ಮುಖ್ಯಾಂಶಗಳು
ಇಕೋ ಸ್ಮಾರ್ಟ ವಿಲೇಜ್ ಪ್ರಾಜೆಕ್ಟಲ್ಲಿ ಸಿಲೆಕ್ಟ್ ಆದ ರಾಜ್ಯ ಏಕೈಕ ಕಡಲತೀರ ಅಪ್ಸರಕೊಂಡ (ರಾಷ್ಟ್ರದಲ್ಲಿ ಮೂರನೇಯದು)
ಸಿ.ಆರ್.ಜೆಡ್ ನಿಯಮಾವಳಿಗೆ ಅನುಗುಣವಾಗಿಯೇ ಪರಿಸರ ಸ್ನೇಹಿಯಾಗಿ ಅಭಿವೃದ್ಧಿ
8-10 ಕೋಟಿ ಕೇಂದ್ರ ಸರ್ಕಾರದ ಆರ್ಥಿಕ ನೆರವು
ಪ್ರವಾಸೋದ್ಯಮ, ಉದ್ಯೋಗ ಸೃಷ್ಟಿ, ಸ್ಥಳಿಯರಿಗೆ ಕೌಶಲ್ಯಾಭಿವೃದ್ಧಿಗೆ ಪೂರಕ
ಮೀನುಗಾರಿಕೆ ಮತ್ತು ಮೀನಿನ ಸಂಸ್ಕರಣೆ ಹಾಗೂ ಉತ್ಪನ್ನಗಳ ತಯಾರಿಕಗೆ ಉತ್ತೇಜನ ಸಿಗಲಿದೆ
ಹೊನ್ನಾವರ – ಕೋಸ್ಟಲ್ ಮ್ಯಾನೇಜ್‍ಮೆಂಟ್ ಜೋನ್ ಅಡಿಯಲ್ಲಿ ಮಾಲಿನ್ಯ ಮುಕ್ತ ಹಸಿರು ಗ್ರಾಮವಾಗಿಸುವ ಕೇಂದ್ರಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ತಾಲೂಕಿನ ಅಪ್ಸರಕೊಂಡ ಆಯ್ಕೆಯಾಗಿದೆ.

ಎನ್.ಸಿ.ಎಸ್.ಸಿ.ಎಮ್ (ನ್ಯಾಶನಲ್ ಸೆಂಟರ್ ಪಾರ್ ಸಸ್ಟೈನೇಬಲ್ ಕೋಸ್ಟಲ್ ಮ್ಯಾನೇಜ್ಮೆಂಟ್)ನ ವಿಜ್ಞಾನಿಗಳ ತಂಡ ಸಿ.ಆರ್.ಜೆಡ್ ವ್ಯಾಪ್ತಿಗೊಳಪಟ್ಟ ದೇಶದ ಕಡಲತೀರಗಳನ್ನೆಲ್ಲಾ ಅಧ್ಯಯನ ಮಾಡಿ ಓರಿಸ್ಸಾ, ಗುಜರಾತ ಮತ್ತು ಕರ್ನಾಟಕದ ಅಪ್ಸರಕೊಂಡವನ್ನು ಸ್ವಚ್ಛ ಹಸಿರು ಗ್ರಾಮವನ್ನಾಗಿ ಅಭಿವೃದ್ಧಿಪಡಿಸಲು ಯೋಗ್ಯವಾದ ಸ್ಥಳವೆಂದು ಆಯ್ಕೆ ಮಾಡಿದ್ದಾರೆ.
ಸಿ.ಆರ್.ಜೆಡ್ ನಿಯಮಗಳಿಗೆ ದಕ್ಕೆಯಾಗದಂತೆ ಅಲ್ಲಿನ ನೈಸರ್ಗಿಕ ಪರಿಸರವನ್ನು ಕಾಪಾಡಿಕೊಂಡು ಉದ್ಯೋಗ, ಕೃಷಿ ಮೀನುಗಾರಿಕೆಗೆ ಸಂಬಂಧಿಸಿದಂತೆ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಈ ಪ್ರದೇಶದಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 8 -10 ಕೋಟಿ ಅನುದಾನವನ್ನು ಒದಗಿಸಲಿದೆ. ಕಾಸರಕೋಡ ಬೀಚ್ ಬ್ಲ್ಯೂ ಪ್ಲ್ಯಾಗ್ ಸರ್ಟಿಫಿಕೇಟ್ ಪಡೆದು ಅಂತರಾಷ್ಟ್ರೀಯ ಗುಣಮಟ್ಟದ ಬೀಚ್ ಎನ್ನುವ ಹೆಗ್ಗಳಿಕೆಯನ್ನು ಪಡಕೊಂಡ ಬೆನ್ನಲ್ಲಿಯೇ ಕಾಸರಕೋಡ ಬೀಚ್‍ನ ಮುಂದುವರಿದ ಭಾಗವಾಗಿರುವ ಅಪ್ಸರಕೊಂಡವೂ ಇಕೋ ಸ್ಮಾರ್ಟ ವಿಲೇಜ್ ಆಗಿ ಆಯ್ಕೆಯಾಗಿರುವುದು ವಿಶೇಷವಾಗಿದೆ.

