
ಭಾರತ ಹಿಂದಿನಿಂದಲೂ ಹಾಗೆ, ಮಹಿಳೆಯರಿಗೆ ಕೊಟ್ಟ ಗೌರವ, ಸ್ಥಾನಮಾನ, ಪ್ರೀತಿ ಇನ್ನಾವ ದೇಶವೂ ಕೊಟ್ಟಿರಲಿಕ್ಕಿಲ್ಲ. ಅದನ್ನು ಬಳಸಿಕೊಳ್ಳುವಲ್ಲಿಯೂ ಭಾರತೀಯ ನಾರಿಯರು ಹಿಂದೆ ಬಿದ್ದಿಲ್ಲ. ಅದೆಷ್ಟೊ ರಾಜ ಮನೆತನಗಳನ್ನು ಉಳಿಸಿ, ಕೆಚ್ಚೆದೆಯಿಂದ ಹೋರಾಡಿದ ಉದಾಹರಣೆಗಳು ಭಾರತೀಯ ಇತಿಹಾಸದಲ್ಲಿ ಸಾಲು ಸಾಲು ದೊರೆಯುತ್ತವೆ. ಹೌದು, ನಾನೀಗ ಹೇಳ ಹೊರಟಿರುವುದು ಅದೇ ರೀತಿಯ ಒಬ್ಬ ಧೀರೆಯ ಕಥೆಯನ್ನ. ಪೋರ್ಚುಗೀಸ್ ರೊಂದಿಗೆ ಹೋರಾಡಿದ ರಣಚಂಡಿ, ಆರ್ಥಿಕತೆಯನ್ನು ಸಬಲವಾಗಿಸಿದ ಚಿನ್ನ, ವಿದೇಶಿ ವ್ಯಾಪಾರವನ್ನೂ ಸುಲಲಿತವಾಗಿ ನಿಭಾಯಿಸಿದ ವ್ಯಾವಹಾರಿಕ ತಜ್ಞೆ, ಸುದೀರ್ಘ 56 ವರ್ಷಗಳ ಕಾಲ ರಾಮರಾಜ್ಯ ನೀಡಿದ ರಾಜಮಾತೆ… ಅವಳೇ ಗೇರುಸೊಪ್ಪೆಯ ಕಾಳುಮೆಣಸಿನ ರಾಣಿ ಚೆನ್ನಭೈರಾದೇವಿ.

ಉತ್ತರ ಕನ್ನಡದ ಗೇರುಸೊಪ್ಪೆಯ ರಾಜಮನೆತನದಲ್ಲಿ ಹುಟ್ಟಿದ ರಾಣಿ ಚೆನ್ನಾಭೈರಾದೇವಿ, ಆ ಮನೆತನದಲ್ಲೇ ಅತ್ಯಂತ ಸುದೀರ್ಘ ಕಾಲ ಆಡಳಿತ ನಡೆಸಿದ ಪ್ರಖ್ಯಾತೆ. ಗೇರುಸೊಪ್ಪೆ ಮತ್ತು ಸಂಗೀತಪುರ (ಇಂದಿನ ಸಾಗರದ ಪ್ರದೇಶ)ವನ್ನು ತನ್ನ ಆಡಳಿತಾವಧಿಯಲ್ಲಿ ಅತ್ಯಂತ ಉಚ್ಛ ಸ್ಥಿತಿಗೆ ತೆಗೆದುಕೊಂಡ ಹೋದ ಗರಿಮೆ ಇವಳದು. ಈಕೆಯ ಬುದ್ಧಿಮತ್ತೆ, ವ್ಯಾಪಾರವನ್ನು ಬೆಳೆಸಿದ ರೀತಿ ಇವೆಲ್ಲವೂ ಯಾವುದೇ ಭಾರತೀಯ ರಾಜನಿಗೆ ಕಡಿಮೆ ಇಲ್ಲದಂಥವುಗಳು. ಇಂದು ಕರ್ನಾಟಕದ ಕರಾವಳಿಯಲ್ಲಿ ಕಾಣ ಸಿಗುವ ಎಲ್ಲ ಬಂದರುಗಳನ್ನು ಸುಸಜ್ಜಿತವಾಗಿಸಿ, ಅವುಗಳನ್ನು ಬೆಳೆಸಿ, ಪೆÇೀಷಿಸಿದ ಪರಿ ನಿಜಕ್ಕೂ ಆಶ್ಚರ್ಯ ಪಡುವಂಥವು. ಆರ್ಥಿಕವಾಗಿ ಬಲ ತುಂಬಿದ ವಿಶೇಷ ಕೊಡುಗೆ ಈಕೆಯದು.
