ಕಾರವಾರ: ಸಿಂಡ್ ಆರ್ಸೆಟಿ ಹಾಗೂ ಕೆನರಾ ಬ್ಯಾಂಕ್ ಆರ್ಸೆಟಿಯಲ್ಲಿ ತರಬೇತಿ ಪಡೆದವರ ಸ್ಥಿತಿಗತಿ ಕುರಿತು ಅದ್ಯಯನ ನಡೆಸಿ ವರದಿ ನೀಡುವಂತೆ ಸಂಸದ ಅನಂತಕುಮಾರ ಹೆಗಡೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಸೂಚಿಸಿದರು.
ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಮಂಗಳವಾರ ಉತ್ತರ ಕನ್ನಡ ಜಿಲ್ಲಾಮಟ್ಟದ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈವರೆಗೆ ಜಿಲ್ಲೆಯಲ್ಲಿ ನಿರುದ್ಯೋಗಸ್ಥ ಯುವ ಸಮುದಾಯಕ್ಕೆ ಸ್ವಯಂ ಉದ್ಯೋಗ ತರಬೇತಿ ನೀಡಲಾಗಿದೆ. ತರಬೇತಿ ಪಡೆದವರು ಉದ್ಯೋಗಸ್ಥರಾಗಿದ್ದಾರೆಯೇ. ಸರ್ಕಾರದ ಉದ್ದೇಶ ಈಡೇರಿದೆಯೇ ಎಂಬುದನ್ನು ತಿಳಿಯುವುದು ಬಹುಮುಖ್ಯವಾಗಿದ್ದು ಈ ಬಗ್ಗೆ ತಿಂಗಳಲ್ಲಿ ವರದಿ ತಯಾರಿಸಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ಸಲ್ಲಿಸುವಂತೆ ಸಿಂಡಿಕೇಟ್ ಹಾಗೂ ಕೆನರಾಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.
ಕುಮಟಾ ಸಿಂಡ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ (ಸಿಂಡ್ಆರ್ಸೆಟಿ) ಹಾಗೂ ಹಳಿಯಾಳದ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ (ಕೆನರಾಬ್ಯಾಂಕ್ ಆರ್ಸೆಟಿ)ಗಳು ಉತ್ತರ ಕನ್ನಡ ಜಿಲ್ಲೆಯಲ್ಲಿ ಬಡತನ ರೇಖೆಗಿಂತ ಕೆಳಗಿನ ನಿರುದ್ಯೋಗಿಗಳಿಗೆ ಎನ್ಆರ್ಎಲ್ಎಂ ಯೋಜನೆಯಡಿ ಸ್ವ ಉದ್ಯೋಗ ತರಬೇತಿ ನೀಡುತ್ತಿವೆ. ಈವರೆಗೆ ತರಬೇತಿ ಪಡೆದವರ ಸ್ಥಿತಿಗತಿ ಏನೆಂಬುದು ಸರ್ಕಾರಕ್ಕೆ ತಿಳಿಯಬೇಕಿದೆ. ಯೋಜನೆಯನ್ನು ಮತ್ತಷ್ಟು ಪರಿಣಾಕಾರಿಯಾಗಿ ಜಾರಿಗೊಳಿಸಲು ಇದು ನೆರವಾಗಲಿದೆ ಎಂದು ಅವರು ತಿಳಿಸಿದರು.