ಸಾವಿರ ಜನ ಸಾಗಿದ ದಾರಿಯಲ್ಲಿಯೇ ಹೆಜ್ಜೆ ಹಾಕುವುದು ಕಷ್ಟವಾಗಲಾರದು ಎನ್ನುವುದಕ್ಕಿಂತ ಆ ಮಾರ್ಗ ಸಾಧಕರನ್ನು ರೂಪಿಸಲಾರದು. ಯಾರೂ ಮಾಡದ ಪ್ರಯತ್ನಿಸಲು ಹಿಂದೇಟು ಹಾಕುವಂತ ರಂಗದಲ್ಲಿ ಮುನ್ನುಗ್ಗಿದವರು ಮಾತ್ರ ಸಾಧಕರಾಗಿ ಹೊರ ಹೊಮ್ಮುತ್ತಾರೆ ಎನ್ನುವ ಮಾತಿದೆ. ಈ ಮಾತನ್ನು ಸಾಕ್ಷೀಕರಿಸಿದ ಪ್ರತಿಭೆ ಎನ್.ಎಮ್. ಗುರುಪ್ರಸಾದ. ಹೊನ್ನಾವರ ತಾಲೂಕಿನ ಕೆರೆಕೋಣದ ಕೃಷಿ ಕುಟುಂಬದ ಮಂಜುನಾಥ ಭಟ್ಟ ನೆಡಭಾಗ ಮತ್ತು ಶ್ರೀದೇವಿ ದಂಪತಿಯ ಸುಪುತ್ರನಾದ ಈತ ಎಮ್.ಎಸ್ಸಿ-ಎನ್ವಿರಾನ್ಮೆಂಟಲ್ ಸೈನ್ಸ್ ನಲ್ಲಿ ಪ್ರಥಮ ಶ್ರೇಣಿಯೊಂದಿಗೆ ಮುಗಿಸಿದ್ದು ಮೈಸೂರು ವಿಶ್ವವಿದ್ಯಾಲಯದ ಶತಮಾನದ ಘಟಿಕೋತ್ಸವದಲ್ಲಿ 5 ಬಂಗಾರದ ಪದಕಗಳನ್ನು ಕೊರಳಿಗೆ ಹಾಕಿಕೊಂಡಿದ್ದಾನೆ.


ಕೆರಕೋಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು, ಹೊನ್ನಾವರ ಪಟ್ಟಣದ ಹೋಲಿರೋಸರಿಯಲ್ಲಿ ಪ್ರೌಢ ಶಿಕ್ಷಣವನ್ನು ಪಡೆದಿದ್ದಾನೆ. ಪಿ.ಯು.ಸಿಯನ್ನು ನೆಲ್ಲಿಕೇರಿ ಕುಮಟಾದಲ್ಲೂ ಬಿ.ಎಸ್ಸಿ ಪದವಿಯನ್ನು ಡಾ.ಎ.ವಿ.ಬಾಳಿಗಾ ಕಾಲೇಜು ಕುಮಟಾದಲ್ಲಿ ಪೂರೈಸಿ ಎನ್ವಿರಾನ್ಮೆಂಟಲ್ ಸೈನ್ಸ್ನಲ್ಲಿ ಎಮ್.ಎಸ್ಸಿಯನ್ನು ಹಾಸ್ಟೆಲ್ನಲ್ಲಿದ್ದುಕೊಂಡು ಮೈಸೂರಿನ ಮಾನಸಗಂಗೋತ್ರಿ ವಿದ್ಯಾಲಯದಲ್ಲಿ ಓದಿದ್ದಾನೆ.
ಎನ್ವಿರಾನ್ಮೆಂಟ್ ಸೈನ್ಸ್ ಸಬ್ಜೆಕ್ಟ್ ಆಯ್ದುಕೊಂಡಾಗ ಸಾಕಷ್ಟು ಮಂದಿ ಇದನ್ಯಾಕೆ ತೆಗೆದುಕೊಂಡೆ ಇದಕ್ಕೆ ಯಾವುದೇ ವ್ಯಾಲ್ಯೂ ಇಲ್ಲ ಎಂದಿದ್ದರು. ಆದರೆ ಏನಾದರೊಂದು ಸಾಧನೆ ಮಾಡಲೇಬೇಕೆಂದು ಹಠಕ್ಕೆ ಬಿದ್ದು ಓದಿದ ಪರಿಣಾಮ ಉತ್ತಮ ಫಲಿತಾಂಶ ಸಿಕ್ಕಿದೆ. ಮೆಡಿಸಿನ್ ಪ್ಲಾಂಟ್ ವಿಷಯದಲ್ಲಿ ಪಿ.ಹೆಚ್ಡಿ ಮಾಡಿ ಪ್ರೊಫೆಸರ್ ಆಗಬೆಕೆನ್ನುವ ಬಯಕೆ ಇದೆ ಎನ್ನುತ್ತಾನೆ ಗುರುಪ್ರಸಾದ್. ಯಾವುದೇ ಒಂದು ಪದವಿ ಶ್ರೇಷ್ಠ ಅಥವಾ ಕನಿಷ್ಠ ಅಂತ ಇಲ್ಲ. ಕಷ್ಟಪಟ್ಟು ಓದಿ ಅತ್ಯುತ್ತಮ ಸಾಧನೆ ಮಾಡಿದರೆ ಯಾವುದೇ ರಂಗದಲ್ಲೂ ಬೆಲೆಯಿದೆ ಎಲ್ಲದಕ್ಕೂ ಮೊದಲು ನಾವು ಕಂಪರ್ಟ್ ಜೋನ್ ಇಂದ ಹೊರಗೆ ಬರುವ ಮನಸ್ಸು ಮಾಡಬೇಕು ಎಮದು ಕಿವಿಮಾತು ಹೇಳುತ್ತಾನೆ ಸಾಧಕ ವಿದ್ಯಾರ್ಥಿ.
Leave a Comment