
ಮಂಡೂಕಪರ್ಣಿ
ಬ್ರಾಹ್ಮೀ, ಬ್ರಾಹ್ಮಿ ಮಂಡೂಕಿ, ಒಂದೆಲಗ, ಸರಸ್ವತಿ ಸೊಪ್ಪು, ಗದ್ದೆ ಒರಗ, ಇಲಿತೆವಿ ಬಳ್ಳಿ, ಸರಸ್ವತಿ ಮುಕ್ಕ (ಆಕು) ವಲ್ಲಾರ ಕೀರೈ ಎಂಬ ಹೆಸರುಗಳಿಂದ ಕರೆಯುತ್ತಾರೆ.
ಒಂದೆಲಗ ಒಂದು ಅದ್ಭುತವಾದ ಔಷಧೀಯ ಸಸ್ಯ ಇದು ಸದಾ ನೀರು ಹರಿಯುವ ಕಾಲುವೆಗಳ ಪಕ್ಕ, ಗದ್ದೆ ಬದಿಗಳ ಮೇಲೆ, ನದಿ, ಕೆರೆ, ಕುಂಟೆಗಳ ಪಕ್ಕ ನೆಲದಲ್ಲಿ ಹಬ್ಬಿ ಬೆಳೆಯುತ್ತದೆ.
ಒಂದೆಲಗದ ಸೊಪ್ಪನ್ನು ಸೇವಿಸುವುದರಿಂದ ಮೆದಳು ಚುರುಕಾಗಿ, ಜ್ಞಾಪಕ ಶಕ್ತಿ ಹೆಚ್ಚುತ್ತೆ. ಇದರ ಸೇವನೆಯಿಂದ ವಿದ್ಯೆ, ಬುದ್ಧಿ ಹೆಚ್ಚುವುದರಿಂದ, ಇದಕ್ಕೆ ವೀಣಾಪಾಣಿ ಶಾರದೆಯ ಹೆಸರಿಂದ “ಸರಸ್ವತಿ” ಸೊಪ್ಪುಎಂದು ಕರೆಯುತ್ತಾರೆ. ಗದ್ದೆಗಳ ಬೈಲಲ್ಲಿ ಹೆಚ್ಚಾಗಿ ಕಾಣುವುದರಿಂದ “ಗದ್ದೆ ಒರುಗ” ಎಂತಲೂ ಕರೆಯುತ್ತಾರೆ.
ಅತ್ಯದ್ಭುತವಾದ ಈ ಮೂಲಿಕೆ ಮಾನವರಿಗೆ ದೇವರುಕೊಟ್ಟ ವರವೇ ಸರಿ. ಈ ಸಸ್ಯ ತನ್ನ ಒಡಲಲ್ಲಿ ಅಪಾರವಾದ ಔಷಧೀಯ ಗುಣಗಳನ್ನು ತುಂಬಿಕೊಂಡಿದೆ. ಒಂದೆಲಗ ಜ್ಞಾನವನ್ನು ಪ್ರಸಾದಿಸುವ ಸರಸ್ವತಿ ಮಾತೆಯ ಪ್ರತಿರೂಪವೆಂದೇ ಭಾವಿಸುತ್ತಾರೆ. ಆಯುರ್ವೇದದಲ್ಲಿ ಈ ಸಸ್ಯಕ್ಕೆ ಬಾರಿ ಪ್ರಾಮುಖ್ಯತೆ ಇದೆ. ಮಕ್ಕಳಲ್ಲಿ ಜ್ಞಾಪಕಶಕ್ತಿ ಹೆಚ್ಚಿಸುವಲ್ಲಿ ಅಮೋಘವಾಗಿ ಕೆಲಸ ಮಾಡುತ್ತೆ. (ಇದಕ್ಕೆ 3000 ವರ್ಷಗಳ ಇತಿಹಾಸವಿದೆ)
ಒಂದೆಲಗದ ಎಲೆಗಳನ್ನು ಜಜ್ಜಿ, ರಸವನ್ನು ತೆಗೆದು, ಅದಕ್ಕೆ ಸರಿಸಮನಾಗಿ ಹಸುವಿನ ತುಪ್ಪ ಕಲಸಿ, ಒಲೆಯ ಮೇಲಿಟ್ಟು ಚೆನ್ನಾಗಿ ಕಾಯಿಸಿ ಮಕ್ಕಳಿಗೆ 1 ರಿಂದ 2 ಚಮಚ, ಅನ್ನದ ಜೊತೆಗೆ ಕಲಸಿ ತಿನ್ನಿಸುವುದರಿಂದ ಜ್ಞಾಪಕಶಕ್ತಿ ಹೆಚ್ಚಿ, ಮಾನಸಿಕ ವಿಕಾಸವಾಗುತ್ತೆ.

