ಹೊನ್ನಾವರ:ಹೊನ್ನಾವರ ಮೇಲ್ ಸೇತುವೆ ಹೋರಾಟ ಸಮಿತಿ ಪದಾಧಿಕಾರಿಗಳು ಶುಕ್ರವಾರ ಜಿಲ್ಲಾಧಿಕಾರಿ ಮುಲ್ಲಾಯಿ ಮುಹಿಲನ್ ರವರನ್ನು ಭಟ್ಕಳದಲ್ಲಿ ಭೇಟಿಯಾಗಿ ಹೊನ್ನಾವರದಲ್ಲಿ ಹೆದ್ದಾರಿಗೆ ಮೇಲ್ ಸೇತುವೆ ನಿರ್ಮಾಣ ಅವಶ್ಯಕತೆಯ ಕುರಿತು ವಿವರಿಸಿ ಮನವಿ ನೀಡಿದರು.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಸಮಿತಿಯ ಪದಾಧಿಕಾರಿಗಳೊಂದಿಗೆ ಮಾತನಾಡಿ ತಾನು ಹೊಸದಾಗಿ ಜಿಲ್ಲೆಗೆ ಬಂದಿದ್ದು ಹೊನ್ನಾವರ ಮೇಲ್ ಸೇತುವೆ ಸಮಸ್ಯೆಯ ಕುರಿತು ದಾಖಲೆಗಳನ್ನು ನೋಡಿದ್ದೇನೆ. ಅಧಿಕಾರಿಗಳ ಜೊತೆ ಆ ಬಗ್ಗೆ ಚರ್ಚಿಸಿ ವರದಿಯನ್ನು ಸರ್ಕಾರಕ್ಕೆ ಕಳುಹಿಸುತ್ತೇನೆ. ಸರ್ಕಾರವು ಮೇಲ್ ಸೇತುವೆ ಕುರಿತು ನಿರ್ಣಯಿಸುತ್ತದೆ ನಿವೆಲ್ಲರೂ ಸಹಕರಿಸಿ ಎಂದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಐ.ಆರ್.ಬಿ ಕಂಪನಿಯ ಅಧಿಕಾರಿ ಮೋಹನ್ ದೋಸ್ ಮಾತನಾಡಿ ಹೆದ್ದಾರಿ ಭೂ ಸ್ವಾಧಿನ 45 ಮೀಟರು ಇದ್ದದ್ದನ್ನು 30 ಮೀಟರ್ ಗೆ ತಗ್ಗಿಸಿದ್ದರಿಂದ ಮೇಲ್ ಸೇತುವೆ ನಿರ್ಮಾಣ ನನೆಗುದಿಗೆ ಬಿತ್ತು. ಮೇಲ್ ಸೇತುವೆ ನಿರ್ಮಾಣಕ್ಕೆ ಸರ್ವಿಸ್ ರಸ್ತೆ ಅವಶ್ಯ ಇರುತ್ತದೆ. ಹಾಗಾಗಿ 45 ಮೀಟರ್ ವಿಸ್ತಾರದ ಭೂಮಿ ವಶ ಪಡಿಸಿಕೊಳ್ಳಬೇಕಾಗುತ್ತದೆ. ಸರ್ಕಾರ ತೆಗೆದುಕೊಳ್ಳುವ ನಿಲುವನ್ನು ಪಾಲಿಸುವುದು ನಮ್ಮ ಕರ್ತವ್ಯ. ಕರ್ನಾಟಕ ಸರ್ಕಾರವು ಕೇಂದ್ರಕ್ಕೆ ಹೆದ್ದಾರಿ ಮೇಲ್ ಸೇತುವೆಗೆ ಒಪ್ಪಿಗೆ ನೀಡಿದ ನಂತರ ಕಾಮಗಾರಿಯ ರೂಪರೇಷ ಸಿದ್ದವಾಗುತ್ತದೆ ಅದನ್ನು ಪಾಲಿಸುವುದು ಗುತ್ತಿಗೆ ಕಂಪನಿಯ ಕೆಲಸ. ಸರ್ಕಾರದಿಂದ ಆದೇಶ ಬಾರದೆ ಇದ್ದಲ್ಲಿ ಮೊದಲಿನ ಯೋಜನೆಯ ಪ್ರಕಾರ ರಸ್ತೆ ಕಾರ್ಯ ಮುಂದುವರೆಯುತ್ತದೆ ಎಂದರು.
ಈ ಸಂದರ್ಭದಲ್ಲಿ ವಿಶೇಷ ಭೂ ಸ್ವಾಧೀನ ಅಧಿಕಾರಿ ಸಾಜಿದ್ ಮುಲ್ಲಾ, ಕಂಪನಿಯ ಇಂಜಿನೀಯರ ನವೀನ್, ಹೊನ್ನಾವರ ತಹಶೀಲ್ದಾರ ವಿವೇಕ ಶೇಣ್ವಿ, ಹೆದ್ದಾರಿ ಮೇಲ್ ಸೇತುವೆ ಹೋರಾಟ ಸಮಿತಿ ಅಧ್ಯಕ್ಷ ಎಂ.ಎನ್. ಸುಬ್ರಹ್ಮಣ್ಯ ಸಂಚಾಲಕ ಲೋಕೇಶ ಮೇಸ್ತ, ಆರ್. ಜೆ ಪೈ, ಸಂಜೀವ್ ಶೇಟ್, ನ್ಯಾಯವಾದಿ ಸೂರಜ್ ನಾಯ್ಕ ಉಪಸ್ಥಿತರಿದ್ದರು.
Leave a Comment