ಗೇರುಸೊಪ್ಪ ಅರಸು ವಂಶದವರು ವಿಜಯನಗರ ಸಾಮ್ರಾಜ್ಯದ ಒಂದು ಮಹಾಮಂಡಳೇಶ್ವರರಾಗಿ, ಸಾಮಂತ ರಾಜರಾಗಿ ಕೆಲಸ ಮಾಡುತ್ತಿದ್ದವರು. ಕೃಷ್ಣ ದೇವರಸ ಎನ್ನುವ ವಿಜಯನಗರದ ದೊರೆಯ ಸೋದರ ಸಂತಾನ ಈಕೆ. ಆಗಿನ ಕಾಲದಲ್ಲಿ ಅಳಿಯ ಸಂತಾನ ಚಾಲ್ತಿಯಲ್ಲಿದ್ದುದರಿಂದ ಈಕೆಯ ಅಕ್ಕ ಭೈರಾದೇವಿ ಕೆಲ ಕಾಲ ಮಹಾಮಂಡಲೇಶ್ವರಿಯಾಗಿ ಕಾರ್ಯ ನಿರ್ವಹಿಸಿದ್ದಳು. ಆ ಬಳಿಕ ಈಕೆಯ ಹೆಗಲಿಗೆ ಬಂದದ್ದು ಮಹಾಮಂಡಳೇಶ್ವರ ಬಿರುದು. ಈಕೆಯ ಕೌಶಲ್ಯ, ಬುದ್ಧಿಮತ್ತೆ, ಒತ್ತಡಗಳನ್ನು ನಿಭಾಯಿಸುವ ರೀತಿ ಅದಾವ ಪರಿ ಇತ್ತೆಂದರೆ, ಮಹಾಮಂಡಲೇಶ್ವರ ಬಿರುದೇ ಉಪಮೇಯವಾದಂತಿತ್ತು.

ಈಕೆ ಮಾಡಿದ ಅತ್ಯಂತ ಅದ್ಭುತ ಕೆಲಸಗಳಲ್ಲಿ ಕಾಳುಮೆಣಸಿನ ವ್ಯಾಪಾರ ಮುಂಚೂಣಿಯಲ್ಲಿ ನಿಲ್ಲುತ್ತದೆ. ಈಕೆಯ ಆಡಳಿತಾವಧಿಯಲ್ಲಿ ಕರಾವಳಿಯಲ್ಲಿ ಅತೀ ಹೆಚ್ಚಾಗಿ ಬೆಳೆಯುತ್ತಿದ್ದ ಬೆಳೆಗಳಲ್ಲಿ ಕಾಳುಮೆಣಸು ಸಹ ಒಂದು. ಅದನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಬೇಕು ಎಂಬುದು ಆಗ ಪೆÇೀರ್ಚುಗೀಸರ ಕನಸಾಗಿತ್ತು. ಆದರೆ, ಈಕೆ ತೆಗೆದುಕೊಂಡ ದಿಟ್ಟ ನಿರ್ಧಾರಗಳು, ಅನುಸರಿಸಿದ ವ್ಯಾಪಾರೀ ನೀತಿಗಳು ಅವರ ಲೆಕ್ಕಾಚಾರವನ್ನು ಬುಡಮೇಲು ಮಾಡಿದವು. ಈ ಕಾರಣಕ್ಕಾಗಿಯೇ ಅವರು ಗೇರುಸೊಪ್ಪೆಯ ಮೇಲೆ ದಂಡೆತ್ತಿ ಬರಲು ಪ್ರಯತ್ನಿಸಿದರು. ಆದರೆ, ರಾಣಿ ಚೆನ್ನಭೈರಾದೇವಿ ತನ್ನ ಸುತ್ತಮುತ್ತಲ ಇತರ ಸಾಮಂತರುಗಳಾದ ಕೆಳದಿಯವರಿಗೆ, ಇಕ್ಕೇರಿಯವರಿಗೆ, ಸೋಂದೆಯವರಿಗೆ ಪತ್ರಗಳನ್ನು ಕಳುಹಿಸಿ, ಸೈನ್ಯ ಸಹಾಯ ಮಾಡುವಂತೆ ಕೇಳಿಕೊಂಡಳು. ತನ್ನೆಲ್ಲ ಸೈನಿಕರನ್ನು ಹುರಿದುಂಬಿಸಿ ಪೋರ್ಚುಗೀ ಸರನ್ನು ಸೋಲಿಸುವ ಶಪಥ ಮಾಡಿದಳು. ಎಲ್ಲಕ್ಕಿಂತ ಹೆಚ್ಚಾಗಿ ಯಾರೂ ಬರದೇ ಇದ್ದಾಗ ತಾನೇ ಕೆಚ್ಚೆದೆಯಿಂದ ಹೋರಾಡಿ ಇತರರನ್ನು ನಿಬ್ಬೆರಗಾಗಿಸುತ್ತಿದ್ದಳು. ಒಮ್ಮೆಯಂತೂ ಪೂರ್ತಿ ಹೊನ್ನಾವರ ಪ್ರಾಂತ್ಯವೇ ಕೈತಪ್ಪಿ ಹೋಗುತ್ತದೆ ಎನ್ನುವ ಪರಿಸ್ಥಿತಿ ಬಂದಾಗ ಈಕೆ ಹೋರಾಡಿ ಕೊನೆಗೂ ಗೆದ್ದ ರೀತಿ ಮೈಯಲ್ಲಿ ರೋಮಾಂಚನ ಉಂಟುಮಾಡುತ್ತದೆ. ತನ್ನ ಜೀವನದುದ್ದಕ್ಕೂ ಪೋರ್ಚುಗೀಸರೊಂದಿಗೆ ಹೋರಾಡಿ ಒಮ್ಮೆಯೂ ಸೋಲನ್ನೊಪ್ಪದೆ ಸ್ವಾಭಿಮಾನಿಯಾಗಿ ಬದುಕಿದ್ದುದು ಈಕೆಯ ಮಹತ್ತರ ಸಾಧನೆಗಳಲ್ಲಿ ಒಂದು. ಆದರೆ, ಭಾರತಕ್ಕಿರುವ ನತದೃಷ್ಟದ ಸಂಗತಿ ಏನು ಎಂದರೆ, ನಮಗೆ ಹೊರಗಿನವರಿಗಿಂತ ಒಳಗಿನವರೇ ಶತ್ರುಗಳಾಗಿರುವುದು. ಇದು ಅಂದಿನಿಂದ ಇಂದಿನವರೆಗೂ ಬೆಳೆದು ಬಂದ ಒಂದು ದರಿದ್ರ ಸಂಸ್ಕøತಿ. ರಾಣಿ ಚೆನ್ನಭೈರಾದೇವಿಯ ವಿಷಯದಲ್ಲೂ ಆಗಿದ್ದು ಇದೇ. ಪೆÇೀರ್ಚುಗೀಸರೊಂದಿಗೆ ಸೋಲೊಪ್ಪದ ಈಕೆ ತಮ್ಮ ಅಕ್ಕಪಕ್ಕದವರಾದ ಕೆಳದಿಯ ವಂಶಸ್ಥರಿಂದ ದಾಳಿಗೆ ಒಳಗಾಗುತ್ತಾಳೆ. ಅವರು ಇವಳನ್ನು ಸೋಲಿಸಿ, ಸೆರೆಮನೆಯಲ್ಲಿಟ್ಟು ಬಂಧಿಸುತ್ತಾರೆ. ತನ್ನ ಕೊನೆಯ ಉಸಿರಿರುವವವರೆಗೂ ಇತರರ ಕೇಡು ಬಯಸದ, ಸದಾ ಸ್ವಾಭಿಮಾನಿಯಾಗಿ ಬದುಕಿದ ಚೆನ್ನಮ್ಮನ ಕಥೆ ಜೈಲಿನಲ್ಲಿ ಹೇಳ ಹೆಸರಿಲ್ಲದೆ ಅಂತ್ಯವಾಗುವುದು ಬಹುದೊಡ್ಡ ದುರಂತವೇ ಸರಿ.

