(ಪೊಲೀಸರ ಮದ್ಯಪ್ರವೇಶದಿಂದ ಬಗೆಹರಿದ ಗೊಂದಲ)
ಹೊನ್ನಾವರ –ಪಟ್ಟಣದ ರಾಯಲ್ಕೇರಿ ಸುತ್ತಮುತ್ತ ಮೂರ್ನಾಲ್ಕು ದಿನಗಳಿಂದ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಯೊಬ್ಬ ಶುಕ್ರವಾರ ರಾತ್ರಿ ಏಕಾಏಕಿ ಮನೆಯೊಂದರ ಒಳಗೆ ಪ್ರವೇಶಿಸಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಪೊಲೀಸರ ಮದ್ಯಪ್ರವೇಶದಿಂದಾಗಿ ಶಂಕಿತ ವ್ಯಕ್ತಿ ಸಾರ್ವಜನಿಕರಿಂದ ಥಳಿತಕ್ಕೊಳಗಾಗುವ ಸಂಭವನೀಯ ಅನಾಹುತ ತಪ್ಪಿದೆ.

ಅಪರಿಚಿತ ವ್ಯಕ್ತಿಯೊಬ್ಬ ಕೆಲದಿನಗಳಿಂದ ರಾಯಲ್ಕೇರಿ ಭಾಗದಲ್ಲಿ ಕಾಣಿಸಿಕೊಳ್ಳುತ್ತಿದ್ದ ಎನ್ನಲಾಗಿದೆ. ಯಾರೋ ಮಾನಸಿಕ ಅಸ್ವಸ್ಥನಿರಬಹುದು ಎಂದು ಸ್ಥಳೀಯರು ನಿರ್ಲಕ್ಷಿಸಿದ್ದರು. ಆದರೆ ಶುಕ್ರವಾರ ರಾತ್ರಿ ಮನೆಯೊಂದರ ಒಳ ಹೊಕ್ಕಿದ ಈತನನ್ನು ಮನೆಯವರು ಹಾಗೂ ನೆರೆಹೊರೆಯವರು ಸೇರಿ ಹಿಡಿದು ಪರಿಶೀಲನೆ ನಡೆಸಿದಾಗ ಬಟ್ಟೆಯ ಗಂಟು ಹಾಗೂ ಚಾಕು ಪತ್ತೆಯಾಗಿದ್ದನ್ನು ಕಂಡು ಕಳ್ಳತನಕ್ಕೇ ಮುಂದಾಗಿದ್ದ ಎಂದು ತಿಳಿದು ಸಾರ್ವಜನಿಕರು ಥಳಿಸಲು ಮುಂದಾಗಿದ್ದಾರೆ. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ದಾವಿಸಿದ ಪೊಲೀಸರು ಆರೋಪಿ ಸ್ಥಾನದಲ್ಲಿದ್ದ ವ್ಯಕ್ತಿಯನ್ನು ಸಾರ್ವಜನಿಕರಿಂದ ಬಿಡಿಸಿಕೊಂಡು ಠಾಣೆಗೆ ಕರೆದೊಯ್ದು ವಿಚಾರಿಸಿದಾಗ ಆತನೊಬ್ಬ ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ವ್ಯಕ್ತಿಯೆಂದು ತಿಳಿದುಬಂದಿದೆ.

ಅಪರಿಚಿತರನ್ನು ಅನುಮಾನದಿಂದಲೇ ನೋಡುವ ಜನರು
ತಾಲೂಕಿನಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ಆತಂಕದ ನಡುವೆಯೇ ಇತ್ತೀಚೆಗೆ ಪೊಲೀಸರ ಬಲೆಗೆ ಬಿದ್ದ, ತಾಲೂಕಿನಲ್ಲಿ ನಡೆದಿದ್ದ 10 ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಚಂದವಾರ ಮೂಲದ ಖತರ್ನಾಕ ಸಹೋದರರಿಬ್ಬರು ಅಡಿಕೆ ವ್ಯಾಪಾರಿಗಳೆಂದು ಹೇಳಿಕೊಂಡು ಊರೂರು ಸುತ್ತುತ್ತಿದ್ದರು, ಎನ್ನುವ ಸಂಗತಿ ಬಹಿರಂಗವಾದ ನಂತರವಂತೂ ಯಾವುದೇ ಏರಿಯಾದಲ್ಲಿ ಅಪರಿಚತರನ್ನು ಕಂಡರೂ ಜನರು ಅವರನ್ನು ಕಳ್ಳರಂತೆ ಅನುಮಾನದಿಂದ ನೋಡುವ ಸ್ಥಿತಿ ನಿರ್ಮಾಣವಾಗಿದೆ.
ಇದರಿಂದ ಊರೂರು ಅಲೆಯುವ ಪ್ರಾಮಾಣಿಕ ವ್ಯಾಪಾರಿಗಳು, ಯಾವುದೋ ಕೆಲಸಗಳಿಗೆ ಅಪರಿಚಿತ ಸ್ಥಳಗಳಿಗೆ ಬೇಟಿಕೊಡುವ ಅಮಾಯಕರು, ಮಾನಸಿಕ ಅಸ್ವಸ್ಥರು ಪೂರ್ವಾಗ್ರಹಪೀಡಿತ ಸಾರ್ವಜನಿಕರ ಕೋಪಕ್ಕೆ ತುತ್ತಾಗುವ, ಸಾಮೂಹಿಕ ಹಲ್ಲೆಯಂತ ಘಟನೆಗಳಿಗೆ ಕಾರಣವಾಗುವ ಸಾಧ್ಯತೆ ಅಧಿಕವಾಗಿದೆ.