ಆಯ್ಕೆಗೆ ಕಾರಣವಾದ ಸಂಗತಿಗಳು
ಕಾಸರಕೋಡ ಹಾಗೂ ಅಪ್ಸರಕೊಂಡ ದೇಶದಲ್ಲಿಯೇ ಅತ್ಯಂತ ಶುಭ್ರವಾದ ನೀರನ್ನು ಹೊಂದಿರುವ ಕಡಲತೀರವಾಗಿದೆ. ಗಾಳಿಯ ಬೀಸುವಿಕೆ, ಸಮುದ್ರದ ಅಲೆಯ ಏರಿಳಿತ, ಬೀಚ್ ಪಕ್ಕದಲ್ಲಿ ಗುಡ್ಡ, ಕಾಡು, ಜಲಪಾತ, ಸಿಹಿನೀರಿನ ಹಳ್ಳ, ದೇವಾಲಯ, ಕೃಷಿಭೂಮಿ ಎಲ್ಲವೂ ಒಂದೇ ಕಡೆ ಸಮ್ಮಿಳಿತವಾಗಿರುವ ಮತ್ತು ಸಿ.ಆರ್.ಜೆಡ್ ನಿಯಮಗಳಿಗೆ ವಿರುದ್ಧವಾದ ಯಾವುದೇ ಬೃಹತ್ ಕಟ್ಟಗಳು, ಕಡಲ ತೀರದ ಸಹಜತೆಗೆ ದಕ್ಕೆಯುಂಟುಮಾಡುವಂತ ಬೆಳವಣಿಗೆ ಈ ಭಾಗದಲ್ಲಿ ಆಗಿಲ್ಲದಿರುವುದು ದೇಶದಲ್ಲಿ ನೂರಾರು ಕಡಲತೀರಗಳಿದ್ದರೂ ಅಪ್ಸರಕೊಂಡವನ್ನೇ ಏಕೆ ಇಕೋ ಸ್ಮಾರ್ಟ ವಿಲೇಜ್ ಆಗಿ ಆಯ್ಕೆ ಆಯ್ಕೆಮಾಡಿಕೊಂಡರು ಎನ್ನುವ ಪ್ರಶ್ನೆಗೆ ಉತ್ತರ ಎನ್ನುತ್ತಾರೆ ಕಡಲ ವಿಜ್ಞಾನಿ ಡಾ.ಪ್ರಕಾಶ ಮೇಸ್ತ.


ಯಾವ ಪ್ರಯೋಜನ
ಈಗಾಗಲೇ ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿರುವ ಅಪ್ಸರಕೊಂಡ ಇಕೋ ಸ್ಮಾರ್ಟ ವಿಲೇಜ್ ಆಗಿ ಬದಲಾದರೆ ಸಮುದ್ರ ತೀರದಲ್ಲಿ ಶೌಚಾಲಯ, ಕುಡಿಯುವ ನೀರಿನ ಸೌಲಭ್ಯ, ಸೋಲಾರ್ ದೀಪ ಅಳವಡಿಸುವ ಜೊತೆಗೆ ಈ ಪ್ರದೇಶದಲ್ಲಿನ ಕೃಷಿ, ಕೃಷಿ ಪೂರಕ ಚಟುವಟಿಕೆಗಳು, ಮೀನುಗಾರಿಕೆ, ಮೀನಿನ ಉತ್ಪನ್ನಗಳ ತಯಾರಿಕೆ, ನಾರುದ್ಯಮದಲ್ಲಿ ಈ ಭಾಗದ ಜನರು ತೊಡಗಿಸಿಕೊಳ್ಳಲು ಸೂಕ್ತ ತರಬೇತಿಯನ್ನು ನೀಡಿ ಅವಕಾಶಗಳನ್ನು ಸೃಷ್ಟಿಸಿಕೊಡಲಾಗುತ್ತದೆ. ವೈಜ್ಞಾನಿಕವಾಗಿ ತ್ಯಾಜ್ಯಗಳನ್ನು ನಿರ್ವಹಣೆಮಾಡಿ ಪರಿಸರವನ್ನು ಸ್ವಚ್ಛವಾಗಿಡುವ ಜೊತೆಗೆ ಸಾವಯ ಕೃಷಿಗೆ ಪ್ರೋತ್ಸಾಹ ನೀಡಿ ಇಲ್ಲಿನ ಉತ್ಪನ್ನಗಳ ಗುಣಮಟ್ಟವನ್ನು ಹೆಚ್ಚಿಸಿ ಅಂತರಾಷ್ಟ್ರೀಯ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ. ವಿಶ್ವಮಟ್ಟದಲ್ಲಿ ಅಪ್ಸರಕೊಂಡ ಗುರುತಿಸಿಕೊಳ್ಳುವ ಜೊತೆಗೆ ಇಲ್ಲಿನ ಉತ್ಪನ್ನಗಳಿಗೂ ಅಂತರಾಷ್ಟ್ರೀಯ ಮಾರುಕಟ್ಟೆಯ ಅವಕಾಶಗಳು ತೆರೆದುಕೊಂಡು ಸ್ಥಳೀಯರಿಗೆ ಆರ್ಥಿಕ ಬಲ ನೀಡುತ್ತದೆ.
