ಯಲ್ಲಾಪುರ : ಮನುವಿಕಾಸ ಸಂಸ್ಥೆಯಡಿ ತಾಲೂಕಿನ ಸಿದ್ದಿ ಜನಾಂಗದ ಯುವಕ ಯುವತಿಯರಿಗೆ ಹಮ್ಮಿಕೊಂಡಿದ್ದ ಹೋಟೆಲ್ ಮ್ಯಾನೇಜ್‌ಮೆಂಟ್ ತರಬೇತಿಯ ಪ್ರಮಾಣ ಪತ್ರ ವಿತರಣಾ ಸಮಾರಂಭವು ಮುಂಡಗೋಡ ರಸ್ತೆಯ ಕೋಡ್ಕಣಿ ಬಿಲ್ಡಿಂಗ್‌ನಲ್ಲಿ ನೆರವೇರಿತು.
ತರಬೇತಿಯನ್ನು ಪೂರ್ಣಗೊಳಿಸಿದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ತಾಲೂಕ ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಜಗದೀಶ ಕಮ್ಮಾರ, ಮನುವಿಕಾಸ ಸಂಸ್ಥೆಯಂತಹ ಎನ್.ಜಿ.ಓ. ಗಳು ಶೈಕ್ಷಣಿಕವಾಗಿ ಸಮಾಜವನ್ನು ಸದೃಢಗೊಳಿಸಲು ತೊಡಗಿಕೊಂಡಿರುವುದು ಸಂತಸದ ವಿಷಯ. ಸಾಮಾನ್ಯವಾಗಿ ಸಿದ್ದಿ ಜನಾಂಗದವರು ಹಿಂದುಳಿದ ಜನಾಂಗದವರು ಎಂಬ ಭಾವನೆಯಿದೆ. ಆದರೆ ಮುಂದಿನ ದಿನಗಳಲ್ಲಿ ಸಮಾಜದ ಎಲ್ಲ ವಿಭಾಗಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಸಬಲೀಕರಣಗೊಳಿಸಬೇಕಿದೆ. ಮುಂದೆ ಸರ್ಕಾರದ ಪ್ರಾಯೋಜಕತ್ವದಲ್ಲಿ ಬುಡಕಟ್ಟು ಜನಾಂಗದ ಕಲೆಯನ್ನು ಉಳಿಸಿ ಬೆಳೆಸುವ ಹಾಗೂ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ನಿಟ್ಟಿನಲ್ಲಿ ರೆಸಾರ್ಟ್‌ಗಳನ್ನು ಆರಂಭಿಸುವ ಯೋಜನೆ ಜಾರಿಗೆ ಬರಲಿದೆ. ಅಂತಹ ಯೋಜನೆಗಳಿಗೆ ಈ ತರಬೇತಿಯು ಬಲ ತುಂಬಲಿದೆ ಎಂದರು.
ಮನುವಿಕಾಸ ಸಂಸ್ಥೆಯ ಸಂಚಾಲಕಿ ಗೀತಾ ಪಾಟೀಲ್ ಮಾತನಾಡಿ, ನಮ್ಮ ಸಂಸ್ಥೆಯ ಮಹಿಳೆಯರ, ಯುವಕ-ಯುವತಿಯರನ್ನು ಸಬಲೀಕರಣಕ್ಕಾಗಿ ಅನೇಕ ತರಬೇತಿಯನ್ನು ನಡೆಸುತ್ತಿದ್ದೇವೆ. ನಾವು ಈ ಬಾರಿ ತರಬೇತಿಗೆ ಸಿದ್ದಿ ಸಮುದಾಯವನ್ನು ಆಯ್ಕೆ ಮಾಡಲು ಮುಖ್ಯ ಕಾರಣವೇ, ಎಲ್ಲರಂತೆಯೇ ಅವರೂ ಸಹ ಸಮಾಜದೊಡನೆ ಬೆರೆಯಬೇಕು ಎಂಬುದಾಗಿದೆ ಎಂದರು.
ಮನುವಿಕಾಸ ಸಂಸ್ಥೆಯ ನಿರ್ದೇಶಕರ ಗಣಪತಿ ಭಟ್ಟ ಮಾತನಾಡಿದರು
ಕಾರ್ಯಕ್ರಮದಲ್ಲಿ ಮುನು ವಿಕಾಸ ಸಂಸ್ಥೆಯ ಯಲ್ಲಾಪುರದ ಸಂಯೋಜಕ ಮೋಹನ ಸಿದ್ದಿ, ತಾ.ಪಂ. ಸಹಾಯಕ ನಿರ್ದೇಶಕ ರುದ್ರಯ್ಯ ಹಿರೇಮಠ ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
Leave a Comment