ಕಾರವಾರ: ಸರ್ಕಾರಿ ಸ್ವಾಮ್ಯದ ಕೆಎಸ್ಆರ್ಟಿಸಿ ಹಾಗೂ ಖಾಸಗಿ ಸಾರಿಗೆ ಸಂಸ್ಥೆಯಾದ ಸುಗಮ ಟ್ರಾವೆಲ್ಸನ ಚಾಲಕರಿಬ್ಬರು ಹೊಡೆದಾಡಿಕೊಂಡ ಘಟನೆ ಶನಿವಾರ ಬೆಳಗ್ಗೆ ಬಸ್ ನಿಲ್ದಾಣ ಬಳಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಆಕ್ರೋಶಗೊಂಡ ಕೆಎಸ್ಆರ್ಟಿಸಿ ನೌಕರರು ಸುಗಮ ಬಸ್ ಚಾಲಕನನ್ನು ಬಂಧಿಸುವಂತೆ ಆಗ್ರಹಿಸಿ ಬಸ್ ತಡೆದು ದಿಡೀರ್ ಪ್ರತಿಭಟನೆ ನಡೆಸಿದರು.
ಘಟನೆಯಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಚಾಲಕರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಮುದಗಾದಿಂದ ವಾಯುವ್ಯ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ನಗರಕ್ಕೆ ಆಗಮಿಸುತ್ತಿದ್ದ ವೇಳೆ ಹಿಂದಿನಿಂದ ವೇಗವಾಗಿ ಬಂದ ಸುಗಮಾ ಬಸ್ ಬಿಣಗಾದ ಬಳಿ ಅಪಾಯಕಾರಿಯಾಗಿ ಓವರ್ ಟೇಕ್ ಮಾಡಿರುವದೇ ಇವೆಲ್ಲ ಅವಾಂತರಗಳಿಗೆ ಮೂಲ ಕಾರಣ. ಓವರಟೇಕ್ ಮಾಡುವಾಗ ಚಾಲಕನ ಅಜಾಗರೂಕತೆಯಿಂದ ಸಾರಿಗೆ ಬಸ್ಗೆ ಡಿಕ್ಕಿಯಾಗುವ ಸಂಭವ ಇದ್ದು, ಇದನ್ನು ತಪ್ಪಿಸುವ ಸಲುವಾಗಿ ಸಾರಿಗೆ ಬಸ್ ಚಾಲಕ ಎಡಗಡೆಗೆ ಬಸ್ ಚಲಾಯಿಸಿದ್ದು ಸ್ವಲ್ಪದರಲ್ಲಿಯೇ ಗುಂಡಿಗೆ ಬಿದ್ದು ಭಾರೀ ಅಪಘಾತ ಸಂಭವಿಸುವುದು ತಪ್ಪಿದೆ. ಬಸ್ಸಿನಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಅಧಿಕ ಸಂಖ್ಯೆಯಲ್ಲಿದ್ದು ದೊಡ್ಡ ಅಪಾಯದಿಂದ ಪಾರಾಗಿದ್ದಾರೆ.
ನಗರದ ಬಸ್ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಹತ್ತಿರದಲ್ಲಿಯೇ ಇದ್ದ ಸುಗಮ ಕಚೇರಿಗೆ ಬಸ್ ಚಾಲಕ ಕೆಲವು ಸಿಬ್ಬಂದಿ ತೆರಳಿ ಅಜಾಗೂರಕತೆಯ ಚಾಲನೆಯ ಬಗ್ಗೆ ವಿಚಾರಿಸಿದ್ದಾರೆ. ಆದರೆ ಇದರಿಂದ ಕೋಪಗೊಂಡ ಸುಗಮ ಚಾಲಕ ಹಾಗೂ ಏಜೆಂಟ್ ಸೇರಿ ಕಚೇರಿಯ ಬಾಗಿಲು ಮುಚ್ಚಿಕೊಂಡು ಕೆ.ಎಸ್.ಆರ್.ಟಿ.ಸಿ. ಚಾಲಕ ಚಂದ್ರಹಾಸ ಎಂಬಾತರಿಗೆ ಥಳಿಸಿದ್ದಾರೆ. ಇದನ್ನು ತಪ್ಪಿಸಲು ಹೋಗಿದ್ದ ಇನ್ನೋರ್ವ ಚಾಲಕ ಏಕನಾಥ ಮೇಲೆಯೂ ಸುಗಮ ಟ್ರಾವೆಲ್ಸ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ. ತಮ್ಮ ಕೈ, ಕಾಲು, ಹೊಟ್ಟೆ ಹಾಗೂ ಮರ್ಮಾಂಗದ ಮೇಲೆ ಹಲ್ಲೆ ಮಾಡಿದರು ಎಂದು ಚಾಲಕ ಚಂದ್ರಹಾಸ ಹೇಳಿಕೆ ನೀಡಿದ್ದು, ಬಳಿಕ ಇತರ ಕೆ.ಎಸ್.ಆರ್.ಟಿ.ಸಿ. ಸಿಬ್ಬಂದಿ ಚಂದ್ರಹಾಸ ಹಾಗೂ ಏಕನಾಥರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದರು. ದಿಡೀರ್ ಪ್ರತಿಭಟನೆ ನಡೆಸಿ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿದರು.
