ಎಲೆಮರೆಯ ಕಾಯಿಯಂತೆ ಬದುಕುತ್ತಾ ಸಂದರ್ಭ ಮತ್ತು ಅವಕಾಶ ಒದಗಿದಾಗಲೆಲ್ಲಾ ತನ್ನ ಸುತ್ತಲ ಜಗತ್ತಿನ ಘಟನಾವಳಿಗಳಿಗೆ ಕನ್ನಡಿ ಹಿಡಿದು ಅಕ್ಷರಗಳಲ್ಲಿ ಕಡೆದು ಕವನ ರೂಪದಲ್ಲಿ ಕಟ್ಟಿಕೊಡುತ್ತಿದ್ದ ಅಪರೂಪದ ಭಾವಜೀವಿ ಮಂಜುನಾಥ ನಾಯ್ಕ ಯಲ್ವಡಿಕವೂರ್ ಅವರ ಚೊಚ್ಚಲ ಕನಸು “ಅಂಜುಬುರುಕಿಯ ರಂಗವಲ್ಲಿ” ಹೆಸರಲ್ಲಿ ಬಿಡುಗಡೆಗೆ ಸಿದ್ಧವಾಗಿದೆ.

ಪೊಲೀಸ್ ಇಲಾಖೆಯ ಹೊನ್ನಾವರ ಠಾಣೆಯಲ್ಲಿ ಸೇವೆಸಲ್ಲಿಸುತ್ತಿರುವ ಇವರು ವೃತ್ತಿಯ ಒತ್ತಡದ ನಡುವೆಯೂ ಸಾಹಿತ್ಯ ಕೃಷಿಯಲ್ಲಿ ಹಿಡಿತ ಸಾಧಿಸಿದ ಬಗೆ ಬೆರಗುಮೂಡಿಸುತ್ತದೆ. ಈ ಬಗ್ಗೆ ಕರಾವಳಿಮುಂಜಾವು ಪತ್ರಿಕೆ ವರ್ಷದ ಹಿಂದೆಯೇ “ಖಾಕಿಯೊಳಗೊಬ್ಬ ಕವಿ” ಎನ್ನುವ ಶೀರ್ಷಿಕೆಯಡಿ ವಿಶೇಷ ಲೇಖನ ಪ್ರಕಟಿಸಿ ಮಂಜುನಾಥ ನಾಯ್ಕ ಅವರ ಪ್ರತಿಭೆಗೆ ಉತ್ತೇಜನ ನೀಡುವ ಪ್ರಯತ್ನ ಮಾಡಿತ್ತು ಎನ್ನುವುದನ್ನು ಸ್ಮರಿಸಬಹುದಾಗಿದೆ.
ಹಿರಿಯ ಸಾಹಿತಿ ಖ್ಯಾತ ಬರಹಗಾರ ಡಾ.ಶ್ರೀಪಾದ ಶೆಟ್ಟಿ ಅವರು ಅಂಜುಬುರುಕಿಗೆ ಅರ್ಥಪೂರ್ಣ ಮುನ್ನುಡಿ ಬರೆದುಕೊಟ್ಟಿದ್ದಾರೆ. ಕನ್ನಡ ಸಾಹಿತ್ಯಪರಿಷತ್ ತಾಲೂಕಾ ಘಟಕದ ಆಶ್ರಯದಲ್ಲಿ ಅಂಜುಬುರುಕಿ ರಂಗವಲ್ಲಿ ಕವನ ಸಂಕಲನ ಅಕ್ಟೋಬರ್ ನಾಲ್ಕರಂದು ಸೋಶಿಯಲ್ ಕ್ಲಬ್ನಲ್ಲಿ ಬಿಡುಗಡೆಯಾಗಲಿದೆ. ಭಟ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ನಿಖಿಲ್ ಬಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜಾನಪದ ವಿದ್ವಾಂಸ ಡಾ.ಎನ್.ಆರ್.ನಾಯಕ ಕೃತಿ ಬಿಡುಗಡೆ ಮಾಡಿದರೆ ಶಿಕ್ಷಕರಾದ ಶ್ರೀಧರ ಶೇಟ್ ಶಿರಾಲಿ ಕೃತಿ ಪರಿಚಯಿಸಲಿದ್ದಾರೆ. ಮಂಜುನಾಥ ನಾಯ್ಕ ಅವರ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸಾಹಿತ್ಯ ಲೋಕದ ಪ್ರಮುಖರು ಹಾಜರಿದ್ದು ಶುಭ ಹಾರೈಸಲಿದ್ದಾರೆ.
Leave a Comment