ಹೊನ್ನಾವರ:
ಇಲ್ಲಿಯ ಪಟ್ಟಣ ಪಂಚಾಯಿತಿಯಲ್ಲಿ ಅತಿ ಅಗತ್ಯವಾಗಿರುವ ಕಿರಿಯ ಆರೋಗ್ಯ ನಿರೀಕ್ಷರ ಹುದ್ದೆ ಹಾಗೂ ಇತರ ಸಿಬ್ಬಂದಿಗಳ ಹುದ್ದೆ ಕಳೆದ ಒಂದುವರೆ ವರ್ಷದಿಂದ ಖಾಲಿ ಇದ್ದರೂ ಭರ್ತಿ ಮಾಡದಿರುವುದನ್ನು ವಿರೋಧಿಸಿ ಪ.ಪಂ. ಸದಸ್ಯರು ಪ.ಪಂ. ಎದುರು ಧರಣಿ ಕುಳಿತು ಪ್ರತಿಭಟನೆ ನಡೆಸಿದರು.
ಒಂದು ಒಪ್ಪತ್ತು ಧರಣಿ ನಡೆಸಿ ನಂತರ ತಹಸೀಲ್ದಾರರ ಮೂಲಕ ಜಿಲ್ಲಾಧಿಕಾರಿಯವರಿಗೆ ಹಾಗೂ ಸರಕಾರಕ್ಕೆ ಮನವಿ ಸಲ್ಲಿಸಿದರು.
ಮನವಿ: ಹೊನ್ನಾವರ ಪ.ಪಂ. ಜನಸಂಖ್ಯೆ 2011 ಜನಗಣತಿ ಪ್ರಕಾರ 19109 ಇದೆ. ಪ.ಪಂ.ದಲ್ಲಿ ಬಹಳಷ್ಟು ಹುದ್ದೆಗಳು ಖಾಲಿ ಇದ್ದು ಸಕಾಲದಲ್ಲಿ ಸಾರ್ವಜನಿಕರಿಗೆ ಸೇವೆ ಒದಗಿಸುವುದು ಕಷ್ಟವಾಗಿದೆ. ಅತಿ ಅಗತ್ಯವಾಗಿರುವ ಕಿರಿಯ ಆರೋಗ್ಯ ನಿರೀಕ್ಷಕರ ಹುದ್ದೆ ಖಾಲಿ ಇದ್ದು ಘನ ತ್ಯಾಜ್ಯ ವಸ್ತು ನಿರ್ವಹಣೆ, ಸ್ವಚ್ಚ ಭಾರತ ಮಿಷನ್, ಉದ್ದಿಮೆ ಪರವಾನಿಗೆ, ಜನನ ಮರಣ , ಪಟ್ಟಣ ಪಂಚಾಯಿತಿಯ ಸ್ವಚ್ಚತಾ ಕಾರ್ಯಕ್ರಮಕ್ಕೆ ಅಡೆ ತಡೆ ಉಂಟಾಗಿದೆ. ಜನನ ಮರಣ ಪ್ರಮಾಣ ಪತ್ರಗಳನ್ನು ಆರೋಗ್ಯ ನಿರೀಕ್ಷಕರು ನೀಡಬೇಕಾದುದಾಗಿದ್ದು ಈ ಹುದ್ದೆ ಖಾಲಿ ಇರುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗಿದೆ ಎಂದು ಮನವಿ ಯಲ್ಲಿ ದೂರಿದ್ದಾರೆ.
ಕಮ್ಯುನಿಟಿ ಆಪೇರ್ಸ್ ಆಫೀಸರ್, ಕಿರಿಯ ಆರೋಗ್ಯ ನಿರೀಕ್ಷಕರು, ದ್ವಿತೀಯ ದರ್ಜೆ ಸಹಾಯಕರು, ಕಂಪ್ಯೂಟರ್ ಆಪರೇಟರ್, ಡ್ರೈವರ್, ಪಂಪ್ ಆಪರೇಟರ್, ತೆರಿಗೆ ವಸೂಲಿ ಸಹಾಯಕ, ಸಹಾಯಕ ಪಂಪ್ ಆಪರೇಟರ್, ಪೌರ ಕಾರ್ಮಿಕ ತಲಾ 1 ಹುದ್ದೆಗಳು, ಲೋಡರ್ಸ್ 4, ವಾಲ್ವ್ಮನ್ 2 ಹುದ್ದೆಗಳು, ಒಟ್ಟೂ 15 ಹುದ್ದೆಗಳು ಖಾಲಿ ಇವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಪ.ಪಂ. ಕಾರ್ಯಾಲಯದ ವಿಳಂಬ ನೀತಿಯಿಂದ ಸಾರ್ವಜನಿಕರಿಗೆ ಹೆಚ್ಚು ತೊಂದರೆ ಆಗುತ್ತಿದೆ. ಒಂದುವರೆ ವರ್ಷದಿಂದ ಆರೋಗ್ಯ ನಿರೀಕ್ಷಕರ ಹುದ್ದೆಗೆ ಯಾವುದೇ ಅಧಿಕಾರಿ ಇಲ್ಲದೇ ಖಾಲಿ ಖುರ್ಚಿ ಮಾತ್ರ ಇದೆ. ನಾಲ್ಕೈದು ತಿಂಗಳುಗಳ ಹಿಂದಿನಿಂದ ಕಂದಾಯ ನಿರೀಕ್ಷಕರ ಹುದ್ದೆ ಕೂಡ ಖಾಲಿ ಇದೆ. ಇದರಿಂದ ಆಸ್ತಿ ತೆರಿಗೆ, ಮಳಿಗೆಗಳ ತೆರಿಗೆ ವಸೂಲಾತಿ ಈ ವರ್ಷದ ಅವಧಿಯಲ್ಲಿ ಕಡಿಮೆ ಆಗಿದೆ. ಪ.ಪಂ. ಕಂದಾಯ ವಿಭಾಗವು ನಷ್ಟ ಅನುಭವಿಸುತ್ತಿದೆ ಎಂದು ಮನವಿಯಲ್ಲಿ ವಿವರಿಸಿದ್ದಾರೆ.