ಸುಗಮ ಬಸ್ ಚಾಲಕನು ತಮ್ಮ ಬಸ್ ಚಾಲಕರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು ಆರೋಪಿಯನ್ನು ಬಂಧಿಸುವವರೆಗೂ ತಾವು ಬಸ್ ಸಂಚಾರ ಆರಂಭಿಸುವುದಿಲ್ಲ ಎಂದು ಎಲ್ಲ ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿ ಪಟ್ಟು ಹಿಡಿದರು. ದೂರು ದಾಖಲಿಸಿದರೂ ಆರೋಪಿಯನ್ನು ಬಂಧಿಸಿದ ಕಾರಣ ಎಲ್ಲ ಸಿಬ್ಬಂದಿಗಳು ಸುಗಮ ಕಚೇರಿಗೆ ಮುತ್ತಿಗೆ ಹಾಕಿದರು. ನಗರಠಾಣೆ ಪಿ.ಎಸ್.ಐ. ಉಮೇಶ ಪಾವಸ್ಕರ, ಸಿ.ಪಿ.ಐ. ಶಿವಕುಮಾರ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಿ ಆರೋಪಿಯನ್ನು ಬಂಧಿಸುವುದಾಗಿ ತಿಳಿಸಿದರು. ಆದರೆ ಪಟ್ಟು ಬಿಡದ ಪ್ರತಿಭಟನಾಕಾರರು ಕಚೇರಿ ಒಳಗೆ ಆರೋಪಿ ಅಡಗಿದ್ದು, ಕೂಡಲೇ ಬಂಧಿಸುವಂತೆ ಪಟ್ಟು ಹಿಡಿದರು. ಆರೋಪಿಯನ್ನು ಬಂಧಿಸದೇ ತಪ್ಪಿಸಿಕೊಳ್ಳಲು ಪೋಲಿಸರು ಸಹಾಯ ಮಾಡಿದ್ದಾರೆ ಎಂದು ದೂರಿದರು.
ಬೆಳಗ್ಗೆಯೇ ಘಟನೆ ನಡೆದಿದ್ದರಿಂದ ವಿವಿಧ ಭಾಗಗಳಿಗೆ ತೆರಳುವ ಪ್ರಯಾಣಿಕರು ಪರದಾಡಿದರು. ಆರೋಪಿ ಬಂಧಿಸುವವರೆಗೂ ಪ್ರತಿಭಟನೆ ನಿಲ್ಲಿಸದ ಬಗ್ಗೆ ಸಿಬ್ಬಂದಿ ಹೇಳಿದಾಗ ಆರೋಪಿಗಳಿಬ್ಬರು ಪೊಲೀಸ್ ಠಾಣೆಯಲ್ಲಿರುವದಾಗಿ ತಿಳಿಸಿ ಪ್ರತಿಭಟನಾಕಾರರ ಮನವೊಲೈಸಲಾಯಿತು. ಎಲ್ಲರೂ ಪೊಲೀಸ್ ಠಾಣೆಗೆ ತೆರಳಿ ಆರೋಪಿ ಠಾಣೆಯಲ್ಲಿರುವುದನ್ನು ಖಚಿತ ಪಡಿಸಿಕೊಂಡರು. ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿ ತಮ್ಮ ಪ್ರತಿಭಟನೆಯನ್ನು ಹಿಂತೆಗೆದುಕೊಂಡರು. ಸುಗಮ ಟ್ರಾವೆಲ್ಸ ಬಸ್ಗಳು ಯಾವಾಗಲೂ ಪುಟ್ಬಾತ್ ಮೇಲೆ ನಿಂತಿದ್ದು, ಜನರ ಓಡಾಟಕ್ಕೂ ತೊಂದರೆ ನೀಡುತ್ತವೆ. ಇದಲ್ಲದೇ ಸದಾ ಚಿಕ್ಕಪುಟ್ಟ ಅಪಘಾತ ಮಾಡಿಕೊಂಡು ಎದುರುದಾರರಿಂದ ಹಣ ವಸೂಲಿ ಮಾಡುವದನ್ನು ರೂಡಿಸಿಕೊಂಡಿವೆ ಎಂದು ಸಾರ್ವಜನಿಕರು ಆರೋಪಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ಪ್ರತಿದೂರು ದಾಖಲಾಗಿದೆ. ಸುಗಮ ಟ್ರಾವಲ್ಸ ಸಿಬ್ಬಂದಿಯನ್ನು ಬಂಧಿಸಿರುವ ಬಗ್ಗೆ ಪಿಸೈ ಉಮೇಶ್ ಪಾವಸ್ಕರ್ ಖಚಿತ ಪಡಿಸಿದ್ದು, ಬಂಧನಕ್ಕೊಳಗಾದವರ ಹೆಸರು ಬಹಿರಂಗ ಪಡಿಸಲು ನಿರಾಕರಿಸಿದರು. ಹೆಸರು ಬಹಿರಂಗ ಪಡಿಸದಿರುವದು ಕೂಡ ಅನುಮಾನಕ್ಕೆ ಕಾರಣವಾಗಿದೆ.
Leave a Comment