ಒಂದೆಲಗದ 10 ರಿಂದ 15 ತಾಜಾ ಎಲೆಗಳನ್ನು ಒಂದು ಮಣ್ಣಿನ ಮಡಿಕೆಯಲ್ಲಿ ಹಾಕಿ, ಅದಕ್ಕೆ 2 ಲೋಟ ನೀರನ್ನು ಹಾಕಿ, ಚಿಟಿಕೆ ಅರಸಿಣ, ನಾಲ್ಕು ಕಾಳು ಮೆಣಸು, ಚಿಟಿಕೆ ಜೀರಿಗೆ ಹಾಕಿ, ಒಳೆಯ ಮೇಲಿಟ್ಟು ಚೆನ್ನಾಗಿ ಕುದಿಸಿ, ಒಂದು ಲೋಟ ನೀರಾದಾಗ ಕೆಳಗಿಳಿಸಿ, ಉಗರು ಬೆಚ್ಚಗಾದಾಗ ಸೋಸಿಕೊಂಡು, 1/2 ಲೋಟ ಕಷಾಯಕ್ಕೆ ಐದಾರು ಹನಿ ನಿಂಬೆಹಣ್ಣಿನ ರಸ, 1 ಚಮಚ ಜೇನುತುಪ್ಪ, ಕಲಸಿ ಬೆಳಿಗ್ಗೆ ಸಂಜೆ ಹಿರಿಯರು 50ml ನಂತೆ ಸೇವಿಸುತ್ತಿದ್ದರೆ, ನರಗಳಲ್ಲಿ ರಕ್ತ ಸಂಚಾರ ಸುಗುಮವಾಗುತ್ತೆ. ನರ ದೌರ್ಬಲ್ಯ, ಮರಗುಳಿತನ ದೂರವಾಗುತ್ತೆ.ಮಕ್ಕಳು 20ml ನಂತೆ ಕುಡಿಯಬಹುದು. ಓದುವ ಮಕ್ಕಳಲ್ಲಿ ಏಕಾಗ್ರತೆ ಹೆಚ್ಚುತ್ತೆ, ಮೆದಳು ಚುರುಕಾಗುತ್ತೆ, ಬುದ್ಧಿ ಬೆಳವಣಿಗೆಯಾಗುತ್ತೆ. ಜ್ಞಾಪಕ ಶಕ್ತಿ ಹೆಚ್ಚಿ ಬುದ್ಧಿಮಾಂದ್ಯ ಭಯ ದೂರವಾಗುತ್ತೆ.
ದಿನವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಐದಾರು ಎಲೆಗಳನ್ನು ಜಗಿದು ತಿನ್ನುವುದರಿಂದ ಆರೋಗ್ಯದ ದೃಷ್ಠಿಯಿಂದ ತುಂಬಾನೆ ಒಳ್ಳೆಯದು. ಇದನ್ನು ವರ್ಷಾನುಗಟ್ಟಲೆ ತಿಂದರೂ ಯಾವುದೇ ರೀತಿಯ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ. ಉಬ್ಬಸ, ಪೈತಕ, ನೆರೆರೋಗ, ಕಾಮಾಲೆ, ಜ್ವರ, ವಾತ ಪಿತ್ತ ಕಫ, ಗಾಯಗಳು, ಕುರು, ಗಂಟಲನೋವು, ಚರ್ಮ ವ್ಯಾಧಿಗಳು, ಉನ್ಮಾದ, ಹುಚ್ಚು, ವಾಸಿಯಾಗುತ್ತೆ. ಇದು ನೂರಾರು ವ್ಯಾಧಿಗಳು ಗುಣಪಡಿಸಲು ದಿವೌಷಧಿ.
ಒಂದೆಲಗ ಸೊಪ್ಪಿನಿಂದ ಚಟ್ನಿ, ತಂಬಳಿ, ಸಾರು, ದೋಸೆ ಹಿಟ್ಟಿನ ಜೊತೆಯಲ್ಲಿ ಕಲಸಿ ತಿನ್ನಬಹುದು.
