(ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷರಾಗಿ ಚುನಾಯಿತರಾದ ಕೆಲವೇ ಹೊತ್ತಿನಲ್ಲಿ ಇಹಲೋಕ ಯಾತ್ರೆ ಮುಗಿಸಿದ ಹಠವಾದಿ)
ಹೊನ್ನಾವರ – “ಆಸ್ಪತ್ರೆಯಲ್ಲಿಯೇ ಇದ್ದಿದ್ದರೆ ಬದುಕಿರುತ್ತಿದ್ದರೇನೋ ಮಾರ್ಕೆಟಿಂಗ್ ಸೊಸೈಟಿ ಆಡಳಿತ ಮಂಡಳಿ ಚುನಾವಣೆಯಲ್ಲಿ ಭಾಗಿಯಾಗುವ ಹಠಕ್ಕೆ ಬಿದ್ದು ಜೀವವನ್ನೇ ಕಳೆದುಕೊಳ್ಳುವಂತಾಯ್ತೆ. ಛೇ ವಿಧಿ ಈ ಪರಿಯಲ್ಲಿ ಖುಷಿ ಕೊಟ್ಟು ಜೀವ ಕಸಿದುಕೊಳ್ಳಬಾರದಿತ್ತು” ಇದು ಹೊನ್ನಾವರ ಟಿ.ಎ.ಪಿ.ಸಿ.ಎಂ.ಎಸ್ ಚುನಾವಣೆಯನ್ನು ಭರ್ಜರಿಯಾಗಿ ಗೆದ್ದು ಅವಿರೋಧವಾಗಿ ಅಧ್ಯಕ್ಷಗಾದಿಗೇರಿದ ಕೆಲವೇ ಹೊತ್ತಲ್ಲಿ ಸಾವಿನ ಮನೆ ಕದ ತಟ್ಟಿದ ತಿಮ್ಮಣ್ಣ ಸಂಭಯ್ಯ ಹೆಗಡೆ ಕುರಿತು ತಾಲೂಕಿನ ಜನರಾಡುತ್ತಿರುವ ಮಾತು.

ಮಂಗಳವಾರ ಸಂಜೆ ಹೃದಯಾಘಾತಕ್ಕೆ ತುತ್ತಾಗಿ ಇಹಲೋಕ ಯಾತ್ರೆ ಮುಗಿಸಿದ ಟಿ.ಎಸ್.ಹೆಗಡೆ ಸೋಮವಾರ ಸಂಜೆಯಷ್ಟೇ ಕೊರೊನಾಗೆ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು. ಟಿ.ಎಸ್.ಹೆಗಡೆ ಇನ್ನಿಲ್ಲ ಎನ್ನುವ ಆಘಾತಕಾರಿ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಸುರುವಾದಾಗ ಅದನ್ನು ನಂಬಿದವರಿಗಿಂತ ಅಲ್ಲಗೆಳೆದವರೇ ಹೆಚ್ಚು. ಯಾಕೆಂದರೆ ಮದ್ಯಾಹ್ನದ ಹೊತ್ತಿಗಾಗಲೇ ಟಿ.ಎಸ್.ಹೆಗಡೆ ಟಿ.ಎ.ಪಿ.ಸಿ.ಎಂ.ಎಸ್ನ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಆಯ್ಕೆಯಾದರು ಎನ್ನುವ ಸುದ್ದಿ ಆಗಿನ್ನೂ ಕಾವು ಕಳೆದುಕೊಂಡಿರಲಿಲ್ಲ. ಒಂದುಕಡೆ ಅಧ್ಯಕ್ಷರಾಗಿ ಆಯ್ಕೆ ಎನ್ನುವ ಸುದ್ದಿ ಇನ್ನೊಂದು ಕಡೆ ಹೃದಯಾಘಾತದಿಂದ ಮರಣ ಎನ್ನುವ ಸುದ್ದಿ ಯಾವುದನ್ನು ನಂಬಬೇಕು ಯಾವುದನ್ನು ಬಿಡಬೇಕು ಎನ್ನುವ ಗೊಂದಲ ಸಾಕಷ್ಟು ಜನರನ್ನು ಕಾಡಿತಾದರೂ ಸಾವಿನ ಸುದ್ದಿ ಮಾತ್ರ ಸುಳ್ಳಾಗಲಿಲ್ಲ.
