ಹೊನ್ನಾವರ – ಪಟ್ಟಣದಲ್ಲಿ ಶನಿವಾರ ನಡೆದ ವಾರದ ಸಂತೆಯಲ್ಲಿ ಕಳ್ಳರು ಕೈ ಚಳಕ ತೋರಿದ ಸಂಗತಿ ಬೆಳಕಿಗೆ ಬಂದಿದೆ. ಗೃಹಬಳಕೆ ದಿನಸಿ, ತರಕಾರಿಗಳನ್ನು ಖರೀದಿಸಲು ಬಂದಿದ್ದ ಸುಮಾರು 9 ಮಂದಿ ಗ್ರಾಹಕರ ಮೊಬೈಲ್ಗಳನ್ನು ಕಳ್ಳರು ಎಗರಿಸಿದ್ದಾರೆನ್ನಲಾಗಿದೆ, ಜಿಲ್ಲೆಯಲ್ಲಿ ಸಾಲು ಸಾಲು ಜಾತ್ರೆ, ತೇರು, ಉತ್ಸವಗಳು ನಡೆಯುತ್ತಿದ್ದು ಬೆಲೆಬಾಳುವ ವಸ್ತುಗಳನ್ನಿಟ್ಟುಕೊಂಡು ಪಾಲ್ಗೊಳ್ಳುವವರು ಜಾಗೃತರಾಗಬೇಕಿದೆ.

ಪ್ರತಿ ಶನಿವಾರ ನಡೆಯವ ವಾರದ ಸಂತೆಗೆ ತಾಲೂಕಿನ ಮೂಲೆ ಮೂಲೆಯಿಂದ ಅದರಲ್ಲೂ ಗ್ರಾಮೀಣ ಭಾಗದಿಂದ ಹೆಚ್ಚಾಗಿ ಜನರು ಆಗಮಿಸಿ ಒಂದು ವಾರಕ್ಕೆ ಸಾಕಾಗುವಷ್ಟು ಹಣ್ಣು ತರಕಾರಿ ಮುಂತಾದ ಆಹಾರ ಸಾಮಗ್ರಿಗಳನ್ನು ಖರೀದಿಸುತ್ತಾರೆ. ಮಾರುಕಟ್ಟೆ ಬೆಲೆಗಿಂತ ಕಡಿಮೆ ಮೊತ್ತಕ್ಕೆ ಸಾಮಾನುಗಳು ದೊರೆಯುವ ಕಾರಣ ಸಂತೆಗೆ ಬರುವವರ ಸಂಖ್ಯೆಯಲ್ಲಿಯೂ ಹೆಚ್ಚಳವಾಗುತ್ತಿದೆ. ಆದರೆ ಸಂತೆ ಮಾರುಕಟ್ಟೆಯಲ್ಲಿ ಪಿಕ್ಪಾಕೆಟ್ ಮಾಡುವವರು, ಮೊಬೈಲ್ ಕಳ್ಳರ ಹಾವಳಿ ಹೆಚ್ಚುತ್ತಿರುವ ಬಗ್ಗೆ ದೂರು ಕೇಳಿಬರುತ್ತಿರುವುದು ಸಾರ್ವಜನಿಕರನ್ನು ಆತಂಕಿತರನ್ನಾಗಿಸಿದೆ.
ಸಂತೆಯಲ್ಲಿ ಮೊಬೈಲ್ ಕಳೆದುಕೊಂಡಿರುವ ಬಗ್ಗೆ ಈ ಹಿಂದೆಯೂ ಜನರು ಮಾತಾಡಿಕೊಳ್ಳುತ್ತಿದ್ದರಾದರೂ ಜನದಟ್ಟಣೆಯಲ್ಲಿರುವಾಗ ಕಿಸೆಯಿಂದ ಜಾರಿಯೋ ತಮಗೆ ಅರಿವಿಲ್ಲದೆಯೋ ಮೊಬೈಲ್ ಕಳೆದುಕೊಂಡಿರಬಹುದು ಎಂದುಕೊಳ್ಳುತ್ತಿದ್ದರು. ಆದರೆ ಶನಿವಾರ ಒಂದೇ ದಿನ 9 ಮಂದಿಯ ಮೊಬೈಲ್ ಕಾಣೆಯಾಗಿರುವುದು ಮೊಬೈಲ್ ಕಳೆದು ಹೋಗುತ್ತಿರುವ ಘಟನೆಯಬಗ್ಗೆ ಅನುಮಾನ ಗಟ್ಟಿಗೊಳ್ಳುವುದಕ್ಕೆ ಕಾರಣವಾಗಿದೆ.
