ಕತ್ತಲೆಯ ಜಗತ್ತು ಯಾವತ್ತೂ ಅಪರಾಧ ಪ್ರಪಂಚಕ್ಕೆ ಅನುಕೂಲ ಎನ್ನುವ ಮಾತಿದೆ. ಈಲ್ಲೆಯಲ್ಲಿ ಹೆದ್ದಾರಿಯಂಚಿನ ಅಂಗಡಿಗಳ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ಜೊತೆಗೆ ನಗರಗಳೂ ಕಳ್ಳರಿಂದ ಸುರಕ್ಷಿತವಲ್ಲ ಎನ್ನುವ ಭಾವನೆ ಜನರ ಮನಸಲ್ಲಿ ಮೂಡುತ್ತಿದೆ. ಪಟ್ಟಣದ ಕತ್ತಲೆ ಕಳೆದು ಅಪರಾಧ ಪ್ರಕರಣಗಳನ್ನು ನಿಯಂತ್ರಿಸಲು ತನ್ನದೇ ಆದ ನೆರವು ನೀಡುತ್ತಿದ್ದ ಬೀದಿದೀಪಗಳ ನಿರ್ವಹಣೆ ಬಗ್ಗೆ ಪಟ್ಟಣಪಂಚಾಯತಗೆ ಇನ್ನೂ ಹೆಚ್ಚಿನ ಆಸಕ್ತಿ ಮೂಡಿದಂತೆ ಕಾಣಿಸುತ್ತಿಲ್ಲ ಎನ್ನುವ ಆರೋಪ ನಗರದ ಅಂಗಡಿಕಾರರುಗಳಿಂದ ಕೇಳಿಬಂದಿದೆ.
ಬಸ್ಟ್ಯಾಂಡ್ ಪಕ್ಕದ ಹೈಮಾಸ್ಟ್ ದೀಪದ ಕಂಬದಲ್ಲಿ ಬಹಳದಿನಗಳಿಂದ ಕೇವಲ ಒಂದು ಬಲ್ಬ ಮಾತ್ರ ಉರಿಯುತ್ತಿದ್ದು ಒಕ್ಕಣ್ಣ ಶುಕ್ರಾಚಾರ್ಯನಂತೆ ಕಾಣಿಸುತ್ತಿದೆ. ಶೆಟ್ಟಿಕೆರೆ ಪಕ್ಕದಲ್ಲಿರುವ ಪಟ್ಟಣಪಂಚಾಯತಗೆ ಸೇರಿದ ವ್ಯಾಪಾರಿ ಮಳಿಗೆಯ ಮೀಟರ್ಗಳಿರುವ ಕೊಠಡಿ ಶಿಥಿಲವಾಗಿದ್ದು ಕನಿಷ್ಠ ಬಾಗಿಲು ವ್ಯವಸ್ಥೆಯೂ ಇಲ್ಲದೆ ಅವ್ಯವಸ್ಥೆಯ ಆಗರದಂತಾಗಿದೆ. ಬೀದಿ ದೀಪಗಳ ಟೆಂಡರ್ ಪಡೆದವರ ನಿಷ್ಕಾಳಜಿಯೋ ಅಥವಾ ಪಟ್ಟಣಪಂಚಾಯತನ ನಿರ್ಲಕ್ಷ್ಯವೋ ತಿಳಿಯುತ್ತಿಲ್ಲ ಕತ್ತಲೆಯಲ್ಲೂ ಕಣ್ಮುಚ್ಚಿರುವ ಬೀದಿ ದೀಪದ ಬಲ್ಬಗಳು ಇಲ್ಲಿನ ವ್ಯವಸ್ಥೆಯನ್ನು ಅಣಕಿಸುತ್ತಿರುವುದು ಮಾತ್ರ ನಿಜ. ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶಿವರಾಜ ಮೇಸ್ತ ಅವರ ನೇತೃತ್ವದ ಆಡಳಿತ ಮಂಡಳಿ ಈ ಬಗ್ಗೆ ಅಗತ್ಯ ಗಮನಹರಿಸಿ ಪಟ್ಟಣವ್ಯಾಪ್ತಿಯಲ್ಲಿ ಬೀದಿ ದೀಪ ಸಮಸ್ಯೆಯನ್ನು ಬಗೆಹರಿಸುತ್ತದೆಯಾ ಎನ್ನುವುದನ್ನು ಕಾದು ನೋಡಬೇಕಿದೆ.
Leave a Comment