ಹೊನ್ನಾವರ – ಇತ್ತೀಚೆಗೆ ಸಂಭವಿಸಿದ್ದ ಆಕಸ್ಮಿಕ ಅಗ್ನಿ ದುರಂತದಲ್ಲಿ ಸ್ಟುಡಿಯೋ ಭಸ್ಮವಾಗಿ ಅಪಾರ ನಷ್ಟ ಅನುಭವಿಸಿದ್ದ ಪಟ್ಟಣದ ಶ್ರೀರಾಮ ಸ್ಟುಡಿಯೋ ಮಾಲಿಕ ಸುಭಾಷ್ ಅವರಿಗೆ ರಾಜ್ಯ ಪೋಟೋಗ್ರಾಫರ್ಸ್ ಸಂಘಟನೆಯವರು ಕ್ಯಾಮರಾ ನೀಡುವ ಮೂಲಕ ನೆರವಾದರು.
ಅಗ್ನಿ ದುರಂತದಲ್ಲಿ ಸ್ಟುಡಿಯೋ ಸುಟ್ಟುಹೋದ ನಂತರ ತಾಲೂಕಾ ಪೋಟೋಗ್ರಾಫರ್ಸ್ ಸಂಘದವರು ಹಾಗೂ ನೆರೆಯ ತಾಲೂಕಿನ ಸಂಘಟನೆಯವರು ಒಂದಷ್ಟು ಸಹಾಯ ಮಾಡಿದ್ದರು. ಕಷ್ಟದಲ್ಲಿರುವ ಛಾಯಾಗ್ರಾಹಕನ ನೆರವಿಗೆ ಬರುವಂತೆ ರಾಜ್ಯ ಸಂಘಟನೆಯನ್ನು ತಾಲೂಕಾ ಸಂಘದವರು ಕೋರಿದ್ದರು. ಸಂಘದ ಮನವಿಯನ್ನು ಪರಿಗಣಿಸಿ ರಾಜ್ಯಾಧ್ಯಕ್ಷ ಪರಮೇಶ್ವರ.ಎಸ್ ಅವರು ಮಂಗಳವಾರ ತಾಲೂಕಿಗೆ ಆಗಮಿಸಿ ಸರಳ ಕಾರ್ಯಕ್ರಮದಲ್ಲಿ ಸಂತ್ರಸ್ತ ಛಾಯಾಗ್ರಾಹಕನಿಗೆ ಕ್ಯಾಮಾರಾ ನೀಡಿ ದೈರ್ಯ ತುಂಬಿದರು.

ಕ್ಯಾಮರಾ ಸ್ವೀಕರಿಸಿ ಮಾತನಾಡಿದ ಸುಭಾಷ ಸಂಕಷ್ಟದಲ್ಲಿ ನೆರವು ನೀಡಿದ ಪ್ರತಿಯೊಬ್ಬರಿಗೂ ಋಣಿಯಾಗಿದ್ದು ಸಂಘಟನೆಯೊಂದಿಗೆ ಸದಾ ಕಾಲ ಇರಲಿದ್ದೇನೆ ಎಂದು ಭಾವುಕರಾದರು. ರಾಜ್ಯಾಧ್ಯಕ್ಷರನ್ನು ತಾಲೂಕಾ ಸಂಘದಿಂದ ಸನ್ಮಾನಿಸಿ ಗೌರವಿಸಲಾಯಿತು. ತಾಲೂಕಾ ಪೋಟೋಗ್ರಾಫರ್ ಸಂಘಟನೆಯ ಅಧ್ಯಕ್ಷ ಎಂ.ಎನ್.ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪೋಟೋಗ್ರಾಫರ್ ಸಂಘಟನೆಯ ಭಟ್ಕಳ ತಾಲೂಕಾ ಘಟಕದ ಅಧ್ಯಕ್ಷ ಶ್ರೀನಿವಾಸ ನಾಯ್ಕ, ಕುಮಟಾ ಘಟಕದ ಅಧ್ಯಕ್ಷ ಪರಶುರಾಮ, ತಾಲೂಕ ಸಂಘಟನೆಯ ಪದಾಧಿಕಾರಿಗಳಾದ ಎನ್.ಗಣಪತಿ, ಆರ್.ಕೆ.ಮೇಸ್ತ, ಶ್ರೀಪಾದ ನಾಯ್ಕ, ಮೋಹನ ನಾಯ್ಕ, ತಾಲೂಕಿನ ಪೋಟೊಗ್ರಾಫರ್ ಸಂಘದ ಸದಸ್ಯರು ಹಾಜರಿದ್ದರು.
[ಸಂಘಟನೆ ಸದೃಢವಾಗಿದ್ದರೆ ಎಂತಹುದೇ ಕಷ್ಟದ ಪರಿಸ್ಥಿತಿಯನ್ನೂ ಸಮರ್ಥವಾಗಿ ಎದುರಿಸಬಹುದು ಎನ್ನುವುದಕ್ಕೆ ಇಂದಿನ ಕಾರ್ಯಕ್ರಮ ಸಾಕ್ಷಿಯಾಗಿದೆ. ವೃತ್ತಿ ಬಾಂದವರೆಲ್ಲರೂ ಸಂಘಟನೆಯಲ್ಲಿ ಸೇರಿದರೆ ಸಂಘಟನೆ ಮತ್ತಷ್ಟು ಬಲಗೊಳ್ಳಲು ಸಾಧ್ಯವಿದೆ. ಕರ್ನಾಟಕ ಛಾಯಗ್ರಾಹಕ ಅಕಾಡೆಮಿ ಸ್ಥಾಪನೆಯಾಗುವುದು ತೀರಾ ಅಗತ್ಯವಿದ್ದು ಸರ್ಕಾರದ ಗಮನ ಸೆಳೆಯಲು ಮುಂದಿನ ದಿನದಲ್ಲಿ ನಾವೆಲ್ಲರೂ ಹೋರಾಟಕ್ಕೆ ಅಣಿಯಾಗಬೇಕಿದೆ – ಪರಮೇಶ್ವರ.ಎಸ್, ಪೋಟೋಗ್ರಾಫರ್ಸ್ ಸಂಘಟನೆಯ ರಾಜ್ಯಾಧ್ಯಕ್ಷರು]
Leave a Comment