ಹೊನ್ನಾವರ: “ಇಂದು ಹೋರಾಟ ಮಾಡದೇ ಯಾವ ಸಮಸ್ಯೆಗೂ ಪರಿಹಾರ ಸಿಗುವುದಿಲ್ಲ. ಎಲ್ಲಿ ಸಮಸ್ಯೆಇರುತ್ತದೆಯೋ,ಅನ್ಯಾಯವಾಗುತ್ತದೆಯೋ ಅಂತಹುದರ ವಿರುದ್ದ ಹೋರಾಟ ಮಾಡಲು ‘ಕರುನಾಡ ವಿಜಯ ಸೇನೆ’ ಸದಾ ಸಿದ್ದವಾಗಿದೆ.ಭಾಷೆ,ಗಡಿ,ನೀರು ವಿಚಾರ ಬಂದಾಗ ವ್ಯಕ್ತಿ ಯಾರೇ ಆಗಿರಲಿ ,ಪಕ್ಷ ಯಾವುದಾಗಿರಲಿ ಅವರ ವಿರುದ್ದಹೋರಾಟ ಮಾಡುವ ಶಕ್ತಿ ನಮ್ಮ ಸಂಘಟನೆಗಿದೆ ಎಂದು ಕರುನಾಡ ವಿಜಯಸೇನೆ ರಾಜ್ಯಾಧ್ಯಕ್ಷ ಹ.ನೀ ದೀಪಕ್ ಹೇಳಿದರು.

ಪಟ್ಟಣದ ರಾಯಲ್ ಕೇರಿ ಅಂಬೇಡ್ಕರ್ ಸಭಾಭವನದಲ್ಲಿ ಗುರುವಾರ ನಡೆದ ಕರುನಾಡ ವಿಜಯಸೇನೆ ಪೂರ್ವಭಾವಿ ಸಭೆ, ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮಕ್ಕೆ ಚಾಲನೇ ನೀಡಿ ಅವರು ಮಾತನಾಡಿದರು. “ಇಂದು ಕನ್ನಡ ಶಾಲೆಗಳು ಮುಚ್ಚುತ್ತಿದೆ ಎಂದು ಕಳವಳ ವ್ಯಕ್ತಪಡಿಸಿ, ಈ ನಿಟ್ಟಿನಲ್ಲಿ ಕರ್ನಾಟಕದಲ್ಲಿರುವ ಸರ್ಕಾರಿ ಶಾಲೆಗಳಿಗೆ ಬಣ್ಣದ ಉತ್ಸವ ಕಾರ್ಯಕ್ರಮ ರೂಪಿಸಿ ಐದೂನೂರು ಶಾಲೆ ಆಯ್ಕೆ ಮಾಡಿ ಈಗಾಗಲೇ ಮೂವತ್ತು ಶಾಲೆಗಳಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.ಇಂದು ಶಿಕ್ಷಣ ಎನ್ನುವುದು ವ್ಯಾಪಾರವಾಗುತ್ತಿದೆ. ಸರ್ಕಾರಿ ಅಥವಾ ಖಾಸಗಿ ಶಾಲೆಯಲ್ಲಾಗಲಿ ಎಲ್ಲಾ ವಿದ್ಯಾರ್ಥಿಗಳಿಗೂ ಸಮಾನವಾದ ಶಿಕ್ಷಣ ಸಿಗಬೇಕು. ಈ ನಿಟ್ಟಿನಲ್ಲಿ ಕರುನಾಡ ವಿಜಯ ಸೇನೆ ಸದಾ ನ್ಯಾಯ ಒದಗಿಸುವಲ್ಲಿ ಮೂಂಚೂಣಿಯಲ್ಲಿರುತ್ತದೆ ಎಂದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲವು ಅಗತ್ಯ ಚಿಕಿತ್ಸೆ ಲಭಿಸುವುದಿಲ್ಲ,ಸರಿಯಾದ ಶುಚಿತ್ವವಿಲ್ಲ. ವೈದ್ಯರ ಕೊರತೆ ಇದೆ. ಕೆಲವು ಸರ್ಕಾರಿ ವೈದ್ಯರು ಖಾಸಗಿ ಕ್ಲಿನಿಕ್ ಹೊಂದಿದ್ದಾರೆ. ಇತನ್ಮದ್ಯೆ ಇಂದು ಕೆಲವು ಖಾಸಗಿ ಆಸ್ಪತ್ರೆಗಳು ಇದರ ಲಾಭ ಪಡೆದು ಚಿಕಿತ್ಸೆ ಹೆಸರಿನಲ್ಲಿ ಲೂಟಿಗಿಳಿದಿದೆ. ಇಂತಹದರ ವಿರುದ್ದ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ಸಂಘಟನೆಗೆ ಜನರ ಸಹಕಾರ ಕೋರಿದರು.