ಒಂದೆಲಗದ ಎಲೆಗಳನ್ನು ನೆರಳಲ್ಲಿ ಒಣಗಿಸಿ, ಕುಟ್ಟಿ, ವಸ್ತ್ರಾಗಾಲಿತ ಚೂರ್ಣ ಮಾಡಿಟ್ಟುಕೊಂಡು, ದಿನವು ಮಕ್ಕಳಿಗೆ ಜೇನುತುಪ್ಪದಲ್ಲಿ ಕಲಸಿ ನೆಕ್ಕಿಸುತ್ತಿದ್ದರೆ, ಬುದ್ಧಿ ಬೆಳವಣಿಗೆಯಾಗುತ್ತೆ. ಆಯಸ್ಸು ವೃದ್ಧಿಸುತ್ತೆ, ಮೆದಳು ಚುರುಕಾಗಿ, ಜ್ಞಾಪಕ ಶಕ್ತಿ ಹೆಚ್ಚುತ್ತೆ.
ಚಿಕ್ಕ ಮಕ್ಕಳಲ್ಲಿ ಅನೇಕರಿಗೆ ಸರಿಯಾಗಿ ಮಾತು ಬರುವುದಿಲ್ಲ.ಬಿಕ್ಕಳಿಸಿ ಬಿಕ್ಕಳಿಸಿ ಮಾತನಾಡ್ತಾರೆ, ಹಿರಿಯರಲ್ಲೂ ಈ ಸಮಸ್ಯೆ ಇದೆ, ಕಾರಣ ನಾಲಿಗೆ ಮಂದವಾಗಿರುವುದು.ಮಾತು ಸರಿಯಾಗಿ ಉಚ್ಚಾರಣೆ ಹೊರಗೆ ಬರುವುದಿಲ್ಲ ಅಂತವರಿಗೆ….
ಒಂದೆಲಗದ ಎಲೆಗಳನ್ನು ನೆರಳಲ್ಲಿ ಒಣಗಿಸಿ, ಅದರ ಜೊತೆಗೆ ಐದಾರು ಬಾದಾಮಿ, ಐದಾರು ಕಾಳುಮೆಣಸು ಸೇರಿಸಿ ನುಣ್ಣಗೆ ಅರೆದು, ಇದಕ್ಕೆ ಜೇನುತುಪ್ಪ ಕಲಸಿ 45 ದಿನಗಳಕಾಲ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುತ್ತಾ ಬಂದರೆ ಬಿಕ್ಕಳಿಕೆ ನಿವಾರಣೆಯಾಗುತ್ತೆ, ಜ್ಞಾಪಕಶಕ್ತಿ ಹೆಚ್ಚುತ್ತೆ, ಮನಸ್ಸನ್ನು ಪ್ರಶಾಂತವಾಗಿಸುತ್ತೆ. ಇದು ಜ್ಞಾಪಕಶಕ್ತಿ ಹೆಚ್ಚಿಸುವಲ್ಲಿ ಪ್ರಧಾನ ಪಾತ್ರವಹಿಸುತ್ತೆ.
ಚಿಕ್ಕ ಮಕ್ಕಳಿಗೆ 1 ಲೋಟ ಹಾಲಿಗೆ ಒಂದೆಲಗದ ಚೂರ್ಣ 1 ಚಮಚ, 1 ಚಮಚ ಜೇನುತುಪ್ಪ ಕಲಸಿ ಕುಡಿಸುತ್ತಿದ್ದರೆ, ಮೆದಳು ಚುರುಕಾಗಿ ಕಾರ್ಯ ನಿರ್ವಹಿಸುತ್ತೆ.
ಒಂದೆಲಗದ ಎಲೆಗಳಿಂದ ರಸ ತೆಗೆದು, ಅದಕ್ಕೆ ಸರಿಸಮನಾಗಿ ಎಳ್ಳೆಣ್ಣೆ ಸೇರಿಸಿ, ಒಲೆಯಮೇಲಿಟ್ಟು, ಚೆನ್ನಾಗಿ ಕುದಿಸಿ, ಎಣ್ಣೆಮಾತ್ರ ಉಳಿದಾಗ ಕೆಳಗಿಳಿಸಿ, ಉಗರು ಬೆಚ್ಚಗಾದಾಗ, ಸೋಸಿಕೊಂಡು, ಕೀಲುನೋವು ಇರುವಕಡೆ ಲೇಪಿಸಿ ಮಸಾಜ್ ಮಾಡುತ್ತಿದ್ದರೆ, ಕೀಲುನೋವು ನಿವಾರಣೆಯಾಗುತ್ತೆ.
