ಯಲ್ಲಾಪುರ : ಯಲ್ಲಾಪುರ ತಾಲ್ಲೂಕಿನ ಭರತನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುದೀರ್ಘ ಕಾಲ ಮುಖ್ಯಾಧ್ಯಾಫಕರಾಗಿ ಸೆವೆ ಸಲ್ಲಿಸಿ,60-70 ರ ದಶಕದಲ್ಲಿ ಶಾಲಾ ಶಿಕ್ಷಣ ದೊಂದಿಗೆ ಯಕ್ಷಗಾನ ವನ್ನು ಚಿಕ್ಕ ಮಕ್ಕಳಿಗೆ ಕಲಿಸಿ ರಾಜ್ಯ ಮಟ್ಟದಲ್ಲಿ ಗಮನ ಸೆಳೆದ ಶಿಕ್ಷಕ. ಶ್ರೀ ಕೃಷ್ಣ ಭೀಮ ಗೌಡ ಅವರು 15-2-1937 ರ ಶ್ರೀ ಕೃಷ್ಣ ಜನ್ಮಾಷ್ಟಮಿ ಯಂದು ಜನಿಸಿ 18-8-2022 ರ ಶ್ರೀ ಕೃಷ್ಣ ಜನ್ಮಾಷ್ಟಮಿ ದಿನ ಸ್ವರ್ಗಸ್ಥರಾಗಿರುವುದು ಅವರ ಅಭಿಮಾನಿ ಶಿಷ್ಯ ರಲ್ಲಿ ಅಚ್ಚರಿ ಮೂಡಿಸಿದೆ
ಅಂಕೋಲಾ ತಾಲೂಕಿನ ಬೆಳಂಬರದವರಾಗಿದ್ದ ಶ್ರೀ ಕೆ.ಬಿ.ಗೌಡರು,ತಾಲೂಕಿನ ಭರತನಹಳ್ಳಿ ಹಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಕರಾಗಿ ಬಂದದ್ದು 1960 ರ ದಶಕದಲ್ಲಿ. ಜನರ ಮೇಲಿನ ಅವರ ಪ್ರೀತಿ, ಮಕ್ಕಳ ಮೇಲಿನ ಅವರ ಅಕ್ಕರೆ ಹೆಚ್ಚು ಕಮ್ಮಿ ನಿವೃತರಾಗುವ ವರೆಗೂ ಒಂದೇ ಶಾಲೆಯಲ್ಲಿ ಉಳಿಯುವಂತೆ ಮಾಡಿತು!
1966 ರಲ್ಲಿ ಅವರು ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡಿ ಜನೆವರಿ ಇಪ್ಪತ್ತಾರರಂದು ಶಾಲಾ ಆವಾರದಲ್ಲಿ ನಡೆಸುತ್ತಿದ್ದ ಮಕ್ಕಳ ಯಕ್ಷಗಾನ ಕಾರ್ಯಕ್ರಮ ಕಲಾ ರಸಿಕರಿಗೆ ಹಬ್ಬದ ವಾತಾವರಣ ಉಂಟು ಮಾಡುತ್ತಿತ್ತು. ಅಲ್ಲದೆ, ಅಂದು ಹೆಣ್ಣು ಮಕ್ಕಳದೇ ಮದ್ದಳೆ ಮತ್ತು ಭಾಗವತಿಕೆ ಕೂಡ ಇರುತ್ತಿತ್ತು! ಅದು ಸುಮಾರು 1980 ರ ದಶಕದ ಕೆಲ ವರುಷಗಳ ವರೆಗೂ ನಡೆದು ನಂತರ ನಿಂತು ಹೋಯಿತು. ಗೌಡಾ ಮಾಸ್ತರು ಭರತನಹಳ್ಳಿಯಲ್ಲಿ ಪ್ರಾರಂಭಿಸಿದ ಭಜನಾ ಮಂಡಳಿ ಇವತ್ತಿಗೂ ಚಾಲ್ತಿಯಲ್ಲಿದೆ.
ಅವರು ಪಾಠ ಮಾಡುವ ರೀತಿ ಮಕ್ಕಳಿಗೆ ಖುಷಿ ಕೊಡುತ್ತಿತ್ತು. ಅದು ಕತೆ ಉಪಕತೆಗಳಿಂದ ಕೂಡಿರುತ್ತಿತ್ತು. ಅವರು ಪದ್ಯಗಳನ್ನೂ ಅಷ್ಟೇ ಸೊಗಸಾಗಿ ವಿವರಿಸುತ್ತಿದ್ದರು. ಅನೇಕ ಬಡ ಮಕ್ಕಳಿಗೆ ಪಾಟಿ, ಪುಸ್ತಕಗಳನ್ನು ಕೊಟ್ಟು ಓದು ಕಲಿಸಿದ ಪುಣ್ಯಾತ್ಮ ಅವರು. ಅವರಿಂದ ಪಾಠ ಕೇಳಿದ ಅನೇಕರು ಈಗ ತಮ್ಮ ವೃತ್ತಿಯಿಂದ ನಿವೃತ್ತರಾಗಿದ್ದಾರೆ. ಮನೆಯಲ್ಲಿಯೇ ಉಳಿದು ಮುದುಕರಾಗುತ್ತಿರುವ ತಮ್ಮ ವಿದ್ಯಾರ್ಥಿಗಳ ಮಕ್ಕಿಗಷ್ಟೇ ಅಲ್ಲದೆ ಅವರ ಮೊಮ್ಮಕ್ಕಳಿಗೂ ಪಾಠ ಹೇಳಿದ ಹಿರಿಮೆ ಗೌಡಾ ಮಾಸ್ತರರದು!
ಅವರಿಗೆ ಬೆನ್ನೆಲುಬಾಗಿ ನಿಂತ ಭರತನಹಳ್ಳಿಯ ಪರಶುರಾಮಜ್ಜ, ಕಿರ್ಮಾನಿ ಹನ್ಮಂತ,ತಿಪ್ಪಯ್ಯ ಪಟಗಾರ ತೋಟದಕಲ್ಲಳ್ಳಿಯ ಗೋಪಾಲಜ್ಜ ಮೊದಲಾದ ಅನೇಕ ಹಿರಿಯರು ಈಗಿಲ್ಲ. 1937 ರ ಶ್ರೀಕೃಷ್ಣ ಜನ್ಮಾಷ್ಟಮಿಯಂದೇ ಜನಿಸಿದ್ದ ಶ್ರೀಯುತರು, ನಿನ್ನೆ 2022 ರ ಶ್ರೀಕೃಷ್ಣ ಜನ್ಮಾಷ್ಟಮಿಯ ದಿನವೇ ಗೋಧೂಳಿಯ ಹೊತ್ತಿನಲ್ಲಿ -ಒಂದೆರಡು ದಿನಗಳ ಅಸ್ವಸ್ಥತೆಯ ನಂತರ- ಇಬ್ಬರು ಗಂಡು,ಇಬ್ಬರು ಹೆಣ್ಣು ಮಕ್ಕಳು ಮತ್ತು ತಮ್ಮ ಪ್ರೀತಿಯ ಮಡದಿ ಸತ್ಯಭಾಮೆ, ಮೊಮ್ಮಕ್ಕಳು, ಅಪಾರ ಶಿಶ್ಯವರ್ಗವನ್ನು ಬಿಟ್ಟು ಇಹಲೋಕ ತ್ಯಜಿಸಿರುತ್ತಾರೆ.
Leave a Comment