ಕಾರವಾರ:
ಆಸ್ಟ್ರೇಲಿಯಾ ದೇಶದ ಸಿಡ್ನಿ ವಿಶ್ವ ವಿದ್ಯಾಲಯದ ಪ್ರತಿಷ್ಠಿತ ಹೆರ್ರಿ ಮೆಸೆಲ್ ವಿಜ್ಞಾನ ಶಾಲೆಯಲ್ಲಿ ಜುಲೈ 1 ರಿಂದ 15 ರವರೆಗೆ ನಡೆದ ಸಮಾವೇಶದಲ್ಲಿ ಭಾಗವಹಿಸಿದ್ದ ಉತ್ತರಕನ್ನಡ ಮೂಲದ ವಿಜ್ಞಾನ ವಿದ್ಯಾರ್ಥಿನಿ ಪೂರ್ವಿ ಹೆಬ್ಬಾರ ಪ್ರತಿಷ್ಠಿತ ಅಂತಾರಾಷ್ಟ್ರೀಯ ಸೈನ್ಸ್ ಸ್ಕೂಲ್ ಅವಾರ್ಡ್ ಪಡೆದುಕೊಂಡಿದ್ದಾರೆ.
ಅಮೇರಿಕಾ, ಆಸ್ಟ್ರೇಲಿಯಾ, ರಷ್ಯಾ, ಜಪಾನ್ನಂತಹ ಪ್ರಸಿದ್ಧ 132 ರಾಷ್ಟ್ರಗಳ ಸ್ಪರ್ಧಿಗಳನ್ನು ಹಿಂದಿಕ್ಕಿ ಈಕೆ ಬಹುಮಾನ ಪಡೆದಿದ್ದು, ವಿಜ್ಞಾನ ನಾಯಕತ್ವಕ್ಕಾಗಿ ಶ್ರೇಷ್ಠ ಲೆನ್ ಬಾಸರ್ ಪ್ರಶಸ್ತಿ ಲಭಿಸಿದೆ. ಯುನಿವರ್ಸಿಟಿ ಸ್ಕೂಲ್ ಆಫ್ ಫಿಜಿಕ್ಸ್ನಿಂದ ನಡೆಯುತ್ತಿರುವ ಅಂತಾರಾಷ್ಟ್ರೀಯ ವಿಜ್ಞಾನ ಶಾಲೆ 1962 ರಿಂದ ಪ್ರತಿ 2 ವರ್ಷಕ್ಕೊಮ್ಮೆ ವಿಜ್ಞಾನ ಸಮಾವೇಶವನ್ನು ಆಯೋಜಿಸುತ್ತಿದೆ. ಸಮಾವೇಶದಲ್ಲಿ 46 ವಿವಿಧ ದೇಶಗಳಿಂದ ಆಯ್ಕೆಯಾದ ಯುವ ವಿಜ್ಞಾನಿಗಳು ಬರುತ್ತಾರೆ. ಫಿಜಿಕ್ಸ್ ಫೌಂಡೇಶನ್ ವಿದ್ಯಾರ್ಥಿಗಳ ಖರ್ಚು ವೆಚ್ಚ ಭರಿಸುತ್ತದೆ. ಸಮಾವೇಶದಲ್ಲಿ ಭೌತ ವಿಜ್ಞಾನ ಮತ್ತು ಗಣಿತಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಉಪನ್ಯಾಸಗಳು, ಸ್ಪರ್ಧೆಗಳು, ಪ್ರಯೋಗ ಚಟುವಟಿಕೆಗಳು ನಡೆಯುತ್ತವೆ. ಅದರಲ್ಲಿ ಸಕ್ರಿಯವಾಗಿ ಭಾಗವಹಿಸಿದವರು ಪ್ರಶಸ್ತಿಗೆ ಆಯ್ಕೆಯಾಗುತ್ತಾರೆ. ಪೂರ್ವಿ ವಿಚಾರಗಳು ಅತ್ಯಂತ ಸೃಜನಾತ್ಮಕವಾಗಿರುತ್ತಿದ್ದವು. ತಮ್ಮ ವಿಚಾರಗಳನ್ನು ಅತ್ಯಂತ ಸ್ಪಷ್ಟವಾಗಿ ಮುಕ್ತವಾಗಿ ಹಂಚಿಕೊಳ್ಳುತ್ತಿದ್ದರು ಎಂದು ಆಯೋಜಕರು ತಿಳಿಸಿದ್ದಾರೆ.
ಪೂರ್ವಿ ಹೆಬ್ಬಾರ ಮೂಲತಃ ಹೊನ್ನಾವರದ ಕರ್ಕಿಯವರಾಗಿದ್ದು, ಅವರ ತಂದೆ ರಾಮಚಂದ್ರ ಹೆಬ್ಬಾರ ಕಾರವಾರದ ಕೈಗಾ ಅಣು ವಿದ್ಯುತ್ ಸ್ಥಾವರದ ಉದ್ಯೋಗಿಯಾಗಿದ್ದಾರೆ. ಪೂರ್ವಿ ಕೈಗಾ ಕೇಂದ್ರೀಯ ವಿದ್ಯಾಲಯದಲ್ಲಿ 10 ನೇ ತರಗತಿಯಲ್ಲಿ ಕಲಿಯುತ್ತಿದ್ದಾಗ ರಾಮನ್ ಸ್ಕೂಲ್ನ ವಿಜ್ಞಾನ ಪರೀಕ್ಷೆ ಬರೆದಿದ್ದರು. 12 ನೇ ತರಗತಿಯಲ್ಲಿ ಹೈದ್ರಾಬಾದ್ನಲ್ಲಿ ಕಲಿಯುತ್ತಿದ್ದಾಗ ಅವರಿಗೆ ಸಂದರ್ಶನಕ್ಕೆ ಕರೆ ಬಂದಿತ್ತು. ಅಲ್ಲಿ 500 ವಿದ್ಯಾರ್ಥಿಗಳ ನಡುವೆ ಭಾರತದಿಂದ ಐವರನ್ನು ಈ ಸಮಾವೇಶಕ್ಕೆ ಆಯ್ಕೆ ಮಾಡಲಾಗಿತ್ತು. ಪೂರ್ವಿ ಹೆಬ್ಬಾರ ಜೆಇಇ ಎಡ್ವಾನ್ಸ್ನಲ್ಲಿ 36 ನೇ ರ್ಯಾಂಕ್ ಪಡೆದು ಮುಂಬೈ ಐಐಟಿಗೆ ಈ ಬಾರಿ ಆಯ್ಕೆಯಾಗಿದ್ದಾರೆ. ಅಲ್ಲಿ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ನ ಮೊದಲ ವರ್ಷದಲ್ಲಿ ಓದುತ್ತಿದ್ದಾರೆ.
Leave a Comment