ಹೊನ್ನಾವರ – ಜೀವನದಲ್ಲಿ ಮೊದಲಬಾರಿಗೆ ಚುನಾವಣಾ ರಾಜಕೀಯಕ್ಕೆ ಎಂಟ್ರಿ ಕೊಟ್ಟು ಪ್ರಥಮ ಯತ್ನದಲ್ಲಿಯೇ ದಾಖಲೆಯ 202 ಮತಗಳ ಅಂತರದಲ್ಲಿ ಗೆಲುವಿನ ನಗುಬೀರಿದ್ದ ಶಿವರಾಜ ಮೇಸ್ತ ಇದೀಗ ಮೀನುಗಾರ ಸಮುದಾಯಕ್ಕೆ ಇದುವರೆಗೂ ಮರೀಚಿಕೆಯಾಗಿದ್ದ ಪಟ್ಟಣಪಂಚಾಯತ ಅಧ್ಯಕ್ಷ ಗಾದಿಯನ್ನೂ ಎರುವ ಮೂಲಕ ಹೊಸ ದಾಖಲೆಬರೆದಿದ್ದಾರೆ.

ನಗರದೇವತೆ ಶ್ರೀ ದಂಡಿನ ದುರ್ಗಾದೇವಿ ದೇವಾಲಯದ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ, ಕೊಂಕಣಿ ಖಾರ್ವಿ ಸಮಾಜದ ಕೆಳಗಿನ ಪಾಳ್ಯದ ಘಟಕಾಧ್ಯಕ್ಷರಾಗಿ, ತಾಲೂಕಾ ರಿಕ್ಷಾ ಯೂನಿಯನ್ ಅಧ್ಯಕ್ಷರಾಗಿ, ಮದ್ಯವರ್ಜನ ಶಿಬಿರದ ಜಿಲ್ಲಾ ಸದಸ್ಯರಾಗಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಜನಸಾಮಾನ್ಯರ ಪಾಲಿಗೆ ಚಿರಪರಿಚಿತರಾಗಿದ್ದ ಇವರು ಹಲವು ಹಿಂದೂಪರ ಸಂಘಟನೆಗಳಲ್ಲಿಯೂ ಸಕ್ರೀಯವಾಗಿ ತೊಡಗಿಸಿಕೊಂಡಿದ್ದವರು. ರಾಜಕೀಯದಿಂದ ದೂರವೇ ಇದ್ದ ಶಿವರಾಜ ಅವರನ್ನು ಪಟ್ಟಣದ ಜನರೇ ಒತ್ತಾಯ ಮಾಡಿ ಚುನಾವಣಾ ಕಣಕ್ಕೆ ದುಮುಕುವಂತೆ ಮಾಡಿದರು ಎನ್ನುವುದನ್ನು ಈ ಸಂದರ್ಭದಲ್ಲಿ ನೆನಪುಮಾಡಿಕೊಳ್ಳುತ್ತಾರೆ.
ಎಲ್ಲೋ ಅಲ್ಲೊಂದು ಇಲ್ಲೊಂದು ಅಪರೂಪದ ಪ್ರಕರಣಗಳನ್ನು ಹೊರತುಪಡಿಸಿದರೆ ಇಂದು ಹಣಬಲ ತೋಳ್ಬಲ, ಜಾತಿ, ಧರ್ಮ ಮುಂತಾದ ವಿಷಯಗಳೇ ಚುನಾವಣಾ ಫಲಿತಾಂಶವನ್ನು ನಿರ್ಧರಿಸುವಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತವೆ ಎನ್ನುವುದು ಗುಟ್ಟಾಗಿಯೇನೂ ಉಳಿದಿಲ್ಲ. ಆಶ್ಚರ್ಯಕರ ಸಂಗತಿ ಎಂದರೆ ಹೊನ್ನಾವರದಲ್ಲಿ ಪರೇಶ ಮೇಸ್ತ ಸಾವಿನ ಘಟನೆಯ ನಂತರ ಹಿಂದೂ ಮತ್ತು ಮುಸ್ಲಿಂ ಸಮುದಾಯದ ನಡುವೆ ಅಪನಂಬಿಕೆ ಹಾಗೂ ದ್ವೇಷದಿಂದ ಕೂಡಿದ ದೊಡ್ಡದೊಂದು ಕಂದಕವೇ ಏರ್ಪಟ್ಟಿದೆ ಎಂದು ಹೊರ ಜಗತ್ತಿಗೆ ಬಿಂಬಿಸಲಾಯಿತು. ಆದರೆ ಪಟ್ಟಣ ಪಂಚಾಯುತ ಚುನಾವಣೆಯಲ್ಲಿ ಶಿವರಾಜ ಮೇಸ್ತ ಬಿಜೆಪಿಯಿಂದ ಸ್ಪರ್ದಿಸಿದ ವಾರ್ಡನಲ್ಲಿ ಬಹುಸಂಖ್ಯಾತರು ಮುಸ್ಲಿಂರೇ ಆಗಿದ್ದರೂ ಅವರು ಶಿವರಾಜ ಮೇಸ್ತ ಅವರನ್ನು ಅಭೂತಪೂರ್ವವಾಗಿ ಬೆಂಬಲಿಸಿದ್ದಾರೆನ್ನುವುದಕ್ಕೆ ಫಲಿತಾಂಶವೇ ಸಾಕ್ಷಿಯಾಯಿತು. ಅಲ್ಲಿಗೆ ಈ ನೆಲದಲ್ಲಿ ಸಾಮರಸ್ಯ ಇನ್ನೂ ಉಳಿದಿದೆ ಎನ್ನುವುದನ್ನು ಸಾಭೀತುಪಡಿಸುವಲ್ಲಿ ಮತ್ತು ಶಿವರಾಜ ಮೇಸ್ತ ಅವರಂತವರ ಸಮಾಜಮುಖಿ ವ್ಯಕ್ತಿತ್ವವನ್ನು ಎಲ್ಲರೂ ಒಪ್ಪುತ್ತಾರೆನ್ನುವುದಕ್ಕೂ ಚುನಾವಣೆ ಸಾಕ್ಷಿಯಾಯಿತು.