ಕರುನಾಡ ವಿಜಯ ಸೇನೆ ಜಿಲ್ಲಾ ಗೌರವಾದ್ಯಕ್ಷ ವಿನೋದ್ ನಾಯ್ಕ ರಾಯಲ್ ಕೇರಿ ಮಾತನಾಡಿ, ಕರುನಾಡ ವಿಜಯ ಸೇನೆ ಸಂಘಟನೆಯು ಸಾರ್ವಜನಿಕರ ಸಮಸ್ಯೆಗಳಿಗೆ ಧ್ವನಿಯಾಗಿ ನಿಲ್ಲುವ ಸಂಘಟನೆಯಾಗಿದೆ. ಇಂತಹ ಸಂಘಟನೆಗೆ ಯುವಕರು ಮಹಿಳೆಯರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕೈಜೋಡಿಸಬೇಕಾಗಿದೆ. ಮುಂದಿನ ದಿನದಲ್ಲಿ ಜಿಲ್ಲೆಯಲ್ಲಿ ಪ್ರಬಲವಾಗಿ ಸಂಘಟನೆ ಮಾಡಲಿದ್ದೇವೆ ಎಂದು ಹೇಳಿದರು. ಅಭಿವೃದ್ಧಿ ವಿಚಾರದಲ್ಲಿ ಯಾವುದೇ ಮುಲಾಜಿಗೂ ಒಳಗಾಗದೇ ಸಂಘಟನೆಯ ಧ್ಯೇಯೋದ್ದೇಶಗಳ ಸಾಕಾರಗೊಳಿಸುವ ನಿಟ್ಟಿನಲ್ಲಿ ನಮ್ಮ ಕಾರ್ಯವೈಖರಿ ಇರಲಿದೆ. ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ಸಮಾನತೆಯ ತತ್ವದಂತೆ ಎಲ್ಲರನ್ನೂ ಪರಿಗಣನೆಗೆ ತೆಗೆದುಕೊಳ್ಳುವ ಜೊತೆಗೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಂಘಟನೆಯ ಮೂಲಕ ನ್ಯಾಯ ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ನಮ್ಮದಾಗಿರುತ್ತದೆ ಎಂದರು.
ಪಟ್ಟಣ ಪಂಚಾಯತ ಉಪಾಧ್ಯಕ್ಷರು ಹಾಗೂ ಕರುನಾಡ ವಿಜಯಸೇನೆಯ ತಾಲೂಕಾ ಮಹಿಳಾ ಘಟಕದ ಅಧ್ಯಕ್ಷೆ ಮೇಧಾ ನಾಯ್ಕ ಮಾತನಾಡಿ “ಜಯ ಎನ್ನುವುದು ಒರ್ವ ವ್ಯಕ್ತಿಗು ಲಭಿಸುತ್ತದೆ. ಆದರೆ ವಿಜಯ ಸಿಗಬೇಕಾದರೆ ಅದು ಸಂಘಟಿತರಾದಲ್ಲಿ ಮಾತ್ರ. ಹೆಸರಿನಲ್ಲಿ ವಿಜಯವಿರುವ ಕರುನಾಡ ವಿಜಯಸೇನೆ ನಾಡಿನ ಅಭಿವೃದ್ಧಿಗೆ ಕಾರಣಿಭೂತವಾಗಲಿ. ಅಭಿವೃದ್ಧಿ ವಿಚಾರದಲ್ಲಾಗಲಿ,ಭಾಷೆ,ಗಡಿ,ನಾಡು ವಿಚಾರದಲ್ಲಾಗಲಿ ನಾವೆಲ್ಲರು ಮೂಂಚೂಣಿಯಲ್ಲಿದ್ದು ಕೈಜೋಡಿಸಿ ಹೋರಾಡಿ ವಿಜಯಪತಾಕೆ ಹಾರಿಸೋಣ ಎಂದರು.
