ಕಾರವಾರ: ವಾಣಿಜ್ಯ ಬಂದರು ವಿಸ್ತರಣೆಯಿಂದ ಮೀನುಗಾರಿಕೆಯ ಜೊತೆ ಪ್ರವಾಸೋಧ್ಯಮ ಬೆಳವಣಿಗೆಗೂ ತೊಂದರೆಯಾಗಲಿದೆ ಎಂದು ಮೀನುಗಾರ ಮುಖಂಡ ಕೆ.ಟಿ ತಾಂಡೇಲ್ ಹೇಳಿದರು.
ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಅವರು, ವಿವಿಧ ಯೋಜನೆಗಳಿಗೆ ಕಾರವಾರದಲ್ಲಿನ ಬಹುತೇಕ ಕಡಲತೀರಗಳು ಸಾರ್ವಜನಿಕರ ಪ್ರವೇಶದಿಂದ ದೂರ ಉಳಿದಿದೆ. ಸದ್ಯ ಮಾಜಾಳಿ ಕಡಲತೀರ ಹಾಗೂ ರವೀಂದ್ರನಾಥ್ ಕಡಲತೀರಗಳಲ್ಲಿ ಮಾತ್ರ ಸಾರ್ವಜನಿಕ ಪ್ರವೇಶಕ್ಕೆ ಅವಕಾಶ ನೀಡಲಾಗಿದ್ದು, ವಾಣಿಜ್ಯ ಬಂದರು ವಿಸ್ತರಣೆ ನಡೆದಲ್ಲಿ ರವೀಂದ್ರನಾಥ್ ಕಡಲತೀರವೂ ನಿರ್ಬಂದಿತ ಪ್ರದೇಶವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಕಡಲತೀರದಲ್ಲಿನ ಮಾಲಿನ್ಯ ತಡೆಯಬೇಕು. ಕಾರವಾರ ಕಡಲ ತೀರದ ಸೌಂದರ್ಯ ಹೆಚ್ಚಿಸಬೇಕು ಎಂದು ಸರ್ಕಾರ ಸಾಕಷ್ಟು ಅನುಧಾನ ಬಿಡುಗಡೆ ಮಾಡಿ ಪ್ರವಾಸೋಧ್ಯಮ ಅಭಿವೃದ್ದಿ ಮಾಡಿದೆ. ಹೀಗಿರುವಾಗ ಬಂದರು ವಿಸ್ತರಣೆ ಮಾಡಿದಲ್ಲಿ ಕಡಲತೀರ ಅಭಿವೃದ್ದಿಗೆ ಕೋಟ್ಯಾಂತರ ರೂ ವೆಚ್ಚ ಮಾಡಿರುವದಕ್ಕೆ ಅರ್ಥವಿರುವದಿಲ್ಲ ಎಂದರು.
ಬಂದರು ವಿಸ್ತರಣೆಯನ್ನು ಸ್ಥಗಿತಗೊಳಿಸಬೇಕು. ಈ ನಿಟ್ಟಿನಲ್ಲಿ ಜನರನ್ನು ಒಗ್ಗೂಡಿಸಿ ಕಾರವಾರ ಉಳಿಸಿ ಆಂದೋಲನ ನಡೆಸಲಾಗುವದು. ತಮ್ಮ ಬೇಡಿಕೆಗೆ ತಕ್ಕಂತೆ ವಾಣಿಜ್ಯ ಬಂದರು ವಿಸ್ತರಣೆ ಸ್ಥಗಿತ ಮಾಡದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವದು ಎಂದು ಎಚ್ಚರಿಸಿದರು. ಮೀನುಗಾರ ಮುಖಂಡರಾದ ರಮಾಕಾಂತ ಗಾಂವ್ಕರ, ಆನಂದು ಸೈಲ್, ಪ್ರಕಾಶ ಹರಿಕಂತ್ರ, ರೋಹಿದಾಸ ಬಾನಾವಳಿಕರ ಇದ್ದರು.
Leave a Comment