
ಯಲ್ಲಾಪುರ : ಪಟ್ಟಣದ ಕಾಳಮ್ಮನಗರದ ಗಣಪತಿ ಕಟ್ಟೆಯ ಎದುರು ಇರುವ ನಿರುಪಯುಕ್ತ ಬಾವಿಯನ್ನು ಮುಚ್ಚಿಸುವಂತೆ ಸಾರ್ವಜನಿಕರು ಪಟ್ಟಣ ಪಂಚಾಯತ ಅಧ್ಯಕ್ಷರಿಗೆ ಮನವಿ ಸಲ್ಲಿಸಿದ್ದಾರೆ. ಪಟ್ಟಣದ ಕಾಳಮ್ಮನಗರ ಕ್ರೀಡಾಂಗಣದ ಬಳಿಯಿರುವ ಸಾರ್ವಜನಿಕ ಗಣೇಶ ಸಮಿತಿಯ ಎದುರಿನ ಬಾವಿಯು ದಶಕಗಳಷ್ಟು ಹಳೆಯದಾಗಿದ್ದು, ಬಳಕೆಗೆ ಬಾರದೆ ಸಂಪೂರ್ಣವಾಗಿ ನಿರುಪಯುಕ್ತವಾಗಿದೆ.
ಬಾವಿ ಕಟ್ಟೆಯು ದುರ್ಬಲಗೊಂಡಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಬಾವಿಯ ಸುತ್ತ ಮಕ್ಕಳು ಆಟವಾಡುತ್ತಿದ್ದಾಗ ಅಪಘಾತ ಸಂಭವಿಸುವ ಸಾಧ್ಯತೆಗಳಿದ್ದು, ಅಂತಹ ಪರಿಸ್ಥಿತಿ ಉಂಟಾಗುವ ಮುನ್ನವೇ ಬಾವಿಯನ್ನು ಮುಚ್ಚಿಸಬೇಕೆಂದು ಕಾಳಮ್ಮನಗರದ ನಿವಾಸಿಗಳು ಆಗ್ರಹಿಸಿದ್ದಾರೆ.
ಮನವಿಗೆ ಸ್ಪಂದಿಸಿದ ಪ.ಪಂ ಅಧ್ಯಕ್ಷೆ ಸುನಂದಾ ದಾಸ್, ಕೂಡಲೆ ಬಾವಿ ಮುಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಕಾಳಮ್ಮನಗರ ನಿವಾಸಿಗಳಾದ ನವೀನ ನಾಯ್ಕ, ದಿಲೀಪ ಅಂಬಿಗ, ಮುರುಳಿ ರಾವಲ್, ಉಲ್ಲಾಸ ಪಾಟೀಲ್, ಅಮಯ ನಾಯ್ಕ, ಸಚಿನ್ ಅಡಿಗೋಣ, ಅಕ್ಷಯ ನಾಯ್ಕ, ಸಹನ್ ಪಾಟೀಲ್ ಮನವಿ ನೀಡುವ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Leave a Comment