ಪಿಕ್ಪಾಕೆಟರ್ಸ್ ತಂಡ ಆಗಮಿಸಿರುವ ಶಂಕೆ
ಕಳ್ಳತನವನ್ನೇ ಕಸುಬಾಗಿಸಿಕೊಂಡಿರುವ ವೃತ್ತಿಪರ ಕಳ್ಳರ ತಂಡವೊಂದು ತಾಲೂಕಿನಲ್ಲಿ ಬೀಡು ಬಿಟ್ಟಿರುವ ಬಗ್ಗೆ ಸಾರ್ವಜನಿಕರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ವಾರದ ಸಂತೆಯ ಜೊತೆ ಜನವರಿಯಿಂದ ಮೇ ತಿಂಗಳ ಕೊನೆಯವರೆಗೆ ಜಿಲ್ಲೆಯಲ್ಲಿ ವಾರದಲ್ಲಿ ಒಂದಲ್ಲ ಒಂದು ಕಡೆ ರಥೋತ್ಸವಗಳು, ವಾರ್ಷಿಕ ಹಬ್ಬಗಳು ನಡೆಯುತ್ತವೆ. ಅಲ್ಲೆಲ್ಲಾ ಸಾವಿರಾರು ಜನರು ಒಂದೆಡೆ ಸೇರುತ್ತಾರೆ. ಜನ ಸಂದಣಿ ಹೆಚ್ಚಿದಂತೆ ಕಾರ್ಯಾಚರಣೆಗಿಳಿಯುವ ವೃತ್ತಿಪರ ಕಳ್ಳರ ತಂಡ ಯಾರ ಗಮನಕ್ಕೂ ಬಾರದಂತೆ ಮೊಬೈಲ್ಗಳನ್ನು, ಪರ್ಸಗಳನ್ನು ಎಗರಿಸುತ್ತಿದ್ದಾರೆ.

ಡಿ.ಕೆ.ಶಿ ಜಿಲ್ಲೆಗೆ ಬಂದಾಗಲೂ ಸಾಕಷ್ಟು ಮಂದಿ ಹಣ ಕಳೆದುಕೊಂಡಿದ್ದರು
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಜಿಲ್ಲೆಗೆ ಡಿ.ಕೆ.ಶಿವಕುಮಾರ ಬೇಟಿ ನೀಡಿದ್ದಾಗಲೂ ಅವರು ಪಾಲ್ಗೊಂಡಿದ್ದ ಕಾರ್ಯಕ್ರಮಗಳಲ್ಲಿ ಭಾಗಿಯಾದ ಜಿಲ್ಲೆಯ ಪ್ರಮುಖ ರಾಜಕಾರಣಿಗಳ ಪಿಕ್ಪಾಕೆಟ್ ಆದ ಮಾಹಿತಿ ಬಹಿರಂಗವಾಗಿತ್ತಾದರೂ ಹಣ ಕಳೆದುಕೊಂಡವರಾರೂ ಬಡವರಲ್ಲದ ಕಾರಣ ಘಟನೆಯನ್ನು ನಿರ್ಲಕ್ಷಿಸಿದ್ದರು.