ಸೋಲರಿಯದ ಸರದಾರ ಸೋತಿದ್ದು ಸಾವಿಗೆ ಮಾತ್ರ
ಮುಗ್ವಾ ಗ್ರಾಮದ ಕೊಂಡೆಕೆರೆ ಮನೆತನದವರಾದ ಟಿ.ಎಸ್.ಹೆಗಡೆ ಅವರು ಸಾರ್ವಜನಿಕ ಜೀವನದಲ್ಲಿ ಸೋಲರಿಯದ ಸರದಾರ ಎಂದೇ ಖ್ಯಾತಿಯನ್ನು ಗಳಿಸಿದ್ದರು. ಅವರಿಗೆ ಈ ಗರಿಮೆ ಸುಮ್ಮನೆ ಸಿಕ್ಕಿರಲಿಲ್ಲ. ಗ್ರಾಮಪಂಚಾಯತ್, ವಿ.ಎಸ್.ಎಸ್., ತಾಲೂಕಾ ಪಂಚಾಯತ, ಪಿ.ಎಲ್ಡಿಬ್ಯಾಂಕ್, ಎ.ಪಿ.ಎಂ.ಸಿ, ಟಿ.ಎ.ಪಿ.ಸಿ.ಎಂ.ಎಸ್ ಹೀಗೆ ಯಾವುದೇ ಚುನಾವಣೆಯಲ್ಲಿ ತಿಮ್ಮಣ್ಣ ಹೆಗಡೆ ಸ್ಪರ್ದಿಸಿದ್ದಾರೆಂದರೆ ಎದುರಾಳಿ ಎಷ್ಟೇ ಪ್ರಬಲರಾಗಿರಲಿ ಚುನಾವಣೆ ಎಷ್ಟೇ ಜಿದ್ದಾ ಜಿದ್ದಿನಿಂದ ಕೂಡಿರಲಿ ಕೊನೆಯಲ್ಲಿ ವಿಜಯದ ಮಾಲೆ ಮಾತ್ರ ತಿಮ್ಮಣ್ಣ ಅವರ ಕೊರಳಿಗೆ ಎನ್ನುವುದು ಇತ್ತೀಚಿನ ಮಾರ್ಕೆಟಿಂಗ್ ಸೊಸೈಟಿ ಚುನಾವಣೆಯ ವರೆಗೂ ಸಾಬೀತಾಗುತ್ತಲೇ ಬಂದಿರುವುದು ಅವರ ಸಾಮಥ್ರ್ಯಕ್ಕೆ ಹಿಡಿದ ಕನ್ನಡಿ.
ಟಿ.ಎಸ್.ಹೆಗಡೆ ಅವರ ಈ ಗೆಲವಿನ ಜೈತ್ರಯಾತ್ರೆಗೆ ಬಹಳ ಕಾಲದಿಂದ ತನ್ನ ಸಹಾಯದ ಹಸ್ತವನ್ನು ಚಾಚುತ್ತಾ ಬಂದಿದ್ದ ಕುಮಟಾ ಶಾಸಕರಾಗಿರುವ ದಿನಕರ ಶೆಟ್ಟಿ ಅವರು ಕವಲಕ್ಕಿಯ ಪೆಟ್ರೋಲ್ ಪಂಪ್ ಉದ್ಘಾಟನಾ ಸಮಾರಂಭದಲ್ಲಿ “ಟಿ.ಎಸ್.ಹೆಗಡೆ ಅವರೇ ನೀವು ಇದುವರೆಗೂ ನಿಂತ ಎಲ್ಲಾ ಚುನಾವಣೆಯಲ್ಲಿಯೂ ಗೆಲುವನ್ನು ಕಾಣುತ್ತಾ ಬಂದಿದ್ದೀರಿ. ಮುಂದೆ ಎಂ.ಎಲ್.ಎ ಚುನಾವಣೆಗೆ ನಿಲ್ಲುವ ಮನಸ್ಸೇನಾದರೂ ಇದ್ರೆ ಹೇಳ್ಬಿಡಿ ನಾನು ಮತ್ತೆ ನಿಲ್ಲುವುದಿಲ್ಲ ಎಂದು ಸಲುಗೆಯಿಂದ ಕಿಚಾಯಿಸಿದ್ದರು.”
ಸಾರ್ವಜನಿಕ ಬದುಕು
ಪಿ.ಜಿಭಟ್ಟ ಅಗ್ನಿ ಅವರೊಂದಿಗೆ ಸಹಕಾರಿ ಸಂಘದ ಚುನಾವಣೆಗಳನ್ನು ಎದುರಿಸಿ ಅವರಿಂದಲೇ ಹಲವು ಪಟ್ಟುಗಳನ್ನು ಕಲಿತಿದ್ದ ಟಿ.ಎಸ್.ಹೆಗಡೆ ಅವರು ಜೆ.ಡಿ.ಎಸ್, ಬಿಜೆಪಿ ಮುಂತಾದ ರಾಜಕೀಯ ಪಕ್ಷಗಳ ಜೊತೆ ಗುರುತಿಸಿಕೊಂಡಿದ್ದರಾದರೂ ಅದು ದಿನಕರ ಶೆಟ್ಟಿ ಅವರ ದೆಸೆಯಿಂದ ಎನ್ನುವ ಮಾತಿದೆ. ದಿನಕರ ಶೆಟ್ಟಿ ಅವರು ಯಾವ ಪಕ್ಷದಲ್ಲಿದ್ದಾರೋ ಅಲ್ಲಿ ಟಿ.ಎಸ್.ಹೆಗಡೆ ಇರುತ್ತಿದ್ದರು. ಮುಗ್ವಾ ಗ್ರಾಮಪಂಚಾಯತ ಅಧ್ಯಕ್ಷರಾಗಿ, ವಿ.ಎಸ್.ಎಸ್ ಅಧ್ಯಕ್ಷರಾಗಿ, ತಾಲೂಕಾ ಪಂಚಾಯತ ಸದಸ್ಯರಾಗಿ, ಪಿ.ಎಲ್ಡಿ ಬ್ಯಾಂಕ್ , ಎ.ಪಿ.ಎಂ.ಸಿ, ಟಿ.ಎ.ಪಿ.ಸಿ.ಎಂ.ಎಸ್ ನಿರ್ದೇಶಕರಾಗಿ ಬರೀ ಗೆಲುವಿನ ಸವಿಯನ್ನೇ ಉಂಡಿದ್ದ ಇವರನ್ನು ಆಕ್ಸಿಡೆಂಟ್, ಡಯಾಬಿಟೀಸ್, ರಕ್ತದೊತ್ತಡ ಖಾಯಿಲೆಗಳು ದೈಹಿಕವಾಗಿ ದುರ್ಬಲವಾಗಲು ಕಾರಣವಾದವು ಎನ್ನುವ ಮಾತಿದೆ.
ಕೊರೊನಾ ಗೆದ್ದರೂ ಹೃದಯಾಘಾತ ಸೋಲಿಸಿಬಿಟ್ಟಿತು
ಅಕ್ಟೋಬರ್ 19 ಕ್ಕೆ ಟಿ.ಎ.ಪಿ.ಸಿ.ಎಂ.ಎಸ್ ಚುನಾವಣೆ ಗೆದ್ದ ಖುಷಿಯಲ್ಲಿಯೇ ಆರೋಗ್ಯದಲ್ಲಿ ಸಣ್ಣಮಟ್ಟಿನ ಏರುಪೇರು ಕಾಣಿಸಿಕೊಂಡು ತಪಾಸಣೆಗೆ ಮುಂದಾದಾಗ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಒಂದು ವಾರ ಚಿಕಿತ್ಸೆ ಪಡೆದ ಸೋಮವಾರ ಸಂಜೆ ಮನೆಗೆ ವಾಪಸ್ಸಾಗಿದ್ದವರು ಮಾರನೇ ದಿನ ಮಂಗಳವಾರ ಟಿ.ಎ.ಪಿ.ಸಿ.ಎಂ.ಎಸ್ ಆಡಳಿತಮಂಡಳಿ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಭಾಗಿಯಾಗಿದ್ದರು. ಮಾತ್ರವಲ್ಲ ಅವಿರೋಧವಾಗಿ ಅಧ್ಯಕ್ಷರಾಗಿಯೂ ಆಯ್ಕೆಯಾಗಿದ್ದರು. ಅಧ್ಯಕ್ಷರಾದ ಸಂಭ್ರಮದಲ್ಲಿ ಮನೆಗೆ ಹೋದವರಿಗೆ ಮತ್ತೆ ಆರೋಗ್ಯದಲ್ಲಿ ಏರುಪೇರಾಗಿ ತಕ್ಷಣ ತಾಲೂಕಾಸ್ಪತ್ರೆಗೆ ಕರೆತಂದು ಅಲ್ಲಿಂದ ಮಂಗಳೂರಿಗೆ ಸಾಗಿಸಲು ಮುಂದಾದರೂ ಮಾರ್ಗಮದ್ಯೆ ಮಂಕಿ ಬಳಿಯೇ ಕೊನೆಯುಸಿರೆಳೆದರು ಎನ್ನಲಾಗಿದೆ. ಅಲ್ಲಿಗೆ ಪ್ರತೀ ಬಾರಿಯೂ ಸೋಲನ್ನೇ ಸೋಲಿಸಿ ಗೆಲುವಿಗೆ ಮುತ್ತಿಡುತ್ತಾ ಬಂದಿದ್ದ ಹಠವಾದಿಯ ಬದುಕು ಕೊನೆಯಾಗಿತ್ತು.
ಮೃತರು ಮಡದಿ ಸುಜಾತಾ ಹೆಗಡೆ, ಮಕ್ಕಳಾದ ಕುಮಾರಿ ಕೃತಿಕಾ ಹೆಗಡೆ, ಕುಮಾರಿ ಕವನಾ ಹೆಗಡೆ ಹಾಗೂ ಅಪಾರ ಬಂಧು ಬಳಗ ಹಿತೈಷಿಗಳನ್ನು ಅಭಿಮಾನಿಗಳನ್ನು ಅಗಲಿದ್ದಾರೆ
ಟಿ.ಎಸ್.ಹೆಗಡೆ ಅವರನ್ನು ಕಳೆದುಕೊಂಡಿರುವುದು ನನ್ನ ಪಾಲಿಗೆ ತುಂಬಲಾರದ ನಷ್ಟ. ಅಜಾತಶತ್ರುವಿನಂತೆ ಬದುಕಿದ್ದ ಅವರು ಪ್ರತಿಯೊಂದು ಚುನಾವಣೆಯಲ್ಲಿಯೂ ಜನರನ್ನು ವಿಶ್ವಾಸಕ್ಕೆ ಪಡೆದು ನನ್ನ ಪರವಾಗಿ ಕೆಲಸ ಮಾಡುತ್ತಿದ್ದರು. ಒಬ್ಬ ಆತ್ಮೀಯ ಸ್ನೇಹಿತನನ್ನು, ಮಾರ್ಗದರ್ಶನ ಮಾಡಬಲ್ಲ ಗುರುವನ್ನು ಕಳೆದುಕೊಂಡ ಅನುಭವವಾಗುತ್ತಿದೆ. ಅವರನ್ನು ಕಳೆದಕೊಂಡ ಕುಟುಂಬ ನೋವಿನಿಂದ ಹೊರಬರುವಂತಾಗಲಿ ಎಂದು ಭಗವಂತನಲ್ಲಿ ಬೇಡಿಕೊಳ್ಳುತ್ತೇನೆ – ದಿನಕರ ಶೆಟ್ಟಿ, ಶಾಸಕರು ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರ
Leave a Comment