ಅನುಸೂಚಿತ ಜಾತಿ ಸಮುದಾಯಗಳಿಗೆ ಮೀಸಲಾದ ವಿವಿಧ ವಸತಿ ಯೋಜನೆಗಳ ಅನುಷ್ಠಾನ ಕುಂಟಿತವಾಗಿರುವ ಬಗ್ಗೆ ವಿವರಣೆ ಪಡೆದ ಅವರು, ವಸತಿ ಯೋಜನೆಗಳಿಗೆ ಅನುಸೂಚಿತ ಜಾತಿ ಫಲಾನುಭವಿಗಳು ಸಿಗದಿದ್ದರೆ ಸಾಮಾನ್ಯ ವರ್ಗದವರಿಗೆ ಆ ಯೋಜನೆಗಳನ್ನು ವರ್ಗಾಯಿಸಲು ಸರ್ಕಾರಕ್ಕೆ ಪತ್ರಬರೆಯುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ ರಸ್ತೆ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದಂತೆ ಭಾರತ ಸಂಚಾರ ನಿಗಮದ ಕೇಬಲ್ಗೆ ಯಾವುದೇ ಸಮಸ್ಯೆಯಾಗಬಾರದು. ಅದು ರಾಷ್ಟ್ರದ ಆಸ್ತಿಯಾಗಿದ್ದು ಅಭಿವೃದ್ಧಿ ಯೋಜನೆಗಳನ್ನು ಮಾಡುವಾಗ ಅದನ್ನು ಗಮನದಲ್ಲಿಟ್ಟುಕೊಂಡು ರೂಪಿಸುವಂತೆ ತಿಳಿಸಿದರು. ಅಲ್ಲದೆ ಜಿಲ್ಲೆಯಲ್ಲಿ ಬಿಎಸ್ಎನ್ಎಲ್ನಲ್ಲಿರುವ ಸಮಸ್ಯೆ ಪರಿಹರಿಸಬೇಕು ಹಾಗೂ ತಿಂಗಳೊಳಗಾಗಿ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯ್ತಿಗಳಿಗೆ ಇಂಟರ್ನೆಟ್ ಸಂಪರ್ಕ ಕಲ್ಪಿಸುವಂತೆ ಅವರು ಸಂಬಂಧಪಟ್ಟ ಅಧಿಕಾರಿಗೆ ಸೂಚಿಸಿದರು. ಉತ್ತರ ಕನ್ನಡ ಜಿಲ್ಲೆಯ ಕೆಲವು ಭಾಗಗಳಲ್ಲಿ ಫ್ಲೋರಾಯಿಡ್ ನೀರು ಸರಬರಾಜಾಗುತ್ತಿರುವ ಬಗ್ಗೆ ಮಾಹಿತಿ ಇದ್ದು ಅಂತಹ ಕಡೆ ತಕ್ಷಣ ಶುದ್ಧ ಕುಡಿಯುವ ನೀರು ಸರಬರಾಜು ಆಗಬೇಕು ಹಾಗೂ ಟ್ಯಾಂಕ್ಗಳಲ್ಲಿ ಪಾಚಿ ಕಟ್ಟದಂತೆ ನೋಡಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಪ್ರಸಕ್ತ ಸಾಲಿನ ಆರ್ಥಿಕ ವರ್ಷ ಡಿಸೆಂಬರ್ ತಿಂಗಳು ಮುಗಿದು ಜನವರಿಗೆ ಹೊಸ ಆರ್ಥಿಕ ವರ್ಷ ಬರುವ ಸಾಧ್ಯತೆ ಇರುವುದರಿಂದ ವಿವಿಧ ಇಲಾಖೆಗಳ ಯೋಜನಾ ಕಾರ್ಯಕ್ರಮಗಳ ಗುರಿಯನ್ನು ಡಿಸೆಂಬರ್ ವೇಳೆಗೆ ಪೂರೈಸಬೇಕು ಎಂದು ಅವರು ತಾಕೀತು ಮಾಡಿದರು. ಕೃಷಿ, ತೋಟಗಾರಿಕೆ, ಶಿಕ್ಷಣ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾಹಿತಿ ಪಡೆದರು.
ಜಿಲ್ಲಾ ಪಂಚಾಯತ ಅಧ್ಯಕ್ಷೆ ಜಯಶ್ರೀ ಗುರುದಾಸ ಮೊಗೇರ, ಜಿಲ್ಲಾ ಪಂಚಾಯ್ತಿ ಸದಸ್ಯ ಲಕ್ಷ್ಮಣ ಟಿ ಪಾಟೀಲ್, ಜಿಲ್ಲಾ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಚಂದ್ರಶೇಖರ ನಾಯಕ, ಅಪರ ಜಿಲ್ಲಾಧಿಕಾರಿ ಎಚ್.ಪ್ರಸನ್ನ, ಹಾಗೂ ಉಸ್ತುವಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
Leave a Comment