ರಾಯಲ್ಕೇರಿಯಲ್ಲಿ ಕಾಣಿಸಿಕೊಂಡಾತ ಚಿಕ್ಕಮಗಳೂರಿನ ಮಾನಸಿಕ ಅಸ್ವಸ್ಥ
ಶುಕ್ರವಾರ ರಾತ್ರಿ ರಾಯಲ್ಕೇರಿಯಲ್ಲಿ ಸಾರ್ವಜನಿಕರ ಕೈಗೆ ಸಿಕ್ಕುಬಿದ್ದಾತ ಚಿಕ್ಕಮಗಳೂರು ಮೂಲದ ಮಾನಸಿಕ ಅಸ್ವಸ್ಥ ಎನ್ನುವುದು ಪೊಲೀಸರ ಮದ್ಯಪ್ರವೇಶದಿಂದಷ್ಟೇ ತಿಳಿದು ಬಂದಿದೆ. ಆದರೂ ಇಷ್ಟಾಗುವಷ್ಟರಲ್ಲೇ ಸಾಮಾಜಿಕ ಜಾಲತಾಣದಲ್ಲಿ ರಾಯಲ್ಕೇರಿಯಲ್ಲಿ ಕಳ್ಳನನ್ನು ಸಾರ್ವಜನಿಕರು ಹಿಡಿದಿದ್ದಾರೆ, ಕುಂದಾಪುರ ಕಡೆಯಿಂದ ತಂಡವೊಂದು ಹೊನ್ನಾವರದಲ್ಲಿ ಬೀಡುಬಿಟ್ಟಿದೆ. ವಿವಿದೆಡೆ ಕಳ್ಳತಕ್ಕೆ ಹೊಂಚುಹಾಕುತ್ತಿದ್ದಾರೆನ್ನುವ ತಲೆಬುಡವಿಲ್ಲದ ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ತಾಲೂಕಿನ ಜನರನ್ನು ಭಯಭೀತಗೊಳಿಸಿದ ಘಟನೆಯೂ ನಡೆದು ಹೋಗಿದೆ.
[ಶುಕ್ರವಾರ ರಾತ್ರಿ ರಾಯಲ್ಕೇರಿಯಲ್ಲಿ ವ್ಯಕ್ತಿಯೊಬ್ಬನ ಅಸಹಜ ಎನಿಸುವ ವರ್ತನೆಯಿಂದ ಅನುಮಾನಗೊಂಡ ಸಾರ್ವಜನಿಕರು ಆತನನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದರು. ಆತನ ವಿಚಾರಣೆ ನಡೆಸಿದಾಗ ಮಾನಸಿಕ ಅಸ್ವಸ್ಥ ಎನ್ನುವುದು ದೃಢವಾಗಿದ್ದು ಆತನ ಊರಿಗೆ ಕಳುಹಿಸಿಕೊಟ್ಟಿದ್ದೇವೆ. ಸಾರ್ವಜನಿಕರು ಸುಳ್ಳು ಸುದ್ದಿಗೆ ಕಿವಿಗೊಟ್ಟು ಭಯ ಪಡಬೇಕಾದ ಅಗತ್ಯವಿಲ್ಲ. – ಶಶಿಕುಮಾರ್ ಸಿ.ಆರ್, ಪಿ.ಎಸ್.ಐ ಹೊನ್ನಾವರ]
Leave a Comment