ಹೊನ್ನಾವರ : ಪ್ರಾಣಾಯಾಮ, ಆತ್ಮವಿಶ್ವಾಸ ಮತ್ತು ಸಕಾಲದಲ್ಲಿ ಚಿಕಿತ್ಸೆ ತೀವ್ರ ಹೃದಯಾಘಾತವಾದ ರೋಗಿಯನ್ನು ಉಳಿಸಬಹುದು ಎಂಬುದಕ್ಕೆ ಮಂಗಳೂರು ಕೆಎಂಸಿಯ ಖ್ಯಾತ ಹೃದಯ ತಜ್ಞ ಡಾ. ಪದ್ಮನಾಭ ಕಾಮತ್ ಇತ್ತೀಚಿನ ಒಂದು ಉದಾಹರಣೆ ನೀಡಿದ್ದಾರೆ.
ಡಾ. ಪದ್ಮನಾಭ ಕಾಮತ್
ಕಾರವಾರದ ಗ್ರಾಮಾಂತರ ಮೂಲದ ವ್ಯಕ್ತಿಯೊಬ್ಬನಿಗೆ ತೀವ್ರ ಹೃದಯಾಘಾತವಾಗುತ್ತದೆ, ಎದೆನೋವಿನಿಂದ ಬಳಲುತ್ತಿದ್ದ ಅವನಿಗೆ ಮಂಗಳೂರಿಗೆ ಬರುವಂತೆ ಸ್ನೇಹಿತರು ಸಲಹೆ ನೀಡುತ್ತಾರೆ. ಕಾರವಾರದಿಂದ ಹೊರಟು ಹೊನ್ನಾವರಕ್ಕೆ ಬರುವಷ್ಟರಲ್ಲಿ ಎದೆನೋವು ತೀವ್ರವಾಗುತ್ತದೆ. ಇಸಿಜಿ ಮಾಡಿ ಸಿಎಡಿಗೆ ಕಳಿಸಿದಾಗ ತುರ್ತು ಚಿಕಿತ್ಸೆಗೆ ಸಲಹೆಯನ್ನು ನೀಡಲಾಗುತ್ತದೆ.
ಹೃದಯಾಘಾತವಾದರೆ ಒಂದು ಘಂಟೆಯ ಒಳಗೆ ಚಿಕಿತ್ಸೆ ಸಿಗಲೇಬೇಕು. ಇಂತಹ ಸೂಕ್ಷ್ಮ ಪರಿಸ್ಥಿತಿಯಲ್ಲಿ ಆತ ನಾಲ್ಕು ತಾಸು ಪ್ರಯಾಣ ಮಾಡಿ ಮಂಗಳೂರು ಆಸ್ಪತ್ರೆಗೆ ದಾಖಲಾಗುತ್ತಾನೆ, ಆತನಿಗೆ ಸ್ಟಂಟ್ ಅಳವಡಿಸಲಾಗುತ್ತದೆ. ಸಿಎಡಿ ತುರ್ತು ಚಿಕಿತ್ಸೆಯ ಜೊತೆಯಲ್ಲಿ ನಾಲ್ಕು ತಾಸು ಆತ ಹೇಗೆ ಉಳಿದ ಎಂಬುದು ಪ್ರಶ್ನೆಯಾಗಿತ್ತು. ಆತನಿಗೆ ಪ್ರಜ್ಞೆ ಬಂದ ಮೇಲೆ ಡಾ. ಕಾಮತ್ ಕೇಳಿದಾಗ ‘ನಾನು ಯೋಗ ಶಿಕ್ಷಕ, ಪ್ರಾಣಾಯಾಮ ಮಾಡುತ್ತಲೇ ಬಂದೆ. ಇದು ನನ್ನ ಆತ್ಮವಿಶ್ವಾಸ ಹೆಚ್ಚಿಸಿತು’ ಎಂದು ಅವನು ಹೇಳಿದ್ದಾನೆ.
ಆಧುನಿಕ ವೈದ್ಯಕೀಯ ಸೌಲಭ್ಯಗಳಿದ್ದರೂ ಇಂಥವರನ್ನು ಉಳಿಸಿಕೊಳ್ಳುವುದು ಕಷ್ಟ. ಆದರೆ ಪ್ರಾಣಾಯಾಮ ಈತನನ್ನು ಉಳಿಸಲು ಕಾರಣವಾಯಿತು ಎಂದಾದರೆ ವೈಜ್ಞಾನಿಕ ಅಳತೆಗೆ ಸಿಗದ ಸಂಗತಿಗಳು ಇವೆ ಎಂಬುದು ಸತ್ಯ ಎಂದು ಡಾ. ಕಾಮತ್ ಪತ್ರಿಕೆಗಳಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Leave a Comment