ಮೊಬೈಲ್ ಇಲ್ಲದೆ ಮನೆಯಲ್ಲಿ ಟಿ.ವಿಯೂ ಇಲ್ಲದ ಕಾರಣ ಆನ್ಲೈನ್ ತರಗತಿಯೂ ಇಲ್ಲದೆ ದೂರದರ್ಶನ ಪಾಠದಿಂದಲೂ ವಂಚಿತನಾಗಿದ್ದ ಬಡ ಕುಟುಂಬದ ವಿದ್ಯಾರ್ಥಿಯ ಕಷ್ಟವನ್ನು ಅರಿತು, ಅದಕ್ಕಾಗಿ ಮರುಗಿದ ಚಿತ್ತಾರ ಪ್ರೌಢಶಾಲೆಯ ಸಹ ಶಿಕ್ಷಕ ಪ್ರಕಾಶ ನಾಯ್ಕ ಅವರು ಸ್ವಂತ ಖರ್ಚಿನಿಂದ ಟಿ.ವಿಯನ್ನು ನೀಡಿ ವಿದ್ಯಾರ್ಥಿಗೆ ನೆರವಾಗಿ ಆದರ್ಶ ಮೆರೆದಿದ್ದಾರೆ.

ದೇವಾಲಯದ ಬಾಗಿಲು ತೆರೆದು ಭಕ್ತರಿಗೆ ದರ್ಶನ ಭಾಗ್ಯ ಸಿಕ್ಕಿದೆ ಆದರೆ ವಿದ್ಯಾದೇಗುಲದ ಬಾಗಿಲುಗಳು ಮಾತ್ರ ಇನ್ನೂ ವಿದ್ಯಾರ್ಥಿಗಳ ಪಾಲಿಗೆ ತೆರೆದಿಲ್ಲ. ಆನ್ಲೈನ್ ತರಗತಿಗಾಗಿ ಆಂಡ್ರಾಯ್ಡ್ ಮೊಬೈಲ್ ಹಿಡಿದು ಗುಡ್ಡ ಬೆಟ್ಟ ಅಲೆಯುತ್ತಿರುವ ವಿದ್ಯಾರ್ಥಿಗಳು ಒಂದೆಡೆಯಾದರೆ ಮನೆಯೊಳಗೆ ಟಿ.ವಿ ಎದುರು ಕುಳಿತು ದೂರದರ್ಶನದಲ್ಲಿ ಪ್ರಸಾರವಾಗುವ ಪಾಠವನ್ನು ಕೇಳಿಯೇ ಜ್ಞಾನದ ಹಸಿವನ್ನು ನೀಗಿಸಿಕೊಳ್ಳುವ ಅನಿವಾರ್ಯತೆಯಲ್ಲಿಯೂ ಹಲವರಿದ್ದಾರೆ. ಆದರೆ ಮನೆಮಂದಿಯ ತುತ್ತಿನ ಚೀಲ ತುಂಬಿಸಿಕೊಳ್ಳುವ ಹೋರಾಟದಲ್ಲಿಯೇ ಹೈರಾಣಾಗಿರುವ ಚಿತ್ತಾರ ಗ್ರಾಮಪಂಚಾಯತದ ಹಡಿಕಲ್ನ ವಿದ್ಯಾರ್ಥಿ ನವೀನ್ ಮರಾಠಿಯ ಬಡ ಕುಟುಂಬಕ್ಕೆ ದುಬಾರಿ ಬೆಲೆಯ ಆಂಡ್ರಾಯ್ಡ್ ಮೊಬೈಲ್ ಥವಾ ಟಿ.ವಿ.ಖರೀದಿಸುವುದು ದುಸ್ತರವೆನಿಸಿತ್ತು. ವಿದ್ಯಾರ್ಥಿಯ ಅಸಹಾಯಕ ಸ್ಥಿತಿಯನ್ನು ಅರಿತು ಶಿಕ್ಷಕರೇ ಟಿ.ವಿ ನೀಡಿದ್ದರಿಂದ ಬಾಲಕನಿಗೆ ದೂರದರ್ಶನ ಪಾಠ ಕೇಳುವ ಅವಕಾಶ ಸಿಕ್ಕಂತಾಗಿದೆ.

ಕುಗ್ರಾಮಗಳಿಂದಲೇ ಸುತ್ತುವರೆದಿರುವ ಬಡ ಕೂಲಿ ಕಾರ್ಮಿಕರು, ರೈತರ ಮಕ್ಕಳೇ ತುಂಬಿರುವ ಚಿತ್ತಾರದ ಸರ್ಕಾರಿ ಪ್ರೌಢಶಾಲೆ ಸತತ ಐದು ವರ್ಷಗಳಿಂದ ಎಸ್.ಎಸ್.ಎಲ್.ಸಿಯಲ್ಲಿ ನೂರು ಪ್ರತಿಶತ ಫಲಿತಾಂಶವನ್ನು ನೀಡುವ ಮೂಲಕ ಜಿಲ್ಲೆಯ ಗಮನವನ್ನು ಸೆಳೆದಿದದೆ. ಶಿಕ್ಷಣದ ಜೊತೆ ಜೊತೆಯಲ್ಲಿಯೇ ಪಠ್ಯೇತರ ಚಟುವಟಿಕೆಗಳಲ್ಲೂ ಗಮನಾರ್ಹ ಸಾಧನೆ ಇಲ್ಲಿನ ವಿದ್ಯಾರ್ಥಿಗಳಿಂದ ಮೂಡಿಬರುತ್ತಿದೆ ನಾಟಕ ಸ್ಪರ್ದೆಗಳಲ್ಲಿ ಹಲವು ಬಾರಿ ರಾಜ್ಯಮಟ್ಟದ ಪ್ರದರ್ಶನ ವಿದ್ಯಾರ್ಥಿಗಳಿಂದ ಮೂಡಿಬಂದಿದೆ. ಈ ಎಲ್ಲಾ ಸಾಧನೆಯ ಹಿಂದಿರುವ ಶಕ್ತಿಯೇ ಶಿಕ್ಷಕರಾದ ಪ್ರಕಾಶ ನಾಯ್ಕ ಎನ್ನುವುದನ್ನು ಪಾಲಕರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಪಾಠದ ಜೊತೆ ವಿದ್ಯಾರ್ಥಿಗಳ ಪ್ರತಿಭೆಯನ್ನು ಅರಿತು ಮಾರ್ಗದರ್ಶನ ಮಾಡಬಲ್ಲ, ಕಷ್ಟದಲ್ಲಿ ಕೈ ಹಿಡಿದು ಬೆನ್ನು ತಟ್ಟಿ ಪ್ರೋತ್ಸಾಹಿಸುವ ಶಿಕ್ಷಕರ ಸಂಖ್ಯೆ ಹೆಚ್ಚಬೇಕಿದೆ.
Leave a Comment