ಯಲ್ಲಾಪುರ: ಭೂಮಿ ಎಂದರೆ ಬರೀ ಮಣ್ಣಲ್ಲ; ದೇವಿ. ಪ್ರಾಚೀನ ಕಾಲದಿಂದಲೂ ಭೂದೇವಿಯನ್ನು ಪೂಜಿಸುವುದು ನಮ್ಮ ಪದ್ಧತಿ. ಅದು ಸದಾ ಮುಂದುವರಿಯಬೇಕು. ಇಂದಿನ ಸಮಾಜ ಅಧರ್ಮ ದತ್ತ ಸಾಗುತ್ತಿದೆ. ಸಹಜವಾಗಿ ಜೀವನ ಪದ್ಧತಿಯೇ ಆ ದಾರಿಯಲ್ಲಿ ಕ್ರಮಿಸುತ್ತಿದೆ ಅದುವೇ ಸನ್ನಿವೇಶಗಳು ವಿಪ್ಲವಕ್ಕೆ ಕಾರಣವಾಗುತ್ತಿದೆ ಎಂದು ಶ್ರೀ ಸೋಂದಾ ಸ್ವರ್ಣವಲ್ಲೀ ಮಠಾಧೀಶ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ನುಡಿದರು.

ಅವರು ತಾಲೂಕಿನ ವಜ್ರಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಗುಡ್ಡ-ರಸ್ತೆ ಕುಸಿತ ಪ್ರದೇಶ ವೀಕ್ಷಿಸಿ, ಆದರ್ಶ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಪ್ರಕೃತಿ ವೀಕೋಪದಿಂದ ಹಾನಿಗೊಳಗಾದ 45 ಕುಟುಂಬಗಳಿಗೆ ಪ್ರಸಾದ ರೂಪದ ಚೆಕ್ ವಿತರಿಸಿ, ಆಶೀರ್ವಚನ ನೀಡುತ್ತಿದ್ದರು.
ಇತಿಹಾಸದಲ್ಲಿ ಇಷ್ಟೊಂದು ಬೃಹತ್ ಪ್ರಮಾಣದ ಹಾನಿ ನಮ್ಮ ಪ್ರದೇಶದಲ್ಲಿ ಆಗಿದ್ದಿಲ್ಲ. ಉತ್ತರಪ್ರದೇಶದ ಭಾಗದಲ್ಲಿ ನೂರಾರು ಜನರು, ಊರಿಗೆ ಊರೂ ಕೊಚ್ಚಿ ಹೋಗಿರುವುದನ್ನ ನೋಡಿದ್ದೇವೆ, ಕೇಳಿದ್ದೇವೆ. ಆದರೆ, ನಮ್ಮ ಪ್ರದೇಶದಲ್ಲಿಯೂ ಇಂತಹ ಸ್ಥಿತಿ ಬಂದಿದೆ. ಈ ಕುರಿತು ಈಗಾಗಲೇ ಅನೇಕ ತಜ್ಞರು ಕಳಚೆ ಸೇರಿದಂತೆ ಈ ಎಲ್ಲ ಸ್ಥಳಗಳನ್ನ ವೀಕ್ಷಿಸಿ ಅಧ್ಯಯನ ಮಾಡಿದ್ದಾರೆ. ಅವರ ಸಲಹೆಯಂತೆ ಆದಷ್ಟು ಶೀಘ್ರದಲ್ಲಿ ಕಳಚೆ ಭಾಗದ ಸಂಪೂರ್ಣ ಜನರನ್ನ ಸ್ಥಳಾಂತರಿಸಲೇಬೇಕಾಗಿದೆ. ಸರ್ಕಾರ ಈ ಪರಿಸ್ಥಿತಿಯ ಕುರಿತು ಗಂಭೀರವಾಗಿ ಪರಿಗಣಿಸಿದ್ದರೂ, ಅಷ್ಟೇ ತ್ವರಿತವಾಗಿ ಜನರ ಸಮಸ್ಯೆಗೆ ಸ್ಪಂದನೆ ನೀಡುತ್ತಿರುವುದು ಕಂಡುಬಂದಿಲ್ಲ.

ಆ ನಿಟ್ಟಿನಲ್ಲಿ ಜಿಲ್ಲೆಯ ಶಾಸಕರು, ಸಚಿವರು ಸರ್ಕಾರದ ನೆರವನ್ನು ಶೀಘ್ರದಲ್ಲಿ ದೊರಕಿಸಿಕೊಡುವಂತೆ ಮಾಡಬೇಕೆಂದ ಶ್ರೀಗಳು, ಶ್ರೀಮಠದಿಂದ ಮತ್ತು ಕೆಲವು ಸಂಘ-ಸಂಸ್ಥೆ, ದಾನಿಗಳಿಂದ ಸಂಗ್ರಹಿಸಿ ಹಾನಿಗೊಳಪಟ್ಟ ಶಿಷ್ಯ ಸಮುದಾಯಕ್ಕೆ ಇನ್ನೂ ಹೆಚ್ಚಿನ ನೆರವನ್ನ ನೀಡಬೇಕಾಗಿತ್ತು. ಆದರೆ ಅದು ಸಾಧ್ಯವಾಗದೇ ಇದ್ದರೂ ಪ್ರಸಾದ ರೂಪದಲ್ಲಿ ನೀಡುತ್ತಿದ್ದೇವೆ. ಕಳೆದ ಎರಡು ತಿಂಗಳ ಹಿಂದೆ ಜರುಗಿದ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಚಾತುರ್ಮಾಸ್ಯ ವೃತಾಚರಣೆಯ ಕಾರಣದಿಂದ ಭೇಟಿಕೊಡಲು ಸಾಧ್ಯವಾಗಿಲ್ಲ. ಆದರೂ ಶಿಷ್ಯರಿಂದ ಘಟನೆಯ ಮಾಹಿತಿ ಪಡೆದು, ಸರ್ಕಾರಕ್ಕೆ ತಕ್ಷಣ ಸ್ಪಂದಿಸುವಂತೆ ಮಠದಿಂದ ಆಗ್ರಹಿಸಲಾಗಿತ್ತು ಎಂದರು.
ಶ್ರೀಮಠದ ವ್ಯವಸ್ಥಾಪಕ ಎಸ್.ಎನ್.ಗಾಂವ್ಕರ ಬೆಳ್ಳಿಪಾಲ ಹಾನಿಯ ಮಾಹಿತಿಯನ್ನು ನೀಡಿದರು. ವೇದ ವಿದ್ವಾಂಸರಿಂದ ವೇದಘೋಷ, ಡಿ.ಶಂಕರ ಭಟ್ಟ ಸ್ವಾಗತಿಸಿದರು, ಆದರ್ಶ ಸೇ.ಸ.ಸಂಘದ ಅಧ್ಯಕ್ಷ ನಾಗೇಂದ್ರ ಹೆಗಡೆ ಫಲ ಸಮರ್ಪಿಸಿದರು. ವೆಂಕಟ್ರಮಣ ಬೆಳ್ಳಿ ನಿರ್ವಹಿಸಿದರು. ಟಿ.ಎನ್.ಭಟ್ಟ ನಡಿಗೆಮನೆ ವಂದಿಸಿದರು.
Leave a Comment