ಕಾರವಾರ: ಕ್ಷುಲ್ಲಕ ಕಾರಣಕ್ಕಾಗಿ ಸಚಿವರ ಮುಂದೆಯೇ ಶಾಸಕ ಸತೀಶ್ ಸೈಲ್ ಹಾಗೂ ಎನ್ಎಸ್ಯುಐ ವಿದ್ಯಾರ್ಥಿ ಸಂಘಟನೆಯ ಸಿದ್ದಾರ್ಥ ನಾಯ್ಕ ಕಚ್ಚಾಟ ನಡೆಸಿದ ಘಟನೆ ಮಾಜಾಳಿಯಲ್ಲಿ ಮಂಗವಾರ ನಡೆಯಿತು.
ನಗರದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕಳೆದ ಕೆಲ ವರ್ಷಗಳಿಂದ ನಡೆಯುತ್ತಿರುವ ಎಂಜಿನಿಯರಿಂಗ್ ತರಗತಿಗಳಿಗೆ ಸೂಕ್ತ ಸ್ಥಳವಕಾಶವಿಲ್ಲದೆ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿರುವ ಬಗ್ಗೆ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಮಂಗಳವಾರ ಕಾಲೇಜು ಕಟ್ಟಡಕ್ಕೆ ತೆರಳಿ ಸಚಿವರು ಪರಿಶೀಲಿಸಿದರು. ಈ ವೇಳೆ ವಿದ್ಯಾರ್ಥಿ ಮುಖಂಡ ಸಿದ್ದಾರ್ಥ ನಾಯ್ಕ ಹಾಗೂ ಶಾಸಕ ಸತೀಶ್ ಸೈಲ್ ವಿನಾಕಾರಣ ಮಾತಿಗೆ ಮಾತು ಬೆಳೆಸಿದರು. ಎಂಜಿನಿಯರಿಂಗ್ ಕಾಲೇಜಿಗೆ ಸಂಬಂಧಿಸಿದಂತೆ ಶಾಸಕರನ್ನು ನಿಂದಿಸಿರುವ ಬಗ್ಗೆ ಸಿದ್ದಾರ್ಥ ನಾಯ್ಕರನ್ನು ಸೈಲ್ ಪ್ರಶ್ನಿಸಿದರು. ಇದೇ ವಿಷಯ ಬೆಳೆದು ಮಾತಿನ ಚಕಮಕಿ ನಡೆಯಿತು. ಮದ್ಯ ಪ್ರವೇಶಿಸಿದ ಸಚಿವರು ವಿದ್ಯಾರ್ಥಿಗಳು ಪಾಠ, ಕ್ರೀಡೆಗಳತ್ತ ಗಮನ ಹರಿಸಬೇಕು. ಅನಾವಷ್ಯಕವಾಗಿ ಗೊಂದಲ ಸೃಷ್ಠಿಸಿಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.
ಕಾಲೇಜಿನ ಮೂರು ಕಟ್ಟಡಗಳು ಬಹುತೇಕ ಪೂರ್ಣಗೊಂಡಿದೆ. ವೈರಿಂಗ್, ಪೇಂಟಿಂಗ್, ಪರಿಕರಗಳ ಜೋಡಣೆ ಬಾಕಿ ಇದೆ. ಆದರೆ ಹಣ ಬಿಡುಗಡೆಯಾಗದ ಕಾರಣ ತೊಂದರೆಯಾಗುತ್ತದೆ. ಅದನ್ನು ಸದ್ಯದಲ್ಲಿಯೇ ಪೂರ್ಣಗೊಳಿಸುವುದಾಗಿ ಏಂಜಿನಿಯರ್ ರಮೇಶ ಸಚಿವರಿಗೆ ತಿಳಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕ ಸತೀಸ್ ಸೈಲ್, ಕಾಲೇಜಿನಲ್ಲಿ ಕಟ್ಟಡ ಕಾಮಗಾರಿ ನಡೆಸುತ್ತಿದ್ದು ನಾಲ್ಕುವರ್ಷ ಕಳೆದರು ಮುಗಿಸಿಲ್ಲ. ಪ್ರತಿ ಭಾರಿಯೂ ಸಮಯವನ್ನು ತೆಗೆದುಕೊಳ್ಳುತ್ತಿದ್ದಾರೆ. ಅಲ್ಲದೆ ಎರಡು ಹಾಸ್ಟಲ್ಗಳ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಕಾಲೇಜಿಗೆ ಬರಲು ಸೂಕ್ತ ರಸ್ತೆ ಇಲ್ಲ. ಗುತ್ತಿಗೆದಾರರಿಗೆ ಅವಧಿಯನ್ನು ನಿಗದಿ ಪಡಿಸಿ ಕಾಮಗಾರಿ ಮುಗಿಸಲು ಸೂಚಿಸಬೇಕು ಎಂದು ಸಚಿವರ ಗಮನಕ್ಕೆ ತಂದರು.
ಸಚಿವರು ಲ್ಯಾಂಡ್ ಆರ್ಮಿ ಅಧಿಕಾರಿ ಕರೆದು ವಿಚಾರಿಸಿದಾಗ ಎರಡು ಹಾಸ್ಟೆಲ್ಗಳ ಕಟ್ಟಡಗಳಿಗೆ ಮಂಜೂರಿಯಾದ ಹಣ ಬಿಡುಗಡೆಯಾಗದೆ ತೊಂದರೆಯಾಗಿರುವ ಬಗ್ಗೆ ವಿವರಿಸಿದರು. ತಕ್ಷಣ ಸಂಬಂಧಪಟ್ಟ ಇಲಾಖೆ ಮುಖ್ಯ ಕಾರ್ಯದರ್ಶಿಗೆ ಪೋನ್ ಮೂಲಕ ಸಂಪರ್ಕಿಸಿದ ಅವರು ಹಣ ಬಿಡುಗಡೆ ಮಾಡುವಂತೆ ತಿಳಿಸಿದರು. ಆದರೆ ಈ ವೇಳೆ ಲ್ಯಾಂಡ್ ಆರ್ಮಿ ಅಧಿಕಾರಿಗಳಿಂದ ಯಾವುದೇ ಪ್ರಸ್ತಾವನೇ ಬಂದಿಲ್ಲ ಎಂದು ಕಾರ್ಯದರ್ಶಿ ತಿಳಿಸಿದರು. ಈ ವೇಳೆ ಸಿಟ್ಟಾದ ಸಚಿವರು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಅಲ್ಲದೆ ಕಾಲೇಜಿನ ಕಟ್ಟಡ ಕಾಮಗಾರಿಯನ್ನು ಒಂದು ತಿಂಗಳೊಳಗೆ ಮುಗಿಸಬೇಕು. ಇನ್ನೂ ಹಾಸ್ಟೆಲ್ಗಳನ್ನು ಶೀಘ್ರದಲ್ಲಿ ಮುಗಿಸಿ ಒಂದೊಂದೆ ವಿಭಾಗವನ್ನು ಕಾಲೇಜಿಗೆ ಸ್ಥಳಾಂತರ ಮಾಡಿ ತರಗತಿ ಪ್ರಾರಂಭಿಸಬೇಕು. ಅಲ್ಲದೆ ಕಾಲೇಜಿಗೆ ಅವಶ್ಯವಿರುವ ರಸ್ತೆ ಬಗ್ಗೆ ಪ್ರಸ್ತಾವನೆ ಸಲ್ಲಿಸಿ ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
Leave a Comment