ಸಾಳುವ ಮನೆತನದ ಈಕೆಯ ಆಡಳಿತಾವಧಿಯಲ್ಲಿ ಜೈನ ಧರ್ಮ ತನ್ನ ಅತ್ಯಂತ ಉತ್ತುಂಗದ ಶಿಖರವನ್ನೇ ಏರಿತ್ತು ಎಂದರೆ ತಪ್ಪಲ್ಲ. ಆದರೆ, ಜೈನ ಧರ್ಮ ಮಾತ್ರವಲ್ಲದೆ, ಬೌದ್ಧ, ಹಿಂದೂ, ಪಾರ್ಸಿಕರೂ ಅತ್ಯಂತ ಸಮೃದ್ಧಿಯಿಂದ ಜೀವನ ನಡೆಸುತ್ತಿದ್ದರು. ಈಕೆ ಅನೇಕ ಹಿಂದೂ ದೇವಾಲಯಗಳಿಗೆ ದಾನ, ಧರ್ಮಗಳನ್ನು ಮಾಡಿದ್ದಳೆಂಬ ಬಗ್ಗೆ ಉಲ್ಲೇಖಗಳು ಸಿಗುತ್ತವೆ. ಅಪ್ಪಟ ರಾಷ್ಟ್ರಾಭಿಮಾನದ ಚಿಲುಮೆ, ಸ್ವಾಭಿಮಾನದ ಸಂಕೇತ, ಧೈರ್ಯ- ಸಾಹಸದ ರೂಪಕವಾಗಿದ್ದ ಚೆನ್ನಮ್ಮನ್ನ ಬಗ್ಗೆ ಇತಿಹಾಸದ ಪುಟಗಳಲ್ಲಿ ಜಾಗ ಇಲ್ಲದಿರುವುದು ದೇಶದ ದುರಂತವೇ ಸರಿ. ಈಕೆಯ ಸ್ವಾಮಿನಿಷ್ಠೆ, ದೇಶಭಕ್ತಿ, ಸಾಹಸ ಪರಾಕ್ರಮಗಳು, ಸ್ವಾಭಿಮಾನ ನಮ್ಮ ಇಂದಿನ ಯುವ ಪೀಳಿಗೆಯವರ ಪಾಲಿಗೆ ಆದರ್ಶವಾಗಲಿ. ಸರಕಾರ ಇಂತಹ ಅನೇಕ ರಾಷ್ಟ್ರ ರತ್ನಗಳ ಕುರಿತಾಗಿ ಚಿಂತನೆ ನಡೆಸಿ, ಅವುಗಳ ಅಧ್ಯಯನಕ್ಕೆ ಅನುವು ಮಾಡಿಕೊಟ್ಟರೆ ಅವರ ರಾಷ್ಟ್ರಭಕ್ತಿಗೆ ಸಿಕ್ಕ ಗೌರವವಾಗುತ್ತಿತ್ತು. ಹಾಗೆ ಆಗಲಿ ಎಂದು ಆಶಿಸೋಣ. ಬನ್ನಿ, ನಿಜವಾದ ಇತಿಹಾಸವನ್ನು ತಿಳಿಯೋಣ.
ಬದಲಾಗೋಣ, ಬದಲಾಯಿಸೋಣ… ಗೇರುಸೊಪ್ಪೆಯ ಚಿನ್ನದ ಗಣಿ ಅಜರಾಮರವಾಗಲಿ.



Leave a Comment