ಹೊನ್ನಾವರ; ರಾಣಿ ಚೆನ್ನಭೈರಾದೇವಿ ಥೀಮ್‍ಪಾರ್ಕ್ ನಿರ್ಮಾಣ ಯೋಜನೆಯ ಸ್ಥಳೀಯ ಸಮಿತಿಯ ಸಭೆ ಶಾಸಕ ಸುನೀಲ ನಾಯ್ಕ ಅಧ್ಯಕ್ಷತೆಯಲ್ಲಿ ಕಾಸರಕೋಡಿನ ಅರಣ್ಯ ಇಲಾಖೆಯ ಅತಿಥಿಗೃಹದಲ್ಲಿ ನಡೆಯಿತು.
ಇಕೋಬೀಚ್, ಕಾಂಡ್ಲಾವನ ಪರಿಸರದಲ್ಲಿ ಒಂದು ಹೆಕ್ಟೇರ್ ಜಾಗವನ್ನು ಗುರುತಿಸಿ ಪಾರ್ಕ್‍ನಿರ್ಮಾಣ ಮಾಡಲು ನಿರ್ಧರಿಸಲಾಯಿತು ಅಥವಾ ಶರಾವತಿ ನದಿಗೆ ಹೊಂದಿಕೊಂಡಿರುವ ಭೂಮಿಯನ್ನು ದ್ವಿತೀಯ ಪ್ರಾಶಸ್ತ್ಯವೆಂದು ಪರಿಗಣಿಸಬೇಕು ಎಂದು ಅಭಿಪ್ರಾಯಪಡಲಾಯಿತು. ಅರಣ್ಯ ಇಲಾಖೆಯ ಭೂಮಿ ಪಡೆಯಲು ಇರುವ ತೊಡಕುಗಳನ್ನು ಡಿಎಫ್‍ಓ ವಿವರಿಸಿದರು.

ಪ್ರವಾಸೋದ್ಯಮ ಮತ್ತು ಜಿಲ್ಲೆಯ ಅಭಿವೃದ್ಧಿಯ ದೃಷ್ಠಿಯಿಂದ 52 ವರ್ಷ ಕರಾವಳಿ ಮತ್ತು ಮಲೆನಾಡನ್ನು ಆಳಿದ ರಾಣಿಗೆ ಸೂಕ್ತವಾದ ಗೌರವದ ಪಾರ್ಕ್‍ನಿರ್ಮಾಣ ಮತ್ತು ಇದರಿಂದ ಜನಸ್ಫೂರ್ತಿ ಪಡೆಯಲು ಅನುಕೂಲವಾಗುವುದು. ಆದ್ದರಿಂದ ಅರಣ್ಯ ಇಲಾಖೆಯ ಭೂಮಿಯನ್ನು ಎಷ್ಟೇ ಕಷ್ಟವಾದರೂ ಪಡೆಯೋಣ ಎಂದು ಶಾಸಕ ದಿನಕರ ಶೆಟ್ಟಿ ತಮ್ಮ ಅಭಿಪ್ರಾಯ ವ್ಯಕ್ತಮಾಡಿದರು.
ಅಧ್ಯಕ್ಷತೆ ವಹಿಸಿದ ಸುನೀಲ ನಾಯ್ಕ ಮಾತನಾಡಿ ಕರ್ನಾಟಕ ಹೆಮ್ಮೆಪಡುವಂತೆ ರಾಜ್ಯಭಾರ ಮಾಡಿದ ರಾಣಿ ಚೆನ್ನಭೈರಾದೇವಿಯ ಕುರಿತು ಸ್ಮಾರಕ ಆಗಲೇ ಬೇಕು, ಭೂಮಿ ಪಡೆಯೋಣ. ಪದ್ಮವಿಭೂಷಣ ಡಾ. ವೀರೇಂದ್ರ ಹೆಗ್ಗಡೆಯವರು ಸ್ಥಳ ನಿರ್ಧರಿಸಿ, ಅವರ ಮಾರ್ಗದರ್ಶನ ಮತ್ತು ಪ್ರೇರಣೆಯಂತೆ ಒಂದು ವರ್ಷದಲ್ಲಿ ಪಾರ್ಕ್ ನಿರ್ಮಾಣ ಮಾಡುವ ಗುರಿ ಇಟ್ಟುಕೊಳ್ಳೋಣ.
ಇದೇ ಡಿಸೆಂಬರ್‍ನಲ್ಲಿ ಹೆಗ್ಗಡೆಯವರ ದಿನಾಂಕ ಪಡೆದು ಕಾಸರಕೋಡಿನ ಅರಣ್ಯ ಇಲಾಖೆಯ ತರಬೇತಿ ಕಟ್ಟಡದಲ್ಲಿ ಒಂದು ದಿನ ರಾಣಿ ಚೆನ್ನಭೈರಾದೇವಿಯ ಕುರಿತು ಇತಿಹಾಸಜ್ಞರನ್ನು ಸೇರಿಸಿ ವಿಚಾರ ಸಂಕಿರಣ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳೋಣ ಎಂದು ತೀರ್ಮಾನಿಸಲಾಯಿತು. ಕಾರ್ಯದರ್ಶಿ ಜಿ.ಯು. ಭಟ್ ಪ್ರಾಸ್ತಾವಿಕ ಮಾತನಾಡಿದರು. ಗಣಪತಿ ನಾಯ್ಕ ಬಿಟಿ ನಾಯ್ಕ ಸ್ವಾಗತಿಸಿ, ವಂದಿಸಿದರು. ಸಮಿತಿಯ ಸದಸ್ಯರಾದ ಉದ್ಯಮಿ ಮುರಳೀಧರ ಪ್ರಭು, ಸೆಲ್ಕೋದ ಮೋಹನ ಹೆಗಡೆ, ಸಾಮಾಜಿಕ ಕಾರ್ಯಕರ್ತ ಚಂದ್ರು ಗೌಡ, ಉಪ ಅರಣ್ಯಸಂರಕ್ಷಣಾಧಿಕಾರಿ ಗಣಪತಿ, ಸಿಪಿಐ ಶ್ರೀಧರ ಎಸ್.ಆರ್. ಭಟ್ಕಳ, ಹೊನ್ನಾವರ, ಕುಮಟಾದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ಪಾಲ್ಗೊಂಡಿದ್ದರು.
Leave a Comment