ಹೊನ್ನಾವರ:
ಈಗ ಇಂಜನಿಯರಿಂಗ್‍ಗೆ ಬೇಡಿಕೆ ಇಲ್ಲ. ಇಂಜನಿಯರಿಂಗ್ ಪಡೆದವರು ಕೆಲಸ ಸಿಗದೇ ಪರದಾಡುತ್ತಿದ್ದಾರೆ. ವಿದ್ಯಾರ್ಥಿಗಳು ಕೇವಲ ಇಂಜನಿಯರಿಂಗ್ ಮಾಡುವ ಯೋಚನೆ ಬಿಟ್ಟು ಮಾರುಕಟ್ಟೆ ಅಧ್ಯಯನ ಮಾಡಿ ಬೇಡಿಕೆ ಇರುವ ಕ್ಷೇತ್ರದ ಸಂಬಂಧಿಸಿದ ಶಿಕ್ಷಣ ಪಡೆಯಬೇಕು ಎಂದು ವಿ. ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್‍ನ ಧರ್ಮದರ್ಶಿ ಪ್ರಶಾಂತ ದೇಶಪಾಂಡೆ ಹೇಳಿದರು.
ಪಟ್ಟಣದ ನ್ಯೂ ಇಂಗ್ಲೀಷ ಶಾಲಾ ಸಭಾಭವನದಲ್ಲಿ ವಿ. ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್‍ನಿಂದ ವಿದ್ಯಾರ್ಥಿಗಳಿಗೆ ಸ್ಕಾಲರ್‍ಶಿಪ್ ವಿತರಿಸಿ ಮಾತನಾಡಿದ ಅವರು ಸಾಫ್ಟವೇರ್ ಇಂಜನಿಯರಿಂಗ್ ಮಾಡಿದವರು ಹೆಚ್ಚು ಕಷ್ಟ ಅನುಭವಿಸುತ್ತಿದ್ದಾರೆ. ಒಬ್ಬ ಡೊನಾಲ್ಡ್ ಟ್ರಂಪ್ ಬಂದಾಗ ಅಮೇರಿಕಾದಲ್ಲಿರುವ ಭಾರತೀಯ ಸಾಪ್ಟವೇರ್ ಇಂಜನಿಯರ್‍ರು ಉದ್ಯೋಗ ಕಳೆದುಕೊಂಡು ವಾಪಸ್ ಬರುವ ಸ್ಥಿತಿ ಬಂದೊದಗುತ್ತಿದೆ ಎಂದರು.
ತನಗೆ ಬರುವ ಇಮೇಲ್‍ಗಳಲ್ಲಿ ಕೆಲಸ ಕೇಳುವವರು ಶೇಕಡಾ 99 ರಷ್ಟು ಜನ ಸಾಫ್ಟವೇರ್ ಇಂಜನಿಯರಿಂಗ್ ಶಿಕ್ಷಣ ಪಡೆದವರೇ ಆಗಿದ್ದಾರೆ. ಬಿಎಸ್‍ಸಿ ಅಗ್ರಿ, ಎಂ. ಎಸ್‍ಸಿ ಅಗ್ರಿ ಶಿಕ್ಷಣ ಪಡೆದವರು ಬೇಕೆಂದರೂ ಇಲ್ಲ. ಹಲವಾರು ಕಂಪನಿಗಳು ಸಾಫ್ಟವೇರ್ ಇಂಜನಿಯರ್ ಬೇಡ ಸಿವಿಲ್ ಇಂಜನಿಯರ್ ಬೇಕು ಎಂದು ಹುಡುಕುತ್ತಿದ್ದಾರೆ. ಸಿವಿಲ್ ಇಂಜನಿಯರಿಂಗ್ ಮಾಡಿದವರೂ ಸಿಗುತ್ತಿಲ್ಲ. ಆದ್ದರಿಂದ ಕೇವಲ ಎಲ್ಲರೂ ಇಂಜನಿಯರಿಂಗ್ ಶಿಕ್ಷಣವನ್ನು ಮಾತ್ರ ಪಡೆಯುವ ಬದಲು ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಕ್ಷೇತ್ರಗಳ ಬಗ್ಗೆ ತಿಳಿದುಕೊಳ್ಳಿ ಎಂದರು.
ಯುವ ಜನಾಂಗ ರಾಜಕೀಯದಲ್ಲೂ ಸಕ್ರಿಯವಾಗಿರಬೇಕು. ರಾಜಕೀಯವೆಂದರೆ ಕೇವಲ ಫೇಸ್‍ಬುಕ್, ವಾಟ್ಸ್‍ಅಪ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ಸ್ ಹಾಕಿದರಾಗಲಿಲ್ಲ. ಜನರ ನಡುವಿನಿಂದ ಮೇಲೆದ್ದು ಬರಬೇಕು. ಈಗಿನ ವಿದ್ಯಾರ್ಥಿಗಳು ಭವಿಷ್ಯದ ಭಾರತದ ನಿರ್ಮಾತೃರು. ಕೇವಲ ಮತ ಹಾಕುವುದೊಂದೇ ಅಲ್ಲ. ದೇಶದ ಆರ್ಥಿಕ, ಸಾಮಾಜಿಕ, ಔದ್ಯೋಗಿಕ ಸಬಲತೆಯ ನಿರ್ಮಾತೃರೂ ಆಗಿದ್ದಾರೆ ಎಂದರು.
