ಸಸ್ಯಶ್ಯಾಮಲೆಯ ನಡುವೆ ಬೆಟ್ಟದ ನೆತ್ತಿಯಲ್ಲಿ ನೆಲೆಸಿರುವ ಶ್ರೀ ಕರಿಕಾನ ಪರಮೇಶ್ವರಿಯ ಸನ್ನಿಧಿ ತನ್ನೊಡಲಿನ ರಮ್ಯಾದ್ಭುತ ಪ್ರಕೃತಿ ಸೌಂದರ್ಯದಿಂದಲೇ ಎಂತವರನ್ನೂ ಮಂತ್ರಮುಗ್ಧಗೊಳಿಸಬಲ್ಲುದು. ಜಗನ್ಮಾತೆಯ ಸನ್ನಿಧಿಯಲ್ಲಿ ನಿಂತು ಸಾವಿರಾರು ಅಡಿ ಕೆಳಗಿರುವ ಬಯಲು ಸಮುದ್ರ ನದಿ ತಡಸಲುಗಳನ್ನು ಊರು ಕೇರಿಗಳನ್ನು ದಿಟ್ಟಿಸುವುದೇ ಒಂದು ಸೊಗಸಿನ ಸಂಗತಿ. ಆಧ್ಯಾತ್ಮಿಕ ಹಾಗೂ ಲೌಕಿಕ ಸಂತೋಷಗಳೆರಡನ್ನೂ ಒಂದೇ ಸ್ಥಳದಲ್ಲಿ ಕಂಡುಕೊಳ್ಳಬಹುದಾದ ಈ ಪವಿತ್ರ ಸ್ಥಳದಿಂದ ಒಂದು ಕಿಲೋಮೀಟರ್ ದೂರದಲ್ಲಿ ದುರ್ಗಮವಾದ ಅಡವಿಯನಡುವೆ ಇರುವ ವಂದಡಿಕೆ ಶಿವ ದೇವಾಲಯ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿ ಬದಲಾಗಿದೆ.

ಚಿಕ್ಕದಾದ ಅಡಿಕೆ ಗಾತ್ರದಲ್ಲಿರುವ ಶಿವಲಿಂಗ ಎನ್ನುವ ಕಾರಣಕ್ಕೋ ಅಥವಾ ದುರ್ಗಮವಾದ ಆ ಕಾಡಿನ ನಡುವಲ್ಲೂ ಅಡಿಕೆ ಮರ ಇದೆ ಎನ್ನುವ ಕಾರಣಕ್ಕೋ ಈ ಹೆಸರು ಬಂದಿರಬಹುದಾದರೂ ಶಿವಲಿಂಗದಮೇಲೆ ವರ್ಷವಿಡೀ ನಿರಂತರವಾಗಿ ಬೀಳುತ್ತಲೇ ಇರುವ ಜಲಧಾರೆ ಅಚ್ಚರಿಗೆ ಕಾರಣವಾಗಿದೆ. ಸಮುದ್ರಮಟ್ಟದಿಂದ ಸಾವಿರಾರು ಅಡಿ ಎತ್ತರದಲ್ಲಿರುವ ಕರಿಕಾನ ಬೆಟ್ಟದಲ್ಲಿ ಮಳೆಗಾಲ ಬೇಸಿಗೆ ಎಂಬ ಬೇಧವಿಲ್ಲದೇ ಸದಾ ಚಿಮ್ಮುವ ಜಲಧಾರೆ ಇಲ್ಲಿನ ವೈಶಿಷ್ಠ್ಯ.

ಕರಿಕಾನ ಪರಮೇಶ್ವರಿ ದೇವಾಲಯದಿಂದ ವಂದಡಿಕೆ ಶಿವಲಿಂಗ ಇರುವಲ್ಲಿಗೆ ಹೋಗಲು ಕಾಲು ದಾರಿ ಮಾತ್ರ ಇರುವುದು ಅದೂ ದುರ್ಗಮವಾದ ಮಾರ್ಗ ಅದನ್ನೇ ಬಳಸಿಕೊಂಡು ಶಿವನಿಗೆ ಸುಂದರ ಶಿಲಾಮಯ ದೇವಾಲಯವನ್ನು ನಿರ್ಮಿಸುವ ಮೂಲಕ ದೇವಾಲಯದ ಆಡಳಿತ ಮಂಡಳಿ ಕ್ಷೇತ್ರನ್ನು ಪ್ರಸಿದ್ಧಿಗೆ ತರುವ ಪ್ರಯತ್ನದಲ್ಲಿ ಯಶಸ್ಸು ಕಂಡಿದೆ. ಕಣ್ಣಿಗೆ ಹಬ್ಬವನ್ನುಂಟುಮಾಡುವ, ಮನಸ್ಸಿಗೆ ಮುದದೊಂದಿಗೆ ನೆಮ್ಮದಿ ನೀಡಬಲ್ಲ ತಾಣದಲ್ಲಿ ಇದಾಗಿದೆ.

Leave a Comment