“ಬಲಿಷ್ಠರು ಕಾನೂನು ರೂಪಿಸುತ್ತಾರೆ ಕಾನೂನು ದುರ್ಬಲರನ್ನು ತುಳಿಯುತ್ತದೆ” ಎನ್ನುವ ಕಾನೂನಿನ ವ್ಯಾಖ್ಯಾನವನ್ನು ನೆನಪಿಸಿಕೊಳ್ಳುವಂತಾಗಿದೆ ಶಾಸಕ ಸುನಿಲ್ ನಾಯ್ಕ ಅರಣ್ಯ ಇಲಾಖೆಯ ನೂತನ ಕಛೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾಸ್ಕ್ ಧರಿಸುವ ಬಗ್ಗೆ ನೀಡಿರುವ ಹೇಳಿಕೆ. ಬಿಡದೇ ಕಾಡುತ್ತಿರುವ ಕೊರೊನಾವನ್ನು ನಿಯಂತ್ರಿಸಲು ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯ ಎನ್ನುವುದನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಒತ್ತಿ ಒತ್ತಿ ಹೇಳುತ್ತಿವೆ. ಸರ್ಕಾರದ ನೀತಿ ನಿಯಮಗಳನ್ನು ಎಲ್ಲರೂ ಪಾಲಿಸುವಂತೆ ಮಾಡಲು ನಿಯಮ ದಿಕ್ಕರಿಸುವವರ ವಿರುದ್ಧ ಕಾನೂನು ಕ್ರಮ ಮತ್ತು ದಂಡ ಪ್ರಯೋಗಕ್ಕೂ ಈಗಾಗಲೇ ಸರ್ಕಾರಗಳು ಮುಂದಾಗಿವೆ.

ಆದರೆ ಆಡಳಿತ ಪಕ್ಷದ ಶಾಸಕ ಸುನಿಲ್ ನಾಯ್ಕ ತಾನು ಕೋವಿಡ್ ಸೋಂಕಿನಿಂದ ಗುಣಮುಖನಾಗಿದ್ದೇನೆ..15 ದಿನ ಚಿಕಿತ್ಸೆ ಪಡೆದಿದ್ದೇನೆ ನನಗೆ ಮತ್ತೊಮ್ಮೆ ಕೊರೊನಾ ಸೊಂಕು ತಗುಲಲಾರದು ಎನ್ನುವ ಅಛಲ ವಿಶ್ವಾಸವಿದೆ ಹಾಗಾಗಿ ಮಾಸ್ಕ್ ಧರಿಸುವುದಿಲ್ಲ ಎನ್ನುವ ಹೇಳಿಕೆ ನೀಡಿರುವುದು ಹಲವರ ಹುಬ್ಬೇರಿಸಿದೆ. ಒಂದು ಸರ್ಕಾರದ ಭಾಗವಾಗಿದ್ದು ತಮ್ಮದೇ ಸರ್ಕಾರ ರೂಪಿಸುವ ನಿಯಮಗಳನ್ನು ತಾನು ಪಾಲಿಸುವುದಿಲ್ಲ ಎಂದು ಬಹಿರಂಗ ಹೇಳಿಕೆ ನೀಡುವುದು ಎಷ್ಟರಮಟ್ಟಿಗೆ ಸಮಂಜಸ ಎನ್ನುವುದನ್ನು ಸ್ವತ: ಪಾರಮರ್ಶಿಸಿಕೊಳ್ಳುವುದು ಒಳ್ಳೆಯದು.
ಜನ ಸಾಮಾನ್ಯರು ಯಾರಾದರೂ ಈ ರೀತಿಯ ಹೇಳಿಕೆ ನೀಡಿದರೆ ನಿರ್ಲಕ್ಷಿಸಬಹುದು ಇಲ್ಲವೇ ಕಾನೂನಿನ ಅಡಿಯಲ್ಲಿ ದಂಡಿಸಬಹುದು. ಆದರೆ ಕಾನೂನು ರೂಪಿಸುವ ಸ್ಥಾನದಲ್ಲಿದ್ದು ಸಮಾಜಕ್ಕೆ ತಪ್ಪು ಸಂದೇಶ ಹೋಗುವಂತ ಹೇಳಿಕೆ ಕೊಡುವುದು ಎಷ್ಟರಮಟ್ಟಿಗೆ ಸರಿ ಎನ್ನುವ ಪ್ರಶ್ನೆ ಉದ್ಭವಿಸಿದೆ. ಮಾಸ್ಕ್ ಧರಿಸುವುದು ಕೊರೊನಾ ನಿಯಂತ್ರಣಕ್ಕೆ ಸಹಕಾರಿಯಲ್ಲ ಎನ್ನುವುದೇ ನಿಜವಾಗಿದ್ದರೆ ಮಾಸ್ಕ್ ಕಡ್ಡಾಯದ ವಿರುದ್ಧ ವಿಧಾನಸೌಧದಲ್ಲಿ ದ್ವನಿಯೆತ್ತಬೇಕಿತ್ತು ಯಾಕೆ ಆ ಕೆಲಸ ಮಾಡಿಲ್ಲ.? ಮಾಸ್ಕ್ ಧರಿಸುವುದು ಯಾರಿಗೂ ಇಷ್ಟದ ಕೆಲಸವಲ್ಲ ಎಲ್ಲರಿಗೂ ಇದು ಕಿರಿ ಕಿರಿಯ ಅನುಭವವನ್ನೇ ನೀಡುತ್ತಿದೆ. ಆದರೂ ತಾನು ಸುರಕ್ಷಿತವಾಗಿರುವ ಜೊತೆಗೆ ತನ್ನ ಜೊತೆಗಿರುವವರು, ಕುಟುಂಬದ ಸದಸ್ಯರ ಆರೋಗ್ಯದ ಕಾಳಜಿಗಾಗಿ ಮಾಸ್ಕ್ ಧರಿಸುತ್ತಿದ್ದಾರೆ.
ಒಂದು ಕಡೆ ತಾನು ಮಾಸ್ಕ್ ಧರಿಸುವುದಿಲ್ಲ ಎನ್ನುವ ಶಾಸಕರು ಇನ್ನೊಂದೆಡೆ ಮಾಸ್ಕ್ ಧರಿಸದವರಿಗೆ ದಂಡ ಹಾಕಿಯದರೂ ನಿಯಮ ಪಾಲಿಸುವಂತೆ ಮಾಡಲು ಹೆಣಗಾಡುತ್ತಿರುವ ಅಧಿಕಾರಿಗಳು ಈ ಇಬ್ಬರ ಇಬ್ಬಗೆಯ ನೀತಿಯಲ್ಲಿ ಯಾರನ್ನು ಆದರ್ಶವಾಗಿಟ್ಟುಕೊಳ್ಳಬೇಕೆನ್ನುವ ಗೊಂದಲದಲ್ಲಿರುವ ಜನ ಸಾಮಾನ್ಯರ ಗೊಂದಲವನ್ನು ಬಗೆಹರಿಸುವವರು ಯಾರು ಎನ್ನುವುದೇ ಕಾಡುತ್ತಿರುವ ಪ್ರಶ್ನೆ.
Leave a Comment