್ತದೆ ಸಂಶೋಧನೆ. ಪಕ್ಷಿಗಳನ್ನು ಸಂರಕ್ಷಣೆ ನೆಪದಲ್ಲಿ ಒಂದೆಡೆ ಕೂಡಿಹಾಕಬಾರದು ಎನ್ನುತ್ತಾರೆ ಪಕ್ಷಿಪ್ರಿಯರು.ಪ್ರಾಣಿಗಳಲ್ಲಿ ಮಧುಮೇಹದ ಪತ್ತೆಪ್ರಾಣಿಗಳಲ್ಲಿ ಮಧುಮೇಹ ಪತ್ತೆ ಹಚ್ಚುವುದು ಮನುಷ್ಯರ ಮಧುಮೇಹ ಪತ್ತೆ ವಿಧಾನ ಅನುಸರಿಸಿಯೇ. ಸಾಮಾನ್ಯವಾಗಿ ನಾಯಿಗಳಲ್ಲಿ ಮತ್ತು ಇತರ ಪ್ರಾಣಿಗಳಲ್ಲಿ ರಕ್ತದ ಗ್ಲುಕೋಸ್ ಮಟ್ಟ 80-12 ಮಿಲಿಗ್ರಾಂ/ಡೆಸಿ ಲೀಟರ್ ಇರಬೇಕು. ಆದರೆ ಮಧುಮೇಹದಲ್ಲಿ ಅದು 250-300 ಮಿಲಿಗ್ರಾಂ/ಡೆಸಿ ಲೀಟರ್ ಆಗಬಹುದು. ಗ್ಲುಕೋಸ್ ಮೂತ್ರದಲ್ಲಿ ವಿಸರ್ಜನೆಯಾಗಲು ಪ್ರಾರಂಭವಾಗುವುದು ರಕ್ತದ ಗ್ಲುಕೋಸ್ ಮಟ್ಟ 180 ಮಿಲಿಗ್ರಾಂ/ಡೆಸಿ ಲೀಟರ್ ಮೀರಿದ ನಂತರ. ಇದನ್ನು ಮೂತ್ರವನ್ನು ಬಣ್ಣಗಳು ಬದಲಾಗುವ ಕಾಗದ ತುಂಡುಗಳ ಮೂಲಕ ಪತ್ತೆ ಮಾಡಬಹುದು. ರಕ್ತದಲ್ಲಿ ಮತ್ತು ಮೂತ್ರದಲ್ಲಿ ಸಕ್ಕರೆ ಅಂಶದ ಅಳತೆ, ¥s಼À್ರಕ್ಟೋಸಮೈನ್ ಪ್ರಮಾಣ, ಗ್ಲೆöÊಕೋಸೆಟೆಡ್ ಹಿಮೋಗ್ಲೋಬಿನ್ ಇತ್ಯಾದಿ ಅಂಶಗಳ ಪ್ರಮಾಣದಲ್ಲಿ ಹೆಚ್ಚಿಗೆಯಾದರೆ ಸಿಹಿಮೂತ್ರ ಕಾಯಿಲೆಯನ್ನು ಪತ್ತೆ ಮಾಡಬಹುದು. ಅನೇಕ ಸಲ ರೋಗ ಲಕ್ಷಣಗಳ ಮೂಲಕವೂ ಸಹ ಪತ್ತೆ ಮಾದಬೇಕಾಗುತ್ತದೆ. ಕಾಡು ಪ್ರಾಣಿಗಳಲ್ಲಿ ಇದು ಸಾಮಾನ್ಯ. ಒಟ್ಟಿನಲ್ಲಿ ಹೇಳಬೇಕೆಂದರೆ ಪಶುಪಕ್ಷಿಗಳಿಗೂ ಸಹ ಮಧುಮೇಹ ಕಾಡುತ್ತಿದ್ದು ಮಾನವನಲ್ಲಿ ಇದರ ತೀವ್ರತೆ ಜಾಸ್ತಿ ಎನ್ನಬಹುದು. ಮೃಗಾಲಯದಲ್ಲಿ ಕೂಡಿ ಹಾಕುವ ಪ್ರಾಣಿ ಪಕ್ಷಿಗಳಲ್ಲಿ ಇದು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುವುದರಿಂದ ಇದನ್ನು ತಪ್ಪಿಸುವುದು ಒಳ್ಳೆಯದು.
ಡಾ: ಎನ್.ಬಿ.ಶ್ರೀಧರಪ್ರಾಧ್ಯಾಪಕರು ಮತ್ತು ಮುಖ್ಯಸ್ಥರುಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗಆಕರ:ವಿವಿಧ ಪುಸ್ತಕಗಳು ಮತ್ತು ಸಂಶೋಧನಾ ಲೇಖನಗಳುಚಿತ್ರಗಳು: ಸಾಂದರ್ಭಿಕ ಅಂತರ್ಜಾಲದಿ೦ದ.
Leave a Comment