
ಯಲ್ಲಾಪುರ : ಪಟ್ಟಣದ ಬೆಲ್ ರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್ ನಲ್ಲಿ ಗ್ರಾಹಕರಿಗೆ ಪೂರ್ಣ ಪ್ರಮಾಣದ ಆಹಾರವನ್ನು ಹಾಗೂ ಮೆನ್ಯೂನಲ್ಲಿ ನಿರ್ಧರಿಸಿದಂತೆ ಆಹಾರ ಪದಾರ್ಥಗಳನ್ನು ನೀಡಲಾಗುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ಇಂದಿರಾ ಕ್ಯಾಂಟೀನ್ಗಳಲ್ಲಿ ಸರ್ಕಾರ ನಿರ್ಧರಿಸಿದಂತೆ ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ಗ್ರಾಹಕರಿಗೆ ಒದಗಿಸಬೇಕು ಎಂದಿದ್ದರೂ ಯಲ್ಲಾಪುರದ ಇಂದಿರಾ ಕ್ಯಾಂಟೀನ್ನಲ್ಲಿ ಸಾಮಾನ್ಯ ವಾಗಿ ದಿನವೂ ಪಲಾವ್ ಹಾಗೂ ಕಡಿಮೆ ತೂಕದಲ್ಲಿ ನೀಡಿ ಸಾರ್ವಜನಿಕರಿಗೆ ವಂಚಿಸುವ ಕಾರ್ಯ ವಾಗಿದೆ ಎಂದು ಅನಿಲ್ ಭಟ್, ಚಂದ್ರು ಹಾಗೂ ರಾಜು ಉಡುಪಿಕರ ಅಮೃತ ಮುಂತಾದವರು ದೂರಿದ್ದಾರೆ.

ಈ ಕುರಿತು ಕ್ಯಾಂಟೀನ್ನ ವ್ಯವಸ್ಥಾಪಕ ಲೋಹಿತ್ ರನ್ನು ಪ್ರಶ್ನಿಸಿದಾಗ ನಾವು ಮೆನ್ಯೂವಿನಂತೆ ಆಹಾರವನ್ನು ಸಿದ್ದಪಡಿಸಲು ಆಗುವುದಿಲ್ಲ. ಆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಡುಗೆಯನ್ನು ಸಿದ್ದಪಡಿಸುತ್ತೇವೆ ಎಂದು ಉತ್ತರಿಸಿದ್ದಾರೆ.
ಇನ್ನು ನಿಗದಿ ಪಡಿಸಿದ ಪ್ರಮಾಣಕ್ಕಿಂತ ಕಡಿಮೆ ಆಹಾರವನ್ನು ನೀಡಲಾಗುತ್ತಿರುವದರ ಕುರಿತು ವಿಚಾರಿಸಿದಾಗ ಗೂಗಲ್ನಲ್ಲಿ ನೋಡಿ, ಅಲ್ಲಿರುವಷ್ಟೇ ಆಹಾರವನ್ನು ಕೊಡುತ್ತೇವೆ ಎಂದಾಗ ಅವರ ಮುಂದಯೇ ಗ್ರಾಹಕರು ಪರಿಶೀಲಿಸಿದಾಗ ಗೂಗಲ್ ನಲ್ಲಿ ಪರಿಷ್ಕರಿಸಲಾದ ಪಟ್ಟಿಯು ಕಂಡುಬಂದಿದೆ. ಈ ಕುರಿತು ಪ್ರಶ್ನಿಸಿದಾಗ ನಮಗೆ ಎಷ್ಟು ಪ್ರಮಾಣವನ್ನು ನೀಡಲು ತಿಳಿಸಿಲಾಗಿದೆಯೋ ಅಷ್ಟೇ ನೀಡಲಾಗುತ್ತಿದೆ. ನಾನು ಪರಿಷ್ಕ್ರತ ಪಟ್ಟಿಯನ್ನು ನೋಡಿಲ್ಲ ಎಂದು ಉಡಾಫೆಯ ಉತ್ತರ ನೀಡಿದ್ದಾರೆ.
ಇನ್ನು ಕ್ಯಾಂಟೀನ್ನಲ್ಲಿ ಕಾರ್ಯ ನಿರ್ವಹಿಸುವ ಸ್ಥಳೀಯ ಕೆಲಸಗಾರರಿಗೆ ಸರಿಯಾದ ವೇತನವನ್ನು ಸಹ ನೀಡಲಾಗುತ್ತಿಲ್ಲ. ಈ ಕುರಿತು ಅವರು ಪಟ್ಟಣ ಪಂಚಾಯತ ಸಭೆಯಲ್ಲಿ ಹಲವು ಬಾರಿ ತಮ್ಮ ಅಳಲನ್ನು ಸಹ ತೋಡಿಕೊಂಡಿದ್ದಾರೆ. ಟೆಂಡರ್ನ್ನು ಪಡೆದಂತವರು ಕಳೆದ ವರ್ಷ ಸಪ್ಟೆಂಬರ್ ನಿಂದ ವೇತನವನ್ನು ನೀಡಿಲ್ಲ ಎಂದು ಕೆಲಸದವರು ತಿಳಿಸಿದ್ದಾರೆ.
ಏನೇ ಆದರು ಸರ್ಕಾರ ಶ್ರಮಿಕ ಹಾಗೂ ಬಡ ವರ್ಗದ ಜನರಿಗೆ ಸಹಾಯಕವಾಗಲೆಂದು ಕಡಿಮೆ ಬೆಲೆಯಲ್ಲಿ ಆಹಾರವನ್ನು ಒದಗಿಸಲು ಇರುವ ಸೌಲಭ್ಯ ಕ್ಕೆ ಕೊಕ್ಕೆ ಹಾಕುತ್ತಿರುವದು ಬೇಸರದ ಸಂಗತಿ. ಸರ್ಕಾರ ನಿಗದಿ ಪಡೆಸಿದ ಪ್ರಮಾಣದಲ್ಲಿ, ನಿಗದಿ ಪಡಿಸಿದ ಪಟ್ಟಿಯಂತೆ, ಉತ್ತಮ ಗುಣಮಟ್ಟದ ಆಹಾರವನ್ನು ಒದಗಿಸಿದರೆ ಸಾಕು ಎಂಬುದು ಸಾರ್ವಜನಿಕರ ಅಭಿಪ್ರಾಯ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಗಮನಹರಸಿಬೇಕಾಗಿದೆ.
Leave a Comment