ಹೊನ್ನಾವರ ತಾಲೂಕನ್ನು ಬೆಚ್ಚಿ ಬೀಳಿಸಿದ್ದ ಭಾನುವಾರ ನಡೆದ ಯುವಕನ ಮರ್ಡರ್ ಕೇಸ್ ಸಂಭದ ಕೊಲೆಗಡುಕನನ್ನು ಬಂಧಿಸಿರುವ ಪೊಲೀಸರು ಕೊಲೆಯಾದವನ ಒಡಹುಟ್ಟಿದ ಸಹೋದರನೇ ಕೊಲೆಮಾಡಿದ್ದಾನೆನ್ನುವುದನ್ನು ದೃಢಪಡಿಸಿದ್ದಾರೆ.
ಕೊಲೆಯಾದ ಯುವಕ ಅರ್ಜುನ ಶಂಕರ ಮೇಸ್ತನ ಅಣ್ಣ ಕೃಷ್ಣ ಶಂಕರ ಮೇಸ್ತ ಎಂಬಾತನೇ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ತಾಯಿಯ ಜೊತೆ ಇಬ್ಬರು ಸಹೋದರರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಹಿರಿಯವನಾದ ಕೃಷ್ಣ ಎಲ್ಲಿಯೂ ಕೆಲಸಕ್ಕೆ ಹೋಗದೆ ಉಂಡಾಡಿ ಗುಂಡನಂತೆ ಖಾಲಿ ತಿರುಗುತ್ತಿದ್ದ ಎನ್ನಲಾಗಿದೆ.
ಇದೇ ಕಾರಣಕ್ಕಾಗಿ ಸಹೋದರರ ನಡುವೆ ಆಗಾಗ ಜಗಳವಾಗುತ್ತಿದ್ದು, ಕಿರಿಯವನಾದ ಅರ್ಜುನ್ ನು ಅಣ್ಣನಿಗೆ ಮನೆಯಲ್ಲಿಯೇ ಕುಳಿತಿರಬೇಡ ಕೆಲಸಕ್ಕೆ ಹೋಗು ಎಂದು ಹೇಳುವಾಗ ಜಗಳಕ್ಕೆ ಬರುತ್ತಿದ್ದನು. ನನಗೆ ಬುದ್ಧಿ ಹೇಳಲು ಬಂದರೆ ನಿನ್ನ ಸಾಯಿಸಿ ಬಿಡ್ತೀನಿ ಎಂದು ಈ ಹಿಂದೆ ಬೆದರಿಕೆ ಹಾಕುತ್ತಿದ್ದನು ಎನ್ನುವ ಸಂಗತಿ ತನಿಖೆಯಲ್ಲಿ ತಿಳಿದುಬಂದಿದೆ.
ಜುಲೈ 11ರಂದು ಭಾನುವಾರ ಬೆಳಗ್ಗೆ 9 ಗಂಟೆಗೆ ತಾಯಿ ತಾರಾ ಮೇಸ್ತ ಹೊಟೇಲ್ ಕೆಲಸಕ್ಕೆ ತೆರಳಿದ್ದ ವೇಳೆ ಮನೆಯಲ್ಲಿ ಇಬ್ಬರೂ ಮಕ್ಕಳಿದ್ದರು. ಕೆಲಸಕ್ಕೆ ಹೋಗಿದ್ದ ತಾಯಿ ಸಂಜೆ 7-30 ಗಂಟೆಗೆ ಮನೆಗೆ ವಾಪಸ್ಸಾದಾಗ ಮನೆಯ ಬೀಗ ಹಾಕಿತ್ತು. ಮನೆಯ ಮಾಲಿಕರ ಮೊಬೈಲ್ ಇಂದ ಹಿರಿಯ ಮಗನಿಗೆ ಕರೆ ಮಾಡಿಸಿದರೆ ತಮ್ಮ ಮನೆಗೆ ಬೀಗ ಹಾಕಿ ಕೇರಳ ಕಡೆ ಕೆಲಸಕ್ಕೆ ಹೋಗಿದ್ದಾನೆ. ನೀನು ಅಜ್ಜಿ ಮನೆಗೆ ಹೋಗಿ ಮಲಗು ಎಂದು ಹೇಳಿ ಕಾಲ್ ಕಟ್ ಮಾಡಿದ ಎನ್ನಲಾಗಿದೆ.
ಇಬ್ಬರು ಮಕ್ಕಳಲ್ಲಿ ಯಾರಾದರೊಬ್ಬರು ಬರಬಹುದು ಎಂದು ರಾತ್ರಿ 9 ಗಂಟೆಯವರೆಗೂ ಕಾದರೂ ಯಾರೂ ಬರದಿದ್ದಾಗ ಪಕ್ಕದಮನೆಯಾತನ ಸಹಾಯ ಪಡೆದು ಮನೆಯ ಬೀಗ ಮುರಿದು ಒಳಗೆ ಕಾಲಿಟ್ಟ ತಾಯಿಗೆ ಎದೆ ಝಲ್ ಎನ್ನಿಸುವಂತ ದೃಶ್ಯ ಕಾಣಿಸಿದೆ. ಮನೆಗೆ ಆಧಾರವಾಗಿದ್ದ ಕಿರಿಯ ಮಗ ಅರ್ಜುನ್ ಬೆಡ್ ಶೀಟ್ ಅಡಿಯಲ್ಲಿ ರಕ್ತದ ಮಡುವಿನಲ್ಲಿ ಹೆಣವಾಗಿ ಬಿದ್ದಿದ್ದ.
ಇದು ತನ್ನ ಹಿರಿಯ ಮಗನದೇ ಕೃತ್ಯ ಎನ್ನುವುದನ್ನು ಅರ್ಥಮಾಡಿಕೊಂಡ ಹೆತ್ತಾಕೆ ಅತೀವ ದು:ಖದಲ್ಲಿಯೂ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಳು. ತಕ್ಷಣ ಕಾರ್ಯಪ್ರವ್ರತ್ತರಾದ ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಕೆಲಸಕ್ಕೆ ಹೋಗು ಎಂದು ಬುದ್ಧಿ ಹೇಳಿದ ತಮ್ಮನನ್ನು ಕೊಂದು ವಿಷಯ ಮುಚ್ಚಿಟ್ಟು ಮನೆಗೆ ಬೀಗ ಹಾಕಿ ತಾನು ಪರಾರಿಯಾಗಲು ಯತ್ನಿಸಿದಾತ ಕಂಬಿಯ ಹಿಂದೆ ಕಾಲಕಳೆಯಬೇಕು. ಗಂಡನಿಲ್ಲದ ಇದ್ದ ಇಬ್ಬರು ಮಕ್ಕಳಲ್ಲಿ ಒಬ್ಬ ಕೊಲೆಯಾದರೆ ಇನ್ನೊಬ್ಬ ಕೊಲೆ ಮಾಡಿ ಜೈಲು ಪಾಲಾಗಿದ್ದಾನೆ.ಅನಾಥಳಾಗಿರುವ ತಾಯಿ ನಿತ್ಯವೂ ಕಣ್ಣೀರಿನಲ್ಲಿ ಕೈ ತೊಳೆಯುತ್ತಾ, ಚಿಂತೆಯ ಚಿತೆಯಲ್ಲಿ ಬೇಯುತ್ತಾ ದಿನ ಕಳೆಯಬೇಕಿದೆ. ಈ ಸಂಭದ ಹೊನ್ನಾವರ ಪೋಲಿಸ್ ಠಾಣಿಯಲ್ಲಿ ದೂರು ದಾಖಲಾಗಿದೆ.
Leave a Comment