ಜನಪ್ರತಿನಿಧಗಳ ಕಣ್ತೆರೆಸುವುದಕ್ಕೆ, ಮಾಡಬೇಕಾದ ಕೆಲಸ ಮಾಡದ ಕಾರಣಕ್ಕೆ ನಿಮ್ಮಿಂದಾಗದ ಕೆಲಸ ನಾವೇ ಮಾಡಿಕೊಂಡೆವು ಎಂದು ಸ್ವಾಭಿಮಾನದ ಹೇಳಿಕೆ ನೀಡಿ ಸಂಬಂಧಿಸಿದವರಿಗೆ ಮುಜುಗರ ಹುಟ್ಟಿಸುವುದಕ್ಕೆ ಹವಣಿಸುವ ಜನರ ನಡುವೆ ಕಡ್ಲೆ ಗ್ರಾಮದ ಹೆಬ್ಬಾರ್ನಕೆರೆ ಕೂಡ ರಸ್ತೆಯನ್ನು ಗ್ರಾಮಸ್ಥರೇ ಸ್ವಯಂ ಪ್ರೇರಣೆಯಿಂದ ದುರಸ್ಥಿ ಮಾಡಿಕೊಂಡಿದ್ದು ಈ ಕೆಲಸ ಮಾಡಿಲ್ಲ ಎಂದು ಯಾರ ಮೇಲೂ ಗೂಬೆ ಕೂರಿಸುವುದಿಲ್ಲ ನಮ್ಮದು ಕೇವಲ ಸ್ವಯಂ ಪ್ರೇರಣೆಯ ಕೆಲಸವಷ್ಟೇ ಇದರಲ್ಲಿ ಬೇರೆ ಯಾವುದೇ ಕಾರಣಗಳು ಇಲ್ಲ ಎನ್ನುವ ಮೂಲಕ ಸಮಾಜಕ್ಕೊಂದು ಉತ್ತಮ ಸಂದೇಶ ರವಾನಿಸಿದ್ದಾರೆ.

ಗ್ರಾಮಪಂಚಾಯತ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲಿ ಹಿಂದಿನ ಐದು ವರ್ಷದ