ಹೊನ್ನಾವರ:
“ಆಧ್ಯಾತ್ಮ ಹಾಗೂ ಹಾಸ್ಯಕ್ಕೆ ಬದುಕು ಕಟ್ಟುವ ಶಕ್ತಿಯಿದ್ದು ನಿತ್ಯ ಜೀವನದ ಹಲವು ಘಟನೆಗಳು ನವಿರು ಹಾಸ್ಯಕ್ಕೆ ವಸ್ತುವಾಗುತ್ತವೆ’ ಎಂದು ಸಾಹಿತಿ ಹಾಗೂ ಮಂಗಳೂರು ವಿವಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಭುವನೇಶ್ವರಿ ಹೆಗಡೆ ಅಭಿಪ್ರಾಯಪಟ್ಟರು.
ಇಲ್ಲಿಯ ಎಂಪಿಇ ಸೊಸೈಟಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಾರ್ಷಿಕ ಸ್ನೇಹ ಸಮ್ಮೇಳನದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು,ಕಾಲೇಜು ದಿನಗಳು ಬದುಕಿನಲ್ಲಿ ಅತ್ಯಂತ ಮಹತ್ವದ ಕಾಲಘಟ್ಟವಾಗಿದ್ದು ಒಳ್ಳೆಯ ಪುಸ್ತಕಗಳ ಓದಿನ ಮೂಲಕ ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವವನ್ನು ವಿಕಾಸಗೊಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
“ಓದು,ಅಧ್ಯಾಪಕರಿಂದ ಕಲಿತದ್ದು ಹಾಗೂ ಸ್ವಾನುಭವ ಬದುಕಿನಲ್ಲಿ ದಾರಿದೀಪವಾಗುತ್ತದೆ.ಮರ ಬೇರನ್ನು ಭೂಮಿಯೊಳಗಿಳಿಸಿ ಗಟ್ಟಿಯಾಗುವಂತೆ ಜೀವನಾನುಭವದ ಗಾಢತೆ ಮನುಷ್ಯನಿಗೆ ದೃಢತೆಯನ್ನು ನೀಡುತ್ತದೆ.ಜೀವನದಲ್ಲಿ ಯಾರನ್ನೂ ಪೂರ್ತಿಯಾಗಿ ನಂಬದೆ ದುಷ್ಟತನದ ಬಗ್ಗೆ ಎಚ್ಚರವಹಿಸುವ ಜಾಣರು ನಾವಾಗಬೇಕು’ಎಂದು ಅವರು ಹೇಳಿದರು.
ಸಹಾಯಕ ಆಯುಕ್ತ ಎಂ.ಎನ್.ಮಂಜುನಾಥ ಮಾತನಾಡಿ,ಉನ್ನತ ಕನಸನ್ನು ಇಟ್ಟುಕೊಂಡು ಅದನ್ನು ನನಸಾಗಿಸಲು ಅಗತ್ಯ ಪ್ರಯತ್ನ ಕೈಗೊಳ್ಳಬೇಕು.ಬಾಹ್ಯ ಆಕರ್ಷಣೆಗೆ ಒಳಗಾಗದೆ ಯಶಸ್ಸಿನ ಕಡೆ ಗಮನ ಕೇಂದ್ರೀಕರಿಸಿದರೆ ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಸಾಧಿಸಬಹುದು’ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಪ್ರೊ.ಎಸ್.ಎಸ್.ಹೆಗಡೆ ಮಾತನಾಡಿ,ಕಾಲೇಜು ಪ್ರಗತಿಯ ಪ್ರಥದಲ್ಲಿ ಸಾಗಿದ್ದು ವಿದ್ಯಾರ್ಥಿಗಳು ಗಮನಾರ್ಹ ಕೊಡುಗೆ ನೀಡಿದ್ದಾರೆ’ಎಂದು ಹೇಳಿದರು.
ಎಂಪಿಇ ಸೊಸೈಟಿಯ ಅಧ್ಯಕ್ಷ ಡಾ.ಎಂ.ಪಿ.ಕರ್ಕಿ,ವಿದ್ಯಾರ್ಥಿ ಕಾರ್ಯದರ್ಶಿಗಳಾದ ಸಚಿನ್ ಎಂ.ನಾಯ್ಕ,ಪ್ರಗತಿ ಭಂಡಾರಿ,ಮಂಜುನಾಥ ದೀಕ್ಷಿತ್ ಉಪಸ್ಥಿತರಿದ್ದರು.
ಸಂಗೀತ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥನಾ ಗೀತೆ ಹಾಡಿದರು.ಡಾ.ವಿ.ಎಂ.ಭಂಡಾರಿ ಸ್ವಾಗತಿಸಿದರು.ಡಾ.ಡಿ.ಎಲ್.ಹೆಬ್ಬಾರ ಅತಿಥಿ ಪರಿಚಯ ಮಾಡಿದರು.ಪ್ರೊ.ನಾಗರಾಜ ಹೆಗಡೆ ಅಪಗಾಲ್ ನಿರೂಪಿಸಿದರು.ಪ್ರಧಾನ ಕಾರ್ಯದರ್ಶಿ ದೀಪಕ ನಾಯ್ಕ ವಂದಿಸಿದರು.
ಸಾಧನೆಗೈದ ವಿದ್ಯಾರ್ಥಿಗಳನ್ನು ಹಾಗೂ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.ವಿದ್ಯಾರ್ಥಿಗಳಿಂದ ವಿವಿಧ ಮನರಂಜನಾ ಕಾರ್ಯಕ್ರಮಗಳು ಜರುಗಿದವು.
Leave a Comment