ಸ್ವಾಮಿ ವಿವೇಕಾನಂದರು ಚಿಕಾಗೋದಲ್ಲಿ ಭಾಷಣ ಮಾಡುವಾಗ ಬಡ ದೇಶದ ಇವರು ಏನು ಮಾತನಾಡಬಲ್ಲರು ಎಂದು ಅಲ್ಲಿಯವರು ಅಂದುಕೊಂಡಿದ್ದರು. ಆದರೆ ಅವರು ನಮ್ಮಲ್ಲಿ ಆತ್ಮವಿಶ್ವಾಸ ಇದೆ ಎಂಬುದನ್ನು, ನಮ್ಮ ಸಂಸ್ಕøತಿಯನ್ನು ಎತ್ತಿತೋರಿಸಿದರು. ನಮ್ಮ ಸಂಸ್ಕøತಿಯಲ್ಲಿ ಆತ್ಮ ವಿಶ್ವಾಸವಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಮಂಕಾಳ ವೈದ್ಯ ಮಾತನಾಡಿ ಆರ್. ವಿ. ದೇಶಪಾಂಡೆಯವರು ಕೇವಲ ಸಚಿವರಾಗಿ ಮಾತ್ರವಲ್ಲ ವಿ.ಆರ್. ಮೆಮೋರಿಯಲ್ ಟ್ರಸ್ಟ ಸ್ಥಾಪಸಿ ಅದರ ಮೂಲಕ ಉತ್ತರ ಕನ್ನಡ ಜಿಲ್ಲೆಯ ಜನರಿಗೆ ಆರೋಗ್ಯ ಹಾಗೂ ಶಿಕ್ಷಣದ ಸೇವೆ ನೀಡುತ್ತಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ ಜಿ.ಪಂ. ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಕಡತೋಕಾ ಶಿವಾನಂದ ಹೆಗಡೆ ಮಾತನಾಡಿ ಆರ್. ವಿ. ದೇಶಪಾಂಡೆಯವರು ಕೈಗಾರಿಕಾ ಸಚಿವರಾಗಿ ಕರ್ನಾಕಟವನ್ನು ವಿಶ್ವ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ. ವಿ. ಆರ್. ಮೆಮೋರಿಯಲ್ ಟ್ರಸ್ಟ್ ಮೂಲಕ ಜಿಲ್ಲೆ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ನೆರವು, ತಾಂತ್ರಿಕ ಶಿಕ್ಷಣ, ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿವ ಮೂಲಕ ಜಿಲ್ಲೆಯ ಎಲ್ಲ ಜನರ ಏಳ್ಗೆಯಾಗಬೇಕೆಂದು ರಚನಾತ್ಮಕವಾಗಿ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ ಎಂದರು.
ಹಿರಿಯ ಪತ್ರಿಕಾ ವರದಿಗಾರ ಜಿ. ಯು. ಭಟ್. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತೆ ಜಾನಪದ ಸಾಹಿತಿ ಶಾಂತಿ ನಾಯಕ, ಸಾಹಿತಿ ಡಾ. ಶ್ರೀಪಾದ ಶೆಟ್ಟಿ, ಡಿಎಫ್‍ಓ ವಸಂತ ರೆಡ್ಡಿ, ಉದ್ಯಮಿ ಜೆ.ಟಿ. ಪೈ ಮಾತನಾಡಿದರು. ವೇದಿಕೆಯಲ್ಲಿ ಜಿ.ಪಂ. ಸದಸ್ಯರಾದ ದೀಪಕ ನಾಯ್ಕ, ಪುಷ್ಪಾ ನಾಯ್ಕ, ಸವಿತಾ ಕೃಷ್ಣ ಗೌಡ, ಮಂಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಗೌಡ, ನಿವೃತ್ತ ಪ್ರಾಚಾರ್ಯ ಹೆಚ್ ಎನ್. ಪೈ. ಉಪಸ್ಥಿತರಿದ್ದರು.
ಡಾ. ಬಿ. ಆರ್. ಅಂಬೇಡ್ಕರ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಲಾಯಿತು. ಬೆಳಿಗ್ಗೆ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಶಿಬಿರ ನಡೆಯಿತು. 199 ವಿದ್ಯಾರ್ಥಿಗಳಿಗೆ 9.73 ಲಕ್ಷ ರೂ. ವಿದ್ಯಾರ್ಥಿವೇತನವನ್ನು ಟ್ರಸ್ಟ್ ವತಿಯಿಂದ ವಿತರಿಸಲಾಯಿತು.
Leave a Comment