ಇ.ಎಂ.ಐ ನಲ್ಲಿ ಮೊಬೈಲ್ ಕೊಂಡಿದ್ದೆ ಎಗರಿಸಿಬಿಟ್ಟರು
[13 ಸಾವಿರ ಬೆಲೆಯ ಆಂಡ್ರಾಯ್ಡ್ ಮೊಬೈಲ್ ಖರೀದಿಸಿ ಒಂದು ವಾರ ಸಹ ಆಗಿರಲಿಲ್ಲ. ಮನೆಗೆ ತರಕಾರಿ ತರಲೆಂದು ಶನಿವಾರ ಸಂತೆಗೆ ಹೋದರೆ ಕೆಲವೇ ಹೊತ್ತಲ್ಲಿ ಕಿಸೆಯಲ್ಲಿದ್ದ ಮೊಬೈಲ್ ಇರಲಿಲ್ಲ ಸಂತೆ ಮಾರ್ಕೆಟ್ಲ್ಲಿ ಎಷ್ಟು ಹುಡುಕಾಡಿದರೂ ಮೊಬೈಲ್ ಸಿಗಲಿಲ್ಲ, ಕೊನೆಗೆ ನನ್ನಂತೆ ಇನ್ನೂ ಅನೇಕ ಮಂದಿ ಮೊಬೈಲ್ ಕಳೆದುಕೊಂಡಿರುವುದು ಗಮನಕ್ಕೆ ಬಂತು. ಈ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಿದ್ದೇನೆ – ಶ್ರೀಧರ ಶೆಟ್ಟಿ, ತಾಲೂಕಾಸ್ಪತ್ರೆಯ ಅಂಬುಲೆನ್ಸ್ ಚಾಲಕ]
ಸಾರ್ವಜನಿಕರು ಜಾಗೃತರಾಗಿರಬೇಕು
ಸಭೆ ಸಮಾರಂಭಗಳಿರಲಿ, ದೇವಾಲಯಗಳ ರಥೋತ್ಸವವಿರಲಿ ಅಭರಣ ಮತ್ತು ಬೆಲೆ ಬಾಳುವ ವಸ್ತುಗಳ ಬಗ್ಗೆ ಕಾಳಜಿ ವಹಿಸುವಂತೆ ಪೊಲೀಸರು, ಆಡಳಿತ ಮಂಡಳಿಯವರು ಪದೇ ಪದೇ ಸಾರ್ವಜನಿಕರಿಗೆ ಎಚ್ಚರಿಕೆ ನೀಡುತ್ತಲೇ ಇರುತ್ತಾರೆ ಆದರೆ ಈ ಬಗ್ಗೆ ಗ್ರಾಮೀಣ ಭಾಗದ ಜನರು ಹೆಚ್ಚಾಗಿ ಲಕ್ಷ್ಯ ವಹಿಸದಿರುವುದು ಪಿಕ್ ಪಾಕೆಟ್ ಮಾಡುವವರಿಗೆ ಅನುಕೂಲಮಾಡಿಕೊಟ್ಟಿದೆ. ಸಭೆ ಸಮಾರಂಭಗಳಿಗೆ ಹೋಗುವಾಗ ಡುಪ್ಲಿಕೇಟ್ ಆಭರಣಗಳನ್ನು ಧರಿಸಿ ಹೋಗುವುದರಿಂದ ಹೆಚ್ಚಿನ ಅನಾಹುತವನ್ನು ತಪ್ಪಿಸಬಹುದು. ಪ್ರತಿಷ್ಠೆಯನ್ನು ಪ್ರದರ್ಶಿಸಲು ಹೋಗಿ ಎಲ್ಲಾ ಕಳೆದುಕೊಂಡು ಆಮೇಲೆ ಪರಿತಪಿಸುವುದಕ್ಕಿಂತ ಮೊದಲೇ ಜಾಗೃತೆ ವಹಿಸುವುದು ಉತ್ತಮ ಎನ್ನುವುದು ಪೊಲೀಸ್ ಇಲಾಖೆಯ ಸಲಹೆಯಾಗಿದೆ.
Leave a Comment