ಸವಾಲುಗಳಿಗೆ ಎದೆಗುಂದದ ಗಟ್ಟಿಗ ಈ ಶಿವರಾಜ
ಎದುರಿಗಿದ್ದವರ ಮುಖ ನೋಡದೇ ಕಂಡಿದ್ದನ್ನು ಕಂಡಹಾಗೇ ಹೇಳುವ ಗಟ್ಟಿ ಆಸಾಮಿ ಶಿವರಾಜ ಮೇಸ್ತ ಎನ್ನುವುದು ಅವರನ್ನು ಹತ್ತಿರದಿಂದ ಬಲ್ಲವರೆಲ್ಲರ ಅನುಭವದ ಮಾತು. ಅವರ ಈ ದಿಟ್ಟ ನಿಲುವೇ ಅವರನ್ನು ಅಧ್ಯಕ್ಷರ ಸ್ಥಾನದವರೆಗೂ ಕರೆದುಕೊಂಡು ಬಂದಿತು ಮತ್ತು ಸುಲಭವಾಗಿ ದಕ್ಕಬೇಕಿದ್ದ ಅಧ್ಯಕ್ಷ ಹುದ್ದೆಯ ಪಡೆಯುವ ಮಾರ್ಗವನ್ನು ಕಠಿಣವಾಗಿಸಿತು ಎನ್ನುವ ಎರಡೂ ವಿಚಾರಗಳು ಕೇಳಿಬರುತ್ತಿದೆ. ಮೀಸಲಾತಿ ಹಿಂದುಳಿದ ಸಮಾಜದ ಪರವಾಗಿ ಬಂದಾಗ ಬಿಜೆಪಿಯ ಕಟ್ಟಾ ಬೆಂಬಲಿಗರಾದ ಮೀನುಗಾರ ಸಮಾಜಕ್ಕೆ ಈ ಬಾರಿ ಪಟ್ಟಕಟ್ಟುವುದು ಪಕ್ಕಾ, ಶಿವರಾಜ ಮೇಸ್ತ ಸುಲಭವಾಗಿ ಅಧ್ಯಕ್ಷರಾಗುತ್ತಾರೆ ಎಂದುಕೊಂಡಿದ್ದರೂ ಈ ಹಾದಿ ಸುಲಭವೇನೂ ಆಗಿರಲಿಲ್ಲ. ಅದಕ್ಕೆ ಕಾರಣ ಶಿವರಾಜ ಮೇಸ್ತ ರಬ್ಬರ್ ಸ್ಟಾಂಪ್ ಅಧ್ಯಕ್ಷ ಆಗಿರುವುದಿಲ್ಲ. ಸಂದರ್ಭ ಬಂದರೆ ಎಂತವರನ್ನೂ ಎದುರು ಹಾಕಿಕೊಳ್ಳುತ್ತಾರೆ ಎನ್ನುವುದೇ ಆಗಿತ್ತು. ಹಾಗಾಗಿ ಅಂಕುಶದಲ್ಲಿಟ್ಟುಕೊಳ್ಳುವುದು ಕಷ್ಟ ಎನ್ನುವ ಹಿನ್ನಲೆಯಲ್ಲಿಯೇ ಅಧಿಕಾರ ತಪ್ಪಿಸುವ ವ್ಯರ್ಥ ಪ್ರಯತ್ನ ನಡೆಯಿತು ಎನ್ನುವುದನ್ನು ಅವರೂ ಒಪ್ಪುತ್ತಾರೆ.
