ಭಟ್ಕಳ: ಅಂಜುಮನ್ ಸಂಸ್ಥೆಯು ಜುಕಾಕು ಕುಟುಂಬಕ್ಕೆ ಋಣಿಯಾಗಿದ್ದು ದಿ.ಅಬ್ದುಲ್ ರಹೀಮ್ ಅವರ ಸೇವೆ ಅವಿಸ್ಮರಣೀಯವಾಗಿದೆ ಎಂದು ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮುಹಮ್ಮದ್ ಮುಝಮ್ಮಿಲ್ ಕಾಝಿಯಾ ಹೇಳಿದರು.
ಅವರು ಅಂಜುಮನಾಬಾದ್ ನಲ್ಲಿ ಅಂಜುಮನ್ ಸಂಸ್ಥೆಯಿಂದ ಆಯೋಜಿಸಿದ್ದ ಅಬ್ದುಲ್ ರಹೀಮ್ ಜುಕಾಕು ಸಂತಾಪ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತನ್ನ ಕುಟುಂಬವನ್ನು ಅಮೇರಿಕಾದಲ್ಲಿ ಬಿಟ್ಟು ಅಂಜುಮನ್ ಸಂಸ್ಥೆಗಾಗಿ ಸರ್ವಸ್ವವನ್ನೇ ಅರ್ಪಿಸಿದ್ದ ರಹೀಮ್ ಸಾಹೇಬರು ಅಂಜುಮನ್ ಸಂಸ್ಥೆಯನ್ನೇ ತನ್ನ ಕುಟುಂಬವನ್ನಾಗಿ ಮಾಡಿಕೊಂಡಿದರು ಎಂದರು.
ಮಾಜಿ ಶಾಸಕ ಜೆ.ಡಿ.ನಾಯ್ಕ ಮಾತನಾಡಿ, ಶೈಕ್ಷಣಿಕ ಕ್ಷೇತ್ರದಲ್ಲಿ ಅಗಾದ ಸೇವೆ ಸಲ್ಲಿಸಿದ ಅವರು ಸಾಮಾಜಿಕ ಕಳಕಳಿ ಹೊಂದಿದ್ದರು. ಸಮಾಜದ ಎಲ್ಲ ವರ್ಗದವರೊಂದಿಗೆ ಬೆರೆಯುವುದು ಅವರ ಗುಣವಾಗಿತ್ತು. ಭಟ್ಕಳಕ್ಕೆ ಬಂದಾಗಲೆಲ್ಲ ಅವರು ತಮ್ಮೊಂದಿಗೆ ದೂರವಾಣಿ ಮೂಲಕ ವಿಚಾರಿಸುತ್ತಿದ್ದರು ಎಂದರು.
ಸಂತಾಪ ಸಭೆಯಲ್ಲಿ ಮಾತನಾಡಿದ ಮರ್ಕಝಿ ಖಲಿಫಾ ಜಮಾಅತುಲ್ ಮುಸ್ಲಿಮೀನ್ ಪ್ರಧಾನ ಖಾಝಿ ಮೌಲಾನ ಕ್ವಾಜಾ ಮುಈನುದೀನ್ ಅಕ್ರಮಿ ಮದನಿ ನದ್ವಿ, ಅಬ್ದುಲ್ ರಹೀಮ್ ಜುಕಾಕು ರವರ ಸರಳತೆ,ಸೌಜನ್ಯತೆ ಮತ್ತು ತ್ಯಾಗ ಕುರಿತ ಅವರು ಜೀವನದ ಘಟನಾವಳಿಗಳನ್ನು ಸಭೀಕರ ಮುಂದಿಟ್ಟರು.
ಜಮಾಅತುಲ್ ಮುಸ್ಲಿಮೀನ್ ಭಟ್ಕಳ ಇದರ ಅಧ್ಯಕ್ಷ ಜಾನ್ ಅಬ್ದುಲ್ ರಹ್ಮಾನ್ ಮೊಹತೆಶಮ್ ಮಾತನಾಡಿ ತನ್ನ ಹಾಗೂ ಜುಕಾಕು ಸಾಹೇಬರ ನಡುವನ ಸಂಬಂಧ ಹಾಗೂ ಅವರ ಬಾಲ್ಯದ ಕೆಲ ಘಟನೆಗಳನ್ನು ತೆರೆದಿಟ್ಟರು. ತಂಝೀಮ್ ಅಧ್ಯಕ್ಷ ಎಸ್.ಎಂ.ಸೈಯ್ಯದ್ ಪರ್ವೇಝ್, ಮೌಲಾನ ಅಬ್ದುಲ್ ಅಲೀಮ್ ಖಾಸ್ಮಿ, ಮೌಲಾನ ಮುಹಮ್ಮದ್ ಇಲ್ಯಾಸ್ ನದ್ವಿ, ಅಂಜುಮನ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸಿದ್ದೀಖ್ ಇಸ್ಮಾಯಿಲ್, ಅಬ್ದುಲ್ ಅಲೀಮ್ ಕಾಝೀಯಾ ಸೇರಿದಂತೆ ಹಲವು ಗಣ್ಯರು ಜುಕಾಕು ಅಬ್ದುಲ್ ರಹೀಮ್ ಸಾಹೇಬರ ಕುರಿತಂತೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ಭಗವಂತ ಅವರನ್ನು ಸ್ವರ್ಗದಲ್ಲಿ ಉನ್ನತ ಸ್ಥಾನ ನೀಡಲಿ ಹಾಗೂ ಅವರ ಕುಟುಂಬಕ್ಕೆ ಅಗಲಿಕೆಯನ್ನು ಸಹಿಸುವ ಧೈರ್ಯ ನೀಡಲಿ ಎಂದು ಪ್ರಾರ್ಥಿಸಿದರು.
ಅಂಜುಮನ್ ಸಂಸ್ಥೆಯ ಹೆಚ್ಚುವರಿ ಕಾರ್ಯದರ್ಶಿ ಇಸ್ಹಾಖ್ ಶಾಬಂದ್ರಿ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಭಟ್ಕಳದ ವಿವಿಧ ಜಮಾಅತ್‍ಗಳ ವತಿಯಿಂದ ಸಂತಾಪ ಪತ್ರವನ್ನು ಓದಲಾಯಿತು.
Leave a Comment