ಒಂದೆಲಗದ ಎಲೆಗಳ ರಸಕ್ಕೆ, ಕರ್ಫುರಾ, ಅರಸಿಣ ಕಲಸಿ ಹುಳುಕಡ್ಡಿಯ ಮೇಲೆ ಲೇಪನ ಮಾಡುತ್ತಾ ಬಂದರೆ, ಶೀಘ್ರ ವಾಸಿಯಾಗುತ್ತೆ.
ಒಂದೆಲಗದಲ್ಲಿ ರೋಗನಿರೋಧಕಶಕ್ತಿ ಹೆಚ್ಚಿಸುವ ಗುಣ ಅಪಾರವಾಗಿದ್ದು, ದಿನವು 3-4 ಎಲೆಗಳನ್ನು ಜಗಿದು ತಿನ್ನುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತೆ.
ಒಂದೆಲಗ ಚೂರ್ಣದ ಜೊತೆಗೆ ಬೆಲ್ಲ ಸೇರಿಸಿ ಸೇವಿಸಿದರೆ ಬಿಕ್ಕಳಿಕೆ ನಿವಾರಣೆಯಾಗಿ, ದೇಹದಲ್ಲಿ ರಕ್ತಶುದ್ಧಿಯಾಗುತ್ತೆ.
ದಿನವು ಐದಾರು ಒಂದೆಲಗದ ಎಲೆಗಳನ್ನು ಬಾಯಲ್ಲಿ ಹಾಕಿಕೊಂಡು ಜಗಿಯುತ್ತಿದ್ದರೆ, ಬಾಯಿ ದುರ್ವಾಸನೆ ದೂರವಾಗಿ ದವಡೆಗಳು ದೃಢವಾಗುತ್ತೆ.

ಬ್ರಾಹ್ಮೀ ಹೇರಾಯಿಲ್ :-
500ml ಶುದ್ಧ ಕೊಬ್ಬರಿ ಎಣ್ಣೆಯನ್ನ ಒಂದು ಮಡಿಕೆಯಲ್ಲಿ ಹಾಕಿ, ಅದರಲ್ಲಿ 1 ಕಪ್ಪು ಒಂದೆಲಗದ ಸೊಪ್ಪು, 1/2 ಕಪ್ಪು ಕರಿಬೇವು, 1 ಚಮಚ ಮೆಂತ್ಯಕಾಳು, 6-8 ಸಣ್ಣ ಈರುಳ್ಳಿ, ಬೆಟ್ಟದನೆಲ್ಲಿಕಾಯಿ 2-3, ಬಿಳಿ ದಾಸವಾಳದ ಹೂಗಳು 5-6, ಲಾವಂಚದ ಬೇರು 1 ಚಮಚ ಹಾಕಿ, ಒಲೆಯಮೇಲಿಟ್ಟು 15-20 ನಿಮಿಷ ಮಂದದುರಿಯಲ್ಲಿ ಚೆನ್ನಾಗಿ ಕುದಿಸಿ, ಹಸಿವಾಸನೆ ಹೋದಮೇಲೆ, ಕೆಳಗಿಳಿಸಿ, ಉಗರು ಬೆಚ್ಚಗಾದಾಗ ಸೋಸಿಕೊಂಡು, ಒಂದು ಗಾಜಿನ ಸೀಸೆಯಲ್ಲಿ ಹಾಕಿ, ಭದ್ರಪಡಿಸಿಟ್ಟುಕೊಂಡು, ದಿನವು ತಲೆಗೆ ಲೇಪನ ಮಾಡಿಕೊಂಡರೆ, ದೇಹವು ತಂಪಾಗಿ ತಲೆ ಕೂದಲು ಉದರುವುದು ನಿಲ್ಲುತ್ತೆ.ಕೂದಲು ಕಪ್ಪಿಗೆ, ಸೊಂಪಾಗಿ ಉದ್ದಕ್ಕೆ ಬೆಳೆಯುತ್ತೆ. ಉಷ್ಣತೆಯಿಂದ ಬರುವ ತಲೆನೋವು ಶಮನವಾಗುತ್ತೆ, ಮನಸ್ಸು ಉಲ್ಲಾಸಭರಿತವಾಗಿರುತ್ತೆ. ಜ್ಞಾಪಕಶಕ್ತಿ ಹೆಚ್ಚುತ್ತೆ, ಮರೆಗುಳಿತನ ದೂರವಾಗುತ್ತೆ.
Leave a Comment