ಒಬ್ಬರು ಇನ್ಸ್ಪೆಕ್ಟರ್, ಮೂವರು ಸಬ್ಇನ್ಸ್ಪೆಕ್ಟರ್, 8 ಮಂದಿ ಅಸಿಸ್ಟೆಂಟ್ ಸಬ್ಇನ್ಸಪೆಕ್ಟರ್, 22 ಮಂದಿ ಹೆಡ್ಕಾನ್ಸ್ಟೇಬಲ್, 35 ಮಂದಿ ಪೊಲೀಸ್ ಕಾನ್ಸ್ಟೇಬಲ್ ಸೇರಿ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಒಟ್ಟೂ 67 ಮಂದಿ ಇದ್ದಾರೆ. ದಿನದ 24 ಗಂಟೆಯೂ ಸಮಾಜದ ಆಗುಹೋಗುಗಳಿಗೆ ಮೈಯೆಲ್ಲಾ ಕಣ್ಣಾಗಿ ಪ್ರತಿಕ್ರಿಯಿಸುತ್ತಿರುವ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕುಟುಂಬಕ್ಕೆ ಉತ್ತಮ ಗುಣಮಟ್ಟದ ವಸತಿ ಸೌಲಭ್ಯ ಕಲ್ಪಿಸಬೇಕಾದುದು ಇಲಾಖೆಯ ಕರ್ತವ್ಯ. ಆದರೂ ಹೊನ್ನಾವರದಲ್ಲಿ ಕರ್ತವ್ಯ ನಿರ್ವಹಿಸುವ ಆರಕ್ಷಕರಿಗೆ ವಸತಿ ಸೌಲಭ್ಯ ಎನ್ನುವುದು ಮರೀಚಿಕೆಯಾಗಿ ಉಳಿದಿರುವುದರ ಹಿಂದಿನ ಮರ್ಮ ತಿಳಿಯುತ್ತಿಲ್ಲವಾಗಿದೆ.

ಕೆಲ ವರ್ಷಗಳ ಹಿಂದೆ ನಿರ್ಮಾಣವಾದ ಕಟ್ಟದಲ್ಲಿ ಲಭ್ಯವಿರುವುದು ಕೇವಲ 27 ಕ್ವಾಟ್ರಸ್ಗಳು ಮಾತ್ರ. ಉಳಿದ ಅಧಿಕಾರಿಗಳು ಸಿಬ್ಬಂದಿಗಳು ಅನಿವಾರ್ಯವಾಗಿ ಖಾಸಗಿ ಕಟ್ಟಡಗಳಲ್ಲಿ ಬಾಡಿಗೆ ರೂಮ್ ಪಡೆದು ವಾಸಿಸುತ್ತಿದ್ದಾರೆ. ಹೊಸ ಕಟ್ಟಡ ನಿರ್ಮಾಣದ ಉದ್ದೇಶಕ್ಕಾಗಿ ಹಳೆಯ ಕಟ್ಟಡವನ್ನು ಕೆಡವಿ ಮೂರು ವರ್ಷಗಳೇ ಉರುಳಿ ಹೋಗಿದೆ ಆದರೆ ಇದುವರೆಗೂ ಹೊಸ ಕಟ್ಟಡ ನಿರ್ಮಾಣವಾಗುವ ಯಾವ ಲಕ್ಷಣಗಳೂ ಗೋಚರಿಸುತ್ತಿಲ್ಲವಾಗಿದೆ. ಅಗತ್ಯವಿದ್ದರೂ ತಮ್ಮ ಬೇಡಿಕೆಯನ್ನು ಮುಕ್ತವಾಗಿ ಹೇಳಿಕೊಳ್ಳುವುದಕ್ಕೆ ಸಾಧ್ಯವಿಲ್ಲದೆ ಎಂದಾದರೊಂದು ದಿನ ಇಲಾಖೆ ತಮಗೆ ಅನುಕೂಲಮಾಡಿಕೊಡಬಹುದೆಂದು ಭವಿಷ್ಯದ ದಿನಗಳನ್ನು ಎದುರು ನೋಡುತ್ತಿದ್ದಾರೆ.
ಸಿಬ್ಬಂದಿಗಳು ಮತ್ತು ಅಧಿಕಾರಿಗಳಿಂದ ಗುಣಮಟ್ಟದ ಸೇವೆಯನ್ನು ಅಪೇಕ್ಷಿಸುವ ಇಲಾಖೆ ಅವರ ಬೇಡಿಕೆಗಳನ್ನು ಅರಿತು ಪೂರೈಸುವುದಕ್ಕೆ ಮುಂದಾಗುತ್ತದೆಯೋ ಎನ್ನುವುದನ್ನು ಕಾದು ನೋಡಬೇಕು.

Leave a Comment