ಹಳಿಯಾಳ:- ಹಳಿಯಾಳ ಅರಣ್ಯ ಇಲಾಖೆಯ ಸಾಂಬ್ರಾಣ ವಲಯದ ಬಿಟಗಳಲ್ಲಿ ಅರಣ್ಯ ಇಲಾಖೆಯ ಹಲವು ಸಿಬ್ಬಂದಿಗಳು ಶಾಮಿಲಾಗಿ ಅರಣ್ಯ ಲೂಟಿಯಲ್ಲಿ ತೊಡಗಿದ್ದು ಇವರ ಮೇಲೆ ತಕ್ಷಣ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮೀತಿ(ಚಂದ್ರಕಾಂತ ಕಾದ್ರೋಳ್ಳಿ ಬಣ) ಸಂಘಟನೆಯವರು ಸಾಂಬ್ರಾಣ ಯಿಂದ ಹಳಿಯಾಳದ ವರೆಗೆ ಅರೆಬೆತ್ತಲೆ ಪಾದಯಾತ್ರೆ ನಡೆಸುವ ಮೂಲಕ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಿದರು.
ಬುಧವಾರ ತಾಲೂಕಿನ ಸಾಂಬ್ರಾಣ ವಲಯ ಅರಣ್ಯಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಅಲ್ಲಿ ಆರ್‍ಎಫ್‍ಓ ದೀಪಕ ನಾಯ್ಕ ಅವರಿಗೆ ಮನವಿ ಸಲ್ಲಿಸಿದರು. ಬಳಿಕ ಅಲ್ಲಿಂದ ಅರೆ ಬೆತ್ತಲೆ ಪಾದಯಾತ್ರೆಯ ಮೂಲಕ ಸುಮಾರು 12 ಕೀಮಿ ಕಾಲ್ನಡಿಗೆಯಲ್ಲಿ ಕ್ರಮಿಸಿ ಹಳಿಯಾಳ ಅರಣ್ಯ ಇಲಾಖೆಯ ಪಟ್ಟಣದಲ್ಲಿಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಗೆ ಆಗಮಿಸಿ ಅರಣ್ಯಾಧಿಕಾರಿ ಯತೀಶಕುಮಾರ ಅವರಿಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ ನಾರನೊಳ್ಳಿ, ಗುಂಡೊಳ್ಳಿ, ಸಾಂಬ್ರಾಣ ಬೀಟಗಳಿಗೆ ಸಂಬಂಧಿಸಿದಂತೆ ಅರಣ್ಯದಲ್ಲಿ ಸಾಕಷ್ಟು ಮರಗಳನ್ನು ಕಡಿದು ಅರಣ್ಯ ಲೂಟಿ ಮಾಡಿದ ಬಗ್ಗೆ ಸಂಪೂರ್ಣ ಮಾಹಿತಿ ಹಾಗೂ ಕಟ್ಟಿಗೆ ಅರಣ್ಯ ಇಲಾಖೆ ವ್ಯಾಪ್ತಿಗೆ ಸಿಕ್ಕಿದ್ದರೂ ಸಹ ಈ ಸಾಂಬ್ರಾಣ ವಲಯ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಿವೈ ಆರ್‍ಎಫ್‍ಓ ಸಾಂಬ್ರಾಣ ವಲಯ ಹಾಗೂ ಅರಣ್ಯ ರಕ್ಷಕಿ ಶೋಭಾ ತೋಳೆ ಹಾಗೂ ಅರಣ್ಯ ವಿಕ್ಷಕ ಶಿವಾಜಿ ರಾವುತ ಇವರ ಮೇಲೆ ಕ್ರಮ ಕೈಗೊಳ್ಳದೆ ಸಾಂಬ್ರಾಣ ವಲಯ ಆರ್‍ಎಫ್ ಓ ದೀಪಕ ನಾಯ್ಕ ಹಾಗೂ ಎಸಿಎಫ್ ಸಂತೋಷ ಕೆಂಚಪ್ಪನವರ ಅವರು ತಮ್ಮ ಇಲಾಖೆಯ ಅಧಿಕಾರಿಗಳನ್ನು ಬಚಾವ ಮಾಡಲು ಪ್ರಯತ್ನಿಸುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಆರೋಪಿಸಿದ್ದು ಈ ಬಗ್ಗೆಯು ಹಿರಿಯ ಅಧಿಕಾರಿಗಳು ತನಿಖೆ ನಡೆಸಬೇಕೆಂದು ಆಗ್ರಹಿಸಲಾಗಿದೆ.
