ಹೊನ್ನಾವರ ಮಾವಿನಕುರ್ವಾ ಸೇತುವೆ ನಿರ್ಮಾಣವೆಂಬ ಮೊಟ್ಟಗೆ ಕಾವು ಕೊಡಲು ಪ್ರಾರಂಭಿಸಿ ನಾಲ್ಕೈದು ವರ್ಷಗಳೇ ಉರುಳಿದರೂ ಮೊಟ್ಟೆಯೊಡೆದು ಮರಿ ಹೊರಗೆ ಬರುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಇದರ ಜೊತೆ ಸುತ್ತಿ ಬಳಸಿ ತಾಲೂಕು ಕೇಂದ್ರವನ್ನು ಸೇರುವುದಕ್ಕಾದರೂ ಇದ್ದ ಖರ್ವಾ ಮಾವಿನಕುರ್ವಾ ರಸ್ತೆಯೂ ಸಂಪೂರ್ಣ ಹದಗೆಟ್ಟು ಎರಡು ವರ್ಷಗಳೇ ಕಳೆದರೂ ದುರಸ್ಥಿ ಮಾಡುವ ಮನಸ್ಸು ಜನಪ್ರತನಿಧಿಗಳೆನ್ನಿಸಿಕೊಂಡವರಿಗೆ ಆಗದಿರುವುದು ಈ ಭಾಗದ ಜನರ ದೌರ್ಭಾಗ್ಯ ಎನಿಸುತ್ತಿದೆ.

ಇತ್ತೀಚೆಗೆ ಮಾವಿನಕುರ್ವಾದ ಸ್ಥಳೀಯ ಮುಖಂಡರೂ ಚುನಾವಣೆ ಸಂದರ್ಭದ ಬೆಂಬಲಿಗರೂ ಎನಿಸಿಕೊಂಡವರ ಜೊತೆ ಹಾಲಿ ಶಾಸಕರ ಸಂಬಂಧ ಹಳಸಿರುವುದು ಕೂಡಾ ರಸ್ತೆ ದುರಸ್ಥಿ ನೆನಗುದಿಗೆ ಬೀಳುವುದಕ್ಕೆ ಕಾರಣ ಎನ್ನುವ ಮಾತು ಜನರ ನಡುವೆ ಸುಳಿದಾಡುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ರಾಜಕೀಯ ಮೇಲಾಟದಲ್ಲಿ ಮಾವಿನಕುರ್ವಾದ ಕೆಲ ಸ್ಥಳೀಯರು ಶಾಸಕರದೇ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯವರನ್ನು ಮುಂದಿಟ್ಟುಕೊಂಡು ಉಸ್ತುವಾರಿ ಸಚಿವರಿಗೆ ರಸ್ತೆ ರಿಫೇರಿ ಮಾಡಿಕೊಡುವಂತೆ ಮನವಿ ನೀಡಿದ ಘಟನೆಯೂ ನಡೆದು ಹೋಗಿದೆ.
ರಾಜಕೀಯ ಏನೇ ಇರಲಿ ಜನ ಸಾಮಾನ್ಯರು ನಿತ್ಯ ಪಡುತ್ತಿರುವ ಪಾಡು, ಸಾಲ ಸೋಲ ಮಾಡಿ ಸ್ವ ಉದ್ಯೋಗದ ಕನಸಲ್ಲಿ ರಿಕ್ಷಾ, ಬೊಲೆರೋ, ಓಮಿನಿ ಮುಂತಾದ ವಾಹನ ಖರೀದಿಸಿದವರು, ಉದ್ಯೋಗದ ಕಾರಣಕ್ಕೆ ದಿನ ಬೆಳಗಾದರೆ ಬೇರೆ ಬೇರೆ ಊರಿಗೆ ತೆರಳಬೇಕಾದವರು, ಅನಾರೋಗ್ಯಕ್ಕೆ ತುತ್ತಾದವರೆಲ್ಲರೂ ಆಳುವ ವರ್ಗಕ್ಕೆ ಹಿಡಿ ಶಾಪ ಹಾಕಿ ಹತಾಶೆ ಹೊರ ಹಾಕುವುದು ಬಿಟ್ಟರೆ ಬೇರೇನೂ ಮಾಡಲಿಕ್ಕಾಗದೇ ನಿರಾಶರಾಗಿದ್ದಾರೆ. ರಾಜಕೀಯ ಪ್ರತಿಷ್ಠೆಯನ್ನು ಬದಿಗಿಟ್ಟು ಜನರ ಕಷ್ಟಕ್ಕೆ ಸ್ಪಂದಿಸುವ ಕಾಳಜಿ ಆಳುವವರಿಗೆ ಬರಬೇಕಾಗಿದೆ.

Leave a Comment