ಜಿಲ್ಲಾಧಿಕಾರಿಯವರ ಆದೇಶದನ್ವಯ ಆರೋಗ್ಯ ನಿರೀಕ್ಷಕರಾಗಿ ಸೋಮಶೇಖರ ಬಿ. ಅಕ್ಕಿ ಎಂಬವರು ಮಾರ್ಚ 1 ರಂದು ಮುಂಡಗೋಡದಿಂದ ಹೊನ್ನಾವರ ಪ.ಪಂ. ಗೆ ವರ್ಗಾವಣೆಯಾಗಿ ಬಂದಿದ್ದರು. ಜಿಲ್ಲಾಧಿಕಾರಿಗಳು ಮಾರ್ಚ್ 28 ರಂದು ಪುನಃ ಅವರನ್ನು ಮುಂಡಗೋಡಿಗೆ ವರ್ಗಾವಣೆ ಮಾಡಿದ್ದಾರೆ ಎಂದು ಮನವಿಯಲ್ಲಿ ದೂರಿದ್ದ್ದಾರೆ.
ಎದುರೇ ಹಾದುಹೋದರೂ ಬಾರದ ಶಾರದಾ ಶೆಟ್ಟಿ:
ಪ.ಪಂ. ದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಆಗ್ರಹಿಸಿ ಪ.ಪಂ. ಎಲ್ಲ ಸದಸ್ಯರು ಧರಣಿ ಕುಳಿತಿದ್ದರೂ ಪ.ಪಂ. ಎದುರಿಂದಲೇ ಪ್ರವಾಸಿ ಮಂದಿರಕ್ಕೆ ಹಾದುಹೋದ ಶಾಸಕಿ ಶಾರದಾ ಶೆಟ್ಟಿ ಸ್ಥಳಕ್ಕೆ ಬಂದು ಅಹವಾಲು ಕೇಳುವ ಸೌಜನ್ಯವನ್ನೂ ತೋರಿಸಿಲ್ಲ ಎಂದು ಪ.ಪಂ. ಹಿರಿಯ ಸದಸ್ಯ ನೀಲಕಂಠ ನಾಯ್ಕ ಈ ಸಂದರ್ಣದಲ್ಲಿ ಆರೋಪಿಸಿದ್ದು ಶಾಸಕರ ವರ್ತನೆಯನ್ನು ಧರಣಿ ನಿರತ ಎಲ್ಲ ಸದಸ್ಯರು ಖಂಡಿಸಿದರು.
ಪ್ರತಿಭಟನಾ ಧರಣಿ ನಡೆಸುತ್ತಿದ್ದೇವೆ. ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಬೇಕು ಎಂದು ಪ.ಪಂ. ಅಧ್ಯಕ್ಷರು ಶಾಸಕಿ ಶಾರದಾ ಶೆಟ್ಟಿಯವರಿಗೆ ಬೆಳಿಗ್ಗೆ ದೂರವಾಣಿ ಕರೆ ಮಾಡಿ ಕೇಳಿಕೊಂಡಿದ್ದರು. ಆದರೂ ಅವರು ಹೊನ್ನಾವರಕ್ಕೆ ಬಂದರೂ ಸ್ಥಳಕ್ಕೆ ಬರಲಿಲ್ಲ. ಬಂದು ಸಮಸ್ಯೆ ಆಲಿಸಿ ಸ್ವಂದಿಸುವುದು ಅವರ ಕರ್ತವ್ಯವಾಗಿತ್ತು ಎಂದು ನೀಲಕಂಠ ನಾಯ್ಕ ಆರೋಪಿಸಿದರು.
ಧರಣಿಯಲ್ಲಿ ಪ,ಪಂ. ಅಧ್ಯಕ್ಷೆ ಜೈನಾಬಿ ಸಾಬ್, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ ಮೇಸ್ತ, ಸದಸ್ಯರುಗಳಾದ ರವೀಂದ್ರ ನಾಯ್ಕ, ಸುರೇಶ ಶೇಟ್, ಬಾಲಕೃಷ್ಣ ಬಾಳೇರಿ, ನೀಲಕಂಠ ನಾಯ್ಕ, ತುಳಸೀದಾಸ ಪುಲಕರ, ಜೋಸ್ಫಿನ್ ಡಾಯಸ್, ಜಮಿಲಾಬಿ ಶೇಖ್, ತಾರಾ ಕುಮಾರಸ್ವಾಮಿ ನಾಯ್ಕ, ನಾಗೇಶ ಮೇಸ್ತ, ಸಿ. ಜಿ. ನಾಯ್ಕ. ಶೀಲಾ ಹೊನ್ನಾವರ. ದಾಮೋದರ ಮೇಸ್ತ ಮತ್ತಿತರ ಸದಸ್ಯರು ಪಾಲ್ಗೊಂಡಿದ್ದರು.
Leave a Comment