ಹೊನ್ನಾವರ:
ತಾಲೂಕಾಡಳಿತದಿಂದ 71ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ತಹಸೀಲ್ದಾರ್ ವಿ.ಆರ್.ಗೌಡ ನೆರವೇರಿಸಿದರು.
ನಂತರ ತಮ್ಮ ಸಂದೇಶದಲ್ಲಿ 1947 ರಲ್ಲಿ ಇಂಗ್ಲೀಷರನ್ನು ಹೊಡೆದೋಡಿಸಿದ ಸಂತಸದಲ್ಲಿ ಈ ದಿನವನ್ನು ಆಚರಿಸುತ್ತಿದ್ದೇವೆ. ವರ್ಷದಿಂದ ವರ್ಷ ಕಳೆದರೂ ನಮ್ಮ ಉತ್ಸಾಹ ತಗ್ಗಲಿಲ್ಲ. ಸ್ವಾಂತ್ರ್ಯ ಪೂರ್ವದಲ್ಲಿ ಇಂಗ್ಲೀಷರಿಂದ ಶೋಷಣೆ, ದಬ್ಬಾಳಿಕೆ, ನಮ್ಮ ಹಿರಿಯರಿಂದ ತಿಳಿದಾಗ ಅದರ ಮಹತ್ವ ಅರಿವಾಗುತ್ತದೆ. ಅವರ ತ್ಯಾಗ, ಬಲಿದಾನ ಸತ್ಯಾಗ್ರಹಗಳೇ ನಾವು ಸ್ವತಂತ್ರವಾಗಲು ಸಾಧ್ಯವಾಗಿದೆ. ದೇಶ ಪ್ರಗತಿಯ ಪಥದಲ್ಲಿ ಸಾಗಿದೆ. ಹಾಗಂತ ಸಮಸ್ಯೆಗಳೇ ಇಲ್ಲ ಎಂದಲ್ಲ. ನಾವೆಲ್ಲರೂ ಬಯಲು ಮಲವಿಸರ್ಜನಾ ಮುಕ್ತ ತಾಲೂಕು ಎಂಬ ವರ್ಷ ಶೀರ್ಷಿಕೆಯಡಿಯಲ್ಲಿ ಕಾರ್ಯಪ್ರವರ್ತರಾಗಿದ್ದೇವೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯವಿದೆ. ದೇಶ ಕಾಯುವ ಸೈನಿಕರಿಗೆ ಗೌರವಿಸಬೇಕು ಎಂದರು.
ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಿಸಲಾಯಿತು. ತಾಲೂಕಿನ ಇಡಗುಂಜಿ ಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಎಲ್ವಿರಾ ಅಂಥೋನ ಡಯಾಸ್, ಅನುಷಾ ತಿಮ್ಮಪ್ಪ ಮೇಸ್ತ, ಸರ್ಕಾರಿ ಪ್ರೌಢಶಾಲೆ ಗೇರುಸೊಪ್ಪದ ದಿವ್ಯಾ ಸುರೇಶ ನಾಯ್ಕ, ಸರ್ಕಾರಿ ಪ್ರೌಢಶಾಲೆಯ ಎಚ್.ಎಸ್.ಶ್ರೇಯಾ ಇವರಿಗೆ 50 ಸಾವಿರ ರೂ. ಮೌಲ್ಯದ ಲ್ಯಾಪ್ಟಾಪ್ ವಿತರಿಸಲಾಯಿತು.
ಪಟ್ಟಣದ ಮಾರ್ಥೋಮಾ ಪೌಢಶಾಲೆಯ ವಿದ್ಯಾರ್ಥಿನಿ ಪ್ರಮಥ ಗಜಾನನ ಭಟ್ಟ 625 ಅಂಕಗಳಿಗೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಇವಳ ಈ ಸಾಧನೆ ಎಲ್ಲರಿಗೂ ಪ್ರೇರಣೆಯಾಗಲಿ ಎಂದು ಹಾರೈಸಿದರು.
ವಿವಿಧ ಶಾಲೆಯ ವಿದ್ಯಾರ್ಥಿಗಳು, ಹೋಮ್ ಗಾರ್ಡ್, ಸ್ಕೌಟ್ ಗೈಡ್ಸ್, ಪೊಲೀಸ್ ಇಲಾಖೆ, ಕರ್ನಾಟಕ ರಾಜ್ಯ ಸುನ್ನೀ ಸ್ಟುಡೇಂಟ್ ಫೆಡರೇಶನ್ ಸದಸ್ಯರು ಧ್ವಜಾರೋಹಣದಲ್ಲಿ ಪಾಲ್ಗೊಂಡಿದ್ದರು. ಪಿಎಸ್ಐ ಆನಂದಮೂರ್ತಿ ಪೆರೇಡ್ ನೇತೃತ್ವವನ್ನು ವಹಿಸಿದ್ದರು.
ತಾ.ಪಂ ಅಧ್ಯಕ್ಷೆ ಲಲಿತಾ ನಾಯ್ಕ, ಪ.ಪಂ ಅಧ್ಯಕ್ಷೆ ಜೈನಾಭಿ ಸಾಬ್, ಉಪಾಧ್ಯಕ್ಷೆ ಶರಾವತಿ ಮೇಸ್ತ, ಬಿಇಒ ಜಿ.ಎಸ್.ಭಟ್ಟ, ಇಒ ಡಾ.ಮಹೇಶ ಕುರಿಯವರ್, ಮಾಜಿ ಶಾಸಕ ಡಾ.ಎಂ.ಪಿ.ಕರ್ಕಿ, ಡಾ.ತಲಕಣಿ, ಪ.ಪಂ ಸದಸ್ಯರಾದ ಸುರೇಶ ಮೇಸ್ತ, ಜೋಸ್ಪಿನ್ ಡಯಾಸ್, ಸಿ.ಜಿ.ನಾಯ್ಕ, ತಾ.ಪಂ ಸದಸ್ಯೆ ಮೀರಾ ತಾಂಡೇಲ್, ಯೋಗೇಶ ರಾಯ್ಕರ್, ಭಾಷಾ ಅಹಮದ್ ಪಟೇಲ್, ಹುಸೇನ್ ಖಾದ್ರಿ ಇತರರು ಇದ್ದರು.
Leave a Comment