
ಹೊನ್ನಾವರ : ಸ್ವಾತಂತ್ರ್ಯಪೂರ್ವ 1941ರಲ್ಲಿ ಸ್ಥಾಪನೆಯಾಗಿ ನಿರಂತರ ಜೇನು ಕೃಷಿಗೆ ಪ್ರೋತ್ಸಾಹ, ಮಾರ್ಗದರ್ಶನ, ಜೇನುತುಪ್ಪ ಖರೀದಿ, ಮಾರಾಟದಲ್ಲಿ ತೊಡಗಿರುವ ಹೊನ್ನಾವರ ಜೇನು ಸಾಕುವವರ ಮತ್ತು ಗ್ರಾಮೀಣ ಕೈಗಾರಿಕಾ ಸಹಕಾರಿ ಸಂಘಕ್ಕೆ 65ನೇ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಶಿರ್ಸಿ ಟಿಎಸ್ಎಸ್ ಆವಾರದಲ್ಲಿ ನಡೆಯುವ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ‘ಅತ್ಯುತ್ತಮ ಸಾಧನಾ ಪ್ರಶಸ್ತಿ’ ದಿನಾಂಕ 15ರಂದು ಪ್ರದಾನವಾಗಲಿದೆ.
ಹೊನ್ನಾವರ ಜಿಲ್ಲಾ ಕೇಂದ್ರವಾಗಿದ್ದಾಗ ಜಿಲ್ಲಾ ನ್ಯಾಯಾಲಯವಿತ್ತು. ಇಲ್ಲಿ ನ್ಯಾಯವಾದಿಯಾಗಿ ಕೆಲಸಮಾಡಲು ಬಂದ ಗಾಂಧಿವಾದಿ ಧಾರವಾಡದ ಎಸ್.ಕೆ. ಕಲ್ಲಾಪುರ ಎಂಬವರು ಜೇನು ಸಂಘವನ್ನು ಸ್ಥಾಪಿಸಿದರು. ಶೇ. 80ರಷ್ಟು ಕಾಡಿನಿಂದ ತುಂಬಿದ ಉ.ಕ. ಜಿಲ್ಲೆಯಲ್ಲಿ ಸಾವಿರಾರು ಟನ್ ಜೇನುತುಪ್ಪ ಹಾಳಾಗುತ್ತಿತ್ತು. ಇದನ್ನು ಮನಗಂಡು ಜೇನುಸಾಕುವದನ್ನು, ಅಹಿಂಸಾತ್ಮಕವಾಗಿ ಜೇನುತುಪ್ಪ ತೆಗೆಯುವುದನ್ನು ರೈತರಿಗೆ ಕಲಿಸಲು ಈ ಸಂಘ ಸ್ಥಾಪನೆಯಾಗಿತ್ತು. ಜೊತೆಯಲ್ಲಿ ಸತ್ತದನಗಳ ಕೋಡಿನ ಬಾಚಣ ಕೆ, ಅಲಂಕಾರಿಕ ವಸ್ತು, ಕಾಡು ಉತ್ಪತ್ತಿಯ ಸಂಸ್ಕರಣೆ ಮೊದಲಾದವನ್ನು ಕಲ್ಲಾಪುರ ಕಲಿಸಿಕೊಟ್ಟಿದ್ದರು. ಜಿಲ್ಲೆಯ ನಾಲ್ಕಾರು ತಾಲೂಕುಗಳಲ್ಲಿ ಜೇನುಸಂಘ ಸ್ಥಾಪನೆಯಾದರೂ ನಿರಂತರವಾಗಿ 77ವರ್ಷಗಳಿಂದ ನಡೆದುಕೊಂಡಿರುವ ಸಂಘ ಇದೊಂದೇ ಆಗಿದೆ. ಸ್ವಂತ ಕಟ್ಟಡ, ಸಿಬ್ಬಂದಿಯನ್ನು ಹೊಂದಿರುವ ಸಂಘ ವಾರ್ಷಿಕವಾಗಿ 35ಟನ್ ಜೇನುತುಪ್ಪವನ್ನು ಸಂಸ್ಕರಿಸಿ, ಅಗ್ಮಾರ್ಕ್ನೊಂದಿಗೆ ಮಾರಾಟಮಾಡುತ್ತಿದೆ. ನವೆಂಬರ್ ತಿಂಗಳಲ್ಲಿ ಬರುವ ಅಂಟವಾಳ ಜೇನುತುಪ್ಪ ಅತ್ಯಂತ ಬೇಡಿಕೆಯಿದ್ದು ಕಿಲೋಗೆ 1500 ರೂಪಾಯಿಗೆ ಮಾರಾಟವಾಗುತ್ತಿದೆ.
ಸರ್ಕಾರದ ವಿವಿಧ ಯೋಜನೆ ಅನ್ವಯ ಜೇನುಸಾಕುವವರಿಗೆ ಉಪಕರಣ ರಿಯಾಯತಿಯಲ್ಲಿ ಮಾರಾಟಮಾಡುತ್ತದೆ ಮಾರ್ಗದರ್ಶನ, ತರಬೇತಿಯನ್ನು ನೀಡುತ್ತದೆ. ಕಾಡು ಜೇನನ್ನು ಖರೀದಿಸಿ ಸಂಸ್ಕರಿಸುತ್ತಿದೆ. ಕಲಬೆರೆಕೆ ಇಲ್ಲದೆ ಜೇನುತುಪ್ಪವನ್ನು ಮಾರಲಾಗುತ್ತಿದ್ದು ಹೊನ್ನಾವರದ ಮಧು ಬ್ರಾಂಡ್ ಜೇನುತುಪ್ಪಕ್ಕೆ ಹೆಸರಿದೆ. 1500ಕ್ಕೂ ಹೆಚ್ಚು ಸದಸ್ಯರಿದ್ದಾರೆ. ಖಾದಿ ಬೋರ್ಡ್ ಮತ್ತು ಖಾದಿ ಕಮೀಶನ್ನ ಮಾರ್ಗದರ್ಶನ ಇದೆ. ಆರ್ಥಿಕ ಬೆಂಬಲ ಇದೆ. ಜೇನುಕೃಷಿ ಅಭಿವೃದ್ಧಿಗೆ 97ಲಕ್ಷ ರೂಪಾಯಿ ಯೋಜನೆಯೊಂದು ಸಂಘಕ್ಕೆ ಮಂಜೂರಾಗಿದೆ.
ಖಾದಿ ಗ್ರಾಮೋದ್ಯೋಗದ ಹಲವಾರು ಪ್ರದರ್ಶನದಲ್ಲಿ ಪಾಲ್ಗೊಂಡು ಪ್ರಶಸ್ತಿಗಳಿಸಿದ ಸಂಘಕ್ಕೆ ಪ್ರಶಸ್ತಿ ದೊರೆತಿರುವುದರಿಂದ, ಆಡಳಿತ ಮಂಡಳಿಯ ಸಹಕಾರದಿಂದ ಹೆಚ್ಚು ಉತ್ಸಾಹದಿಂದ ಕೆಲಸಮಾಡಲು ಪ್ರೇರಣೆ ದೊರಕಿದೆ ಎಂದು ಸಂಘದ ಕಾರ್ಯನಿರ್ವಾಹಕ ಶ್ರೀಧರ ಹೆಗಡೆ ಹೇಳಿದ್ದಾರೆ.
Office address send me