ಅಲ್ಲದೇ ಈಗಾಗಲೇ ಇಲಾಖೆಯಿಂದ ಅಮಾನತ್ತಿಲ್ಲಿರುವ ಸಾಂಬ್ರಾಣ ಉಪ ವಲಯ ಅರಣ್ಯಾಧಿಕಾರಿ ಉಮೇಶ ಎನ್ನುವಾತ ಗುಂಡೊಳ್ಳಿ ಭಾಗಕ್ಕೆ ಬಂದಾಗಿನಿಂದ ನೀಲವಾಣ , ಕುಂಬಾರಕೊಪ್ಪ, ನಾರನೊಳ್ಳಿ ಭಾಗದಲ್ಲಿ ಸಾಕಷ್ಟು ಅರಣ್ಯ ಲೂಟಿ ನಡೆದಿದ್ದು ಇತ್ತೀಚೆಗೆ ಕುಂಬಾರಕೊಪ್ಪ ಶಾಲೆಯ ಎದುರಿಗೆ 11 ಸಾಗವಾಣ ಹಾಗೂ 17 ಅಶೋಕ ಗಿಡಗಳನ್ನು ಕಡಿದು ಸಾಗಾಣೆ ಮಾಡಿದ್ದು ಸಾಗವಾಣ ಕಟ್ಟಿಗೆ ವಶಪಡಿಸಿಕೊಂಡು ಪ್ರಕರಣ ದಾಖಲಿಸಿರುವುದು ಇದಕ್ಕೆ ಪುಷ್ಠಿ ನೀಡುತ್ತದೆ ಎಂದಿರುವ ಪ್ರತಿಭಟನಾಕಾರರು ಈ ಭಾಗದಲ್ಲಿ ಕೆಲವು ಅರಣ್ಯ ಇಲಾಖೆಯ ಸಿಬ್ಬಂದಿಗಳು ಶಾಮಿಲಾಗಿ ಸಾಕಷ್ಟು ಅರಣ್ಯ ಲೂಟಿಯಲ್ಲಿ ತೊಡಗಿದ್ದಾರೆಂದು ಸುಮಾರು 4 ಪುಟಗಳಲ್ಲಿ ವಿವರವಾಗಿ ಆರೋಪಗಳನ್ನು ಮಾಡಿದ್ದಾರೆ.
ಅಲ್ಲದೇ ಫೆಬ್ರವರಿ ತಿಂಗಳ 15ನೇ ತಾರಿಖಿನ ಒಳಗೆ ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಜರುಗಿಸದೆ ಇದ್ದಲ್ಲಿ ಹಳಿಯಾಳದ ಅರಣ್ಯ ಇಲಾಖೆ ಕಚೇರಿಯಿಂದ ಶಿರಸಿಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯ ವರೆಗೆ ಅರೆಬೆತ್ತಲೆ ಪಾದಯಾತ್ರೆ ಆ ಬಳಿಕ ಬೆಂಗಳೂರಿನ ಅರಣ್ಯ ಭವನದ ಎದುರು ಅಹೋರಾತ್ರಿ ಹೋರಾಟ ನಡೆಸಲಾಗುವುದೆಂದು ಎಚ್ಚರಿಕೆ ನೀಡಲಾಗಿದೆ.
ಪ್ರತಿಭಟನೆಯ ನೇತೃತ್ವವನ್ನು ರಾಜ್ಯಾಧ್ಯಕ್ಷ ಚಂದ್ರಕಾಂತ ಕಾದ್ರೋಳ್ಳಿ, ಸುಮನ ಗಿರಿಶ, ಕಲ್ಲಪ್ಪಾ ಕಾದ್ರೊಳ್ಳಿ, ರಾಜು ಮೇತ್ರಿ, ಬಸವರಾಜ ಕಾದ್ರೊಳ್ಳಿ, ರಾಮು ಟಿ ಮೇತ್ರಿ, ಗೋಪಾಲ ಮೇತ್ರಿ, ರಮೇಶ ಕೆಳಗಿನಮನಿ, ನಾಗಪ್ಪಾ ಇತರರು ವಹಿಸಿದ್ದರು.
Leave a Comment