ನಂತರ ಕರುನಾಡ ವಿಜಯಸೇನೆಯ ಜಿಲ್ಲೆ ಹಾಗೂ ತಾಲೂಕಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಜಿಲ್ಲಾದ್ಯಕ್ಷರಾಗಿ ವಿನಾಯಕ ಆಚಾರಿ,ಜಿಲ್ಲಾ ವಕ್ತಾರರಾಗಿ ಶ್ರೀರಾಮ್ ಹೊನ್ನಾವರ, ಜಿಲ್ಲಾ ಕಾನೂನು ಸಲಹೆಗಾರರಾಗಿ ಪ್ರಕಾಶ್ ತಾಂಡೇಲ್ ,ತಾಲೂಕಾಧ್ಯಕ್ಷರಾಗಿ ಧನಂಜಯ ನಾಯ್ಕ ರಾಯಲ್ ಕೇರಿ, ಉಪಾಧ್ಯಕ್ಷರಾಗಿ ಸುಭಾಷ್,ತಾಲೂಕಾ ಯುವ ಘಟಕದ ಅಧ್ಯಕ್ಷರಾಗಿ ಶ್ರೀನಿವಾಸ ನಾಯ್ಕ ಆಯ್ಕೆಯಾದರು.ಅಂತಯೇ ವಿವಿಧ ಘಟಕದ ಪದಾಧಿಕಾರಿಗಳಿಗೆ ಹೂಗೂಚ್ಚ ನೀಡಿ ಸ್ವಾಗತಿಸಿದರು.
ಕರುನಾಡ ವಿಜಯಸೇನೆಯ ರಾಜ್ಯಾ ಪದಾಧಿಕಾರಿಗಳಿಗೆ ತಾಲೂಕಾ ಘಟಕದ ವತಿಯಿಂದ ಸನ್ಮಾನಿಸಿದರು.
ವೇದಿಕೆಯಲ್ಲಿ ಕರುನಾಡ ವಿಜಯಸೇನೆಯ ರಾಜ್ಯ ಕಾರ್ಮಿಕ ಘಟಕದ ಅಧ್ಯಕ್ಷ ನೆ.ಲ ರಾಮ್ ಪ್ರಸಾದ್ ಗೌಡ,ರಾಜ್ಯ ಯುವಘಟಕದ ಅಧ್ಯಕ್ಷ ಮಹೇಶ್ ಆರ್ ಎಸ್, ಬೆಂಗಳೂರು ನಗರ ಘಟಕದ ಅಧ್ಯಕ್ಷ ವಿಜಯಕುಮಾರ್ .ಎಸ್ ,ಸಾಮಾಜಿಕ ಜಾಲತಾಣದ ಅಧ್ಯಕ್ಷ ರೇಣುಕಾ ಪ್ರಸಾದ್ , ಜಿಲ್ಲಾದ್ಯಕ್ಷ ವಿನಾಯಕ ಆಚಾರಿ, ಜಿಲ್ಲಾ ವಕ್ತಾರ ಶ್ರೀರಾಮ್ ಹೊನ್ನಾವರ ಮತ್ತಿತರಿದ್ದರು.
Leave a Comment