ಇದು ಮೊದಲ ಹೆಜ್ಜೆ ಮುಂದಿನದ ಸವಾಲಿನ ಪಯಣ
ಹಿಂದುಳಿದ ಸಮಾಜದಿಂದ ಬಂದ ಶಿವರಾಜ ಮೇಸ್ತ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರೂ ಅವರ ಮುಂದಿನ ಹಾದಿ ಸುಗಮವಾಗಿಯೇನೂ ಇಲ್ಲ. ಪಟ್ಟಣದಾಧ್ಯಂತ ಒಳಚರಂಡಿ ಕಾಮಗಾರಿಗಾಗಿ ಅಗೆದ ರಸ್ತೆಗಳು ಉಂಟುಮಾಡುತ್ತಿರುವ ತೊಂದರೆ ಒಂದೆರಡಲ್ಲ. ಇದುವರೆಗೆ ಅಧಿಕಾರಿಗಳಮೇಲೆ ಹೋಗುತ್ತಿದ್ದ ಜನರ ಆಕ್ರೋಶ ಸಹಜವಾಗಿಯೇ ಅಧ್ಯಕ್ಷರಮೇಲೆ ತಿರುಗುತ್ತದೆ. ನಿತ್ಯ ನೂರಾರು ಸಮಸ್ಯೆಗಳನ್ನು ಹೊತ್ತು ಕಛೇರಿಗೆ ಎಡತಾಕುವ ಜನಸಾಮಾನ್ಯರ ಕೆಲಸ ಸಲೀಸಾಗಿ ಆಗುವುದೇ ಇಲ್ಲ ಎನ್ನುವ ದೂರಿದೆ ಈ ಬಗ್ಗೆ ಗಮನಹರಿಸಿ ಕಛೇರಿಯನ್ನು ಜನಸ್ನೇಹಿಯಾಗಿಸಬೇಕಾದ ಹೊಣೆಯಿದೆ.
ಪಟ್ಟಣ ವ್ಯಾಪ್ತಿಯಲ್ಲಿ ಪಾರ್ಕಿಂಗ್ ಸಮಸ್ಯೆ, ದುರಸ್ಥಿ ಕಾಣದ ಬೀದಿ ದೀಪ, ಹಾಳಾದ ಸಿ.ಸಿ.ಟಿ.ವಿ, ನಗರ ನೈರ್ಮಲ್ಯಕ್ಕೆ ಸವಾಲಾಗಿರುವ ಶೌಚಾಲಯಗಳು, ಬರುವ ಬೇಸಿಗೆಯ ದಿನಗಳಲ್ಲಿ ಕಾಣಿಸಕೊಳ್ಳಬಹುದಾದ ನೀರಿನ ಬರ, ಕ್ಷೇತ್ರವಾರು ಅನುದಾನ ಹಂಚಿಕೆ ಸೇರಿದಂತೆ ಹತ್ತು ಹಲವು ಸಮಸ್ಯೆಗಳಿವೆ. ಸಂಸದರು, ಉಸ್ತುವಾರಿ ಸಚಿವರು, ಉಭಯ ಶಾಸಕರುಗಳ ಸಹಕಾರವನ್ನು ಪಡೆದು 15 ತಿಂಗಳ ಅವಧಿಯಲ್ಲಿ ಎಷ್ಟರಮಟ್ಟಿಗೆ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸುತ್ತಾರೆನ್ನುವಲ್ಲಿ ಅಧ್ಯಕ್ಷರ ಯಶಸ್ಸು ಅಡಗಿದೆ.
[ನಮ್ಮ ಜನಪ್ರೀಯ ಶಾಸಕರಾದ ದಿನಕರ ಶೆಟ್ಟಿ ಅವರು ಪಟ್ಟಣದ ರಸ್ತೆಗಳ ದುರಸ್ಥಿಗೆ 5 ಕೋಟಿ ಅನುದಾನ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. ಜನಸಮಾನ್ಯರ ಕೆಲಸ ಕಾರ್ಯಗಳು ವಿಳಂಬವಾಗುತ್ತಿದೆ ಎನ್ನುವ ಮಾತಿದೆ. ಈ ಬಗ್ಗೆ ಹೆಚ್ಚಿನ ಒತ್ತು ಕೊಟ್ಟು ಪಟ್ಟಣಪಂಚಾಯತನ್ನು ಜನಸ್ನೇಹಿಯಾಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ – ಶಿವರಾಜ ಮೇಸ್ತ, ನೂತನ ಅಧ್ಯಕ್ಷರು ಪಟ್ಟಣಪಂಚಾಯತ ಹೊನ್ನಾವರ.
Leave a Comment