ಕಡಲ ತೀರವನ್ನು ಸಾಂಪ್ರದಾಯಿಕವಾಗಿ ಉಪಯೋಗಿಸುತ್ತಿರುವವರಿಗೆ ಯಾವುದೇ ತೊಂದರೆಯಾಗದಂತೆ ಸಿ.ಆರ್.ಜೆಡ್ ನಿಯಮಗಳಿಗೂ ದಕ್ಕೆಯಾಗದಂತೆ ಪರಿಸರ ಪೂರಕವಾಗಿ ಯಾವರೀತಿ ಕಡಲತೀರವನ್ನು ಅಭಿವೃದ್ಧಿಪಡಿಸಬಹುದು ಎನ್ನುವುದಕ್ಕೆ ಮಾದರಿಯಾಗಿಸಲು ಅಪ್ಸರಕೊಂಡವನ್ನು ಆಯ್ಕೆಮಾಡಿಕೊಂಡಿದ್ದು ಪ್ರವಾಸೋದ್ಯಮ ಅಭಿವೃದ್ಧಿಯ ಜೊತೆ ಸ್ಥಳೀಯರ ನಿರುದ್ಯೋಗ ಸಮಸ್ಯೆಗೂ ಉತ್ತರ ಕಂಡುಕೊಳ್ಳುವಲ್ಲಿ ಯೋಜನೆ ನೆರವಾಗಲಿದೆ ಎನ್ನಲಾಗುತ್ತಿದೆ.
[ಹಲವು ವೈವಿದ್ಯತೆಗಳ ಸಂಗಮವಾಗಿರುವ ಅಪ್ಸರಕೊಂಡದಂತ ಕಡಲತೀರ ದೇಶದಲ್ಲಿಯೇ ಎಲ್ಲಿಯೂ ಇಲ್ಲ ಎಂದು ಎನ್.ಸಿ.ಎಸ್.ಸಿ.ಎಮ್.ನ ಅದ್ಯಯನ ತಂಡದ ಸದಸ್ಯರೇ ಅಭಿಪ್ರಾಯಪಟ್ಟಿದ್ದಾರೆ. ಇಕೋ ಸ್ಮಾರ್ಟ ವಿಲೇಜ್ ಆಗಿ ಅಪ್ಸರಕೊಂಡ ಬದಲಾದರೆ ಖಂಡಿತ ಈ ಭಾಗದ ರೈತರಿಗೆ, ಮೀನುಗಾರರಿಗೆ ಸಾಕಷ್ಟು ಪ್ರಯೋಜನವಾಗಲಿದೆ. ಅಂತರಾಷ್ಟ್ರೀಯ ಗುಣಮಟ್ಟ ಹೊಂದುವ ಅರ್ಹತೆಯಿರುವ ಬಹಳಷ್ಟು ತಾಣಗಳು ಜಿಲ್ಲೆಯಲ್ಲಿದೆ ಒಂದೊಂದಾಗಿ ಬೆಳಕಿಗೆ ಬರುತ್ತಿರುವುದು ಖುಷಿಯ ವಿಚಾರ – ಡಾ.ಪ್ರಕಾಶ ಮೇಸ್ತ, ಮರೈನ್ ಬಯೋಲಾಜಿಸ್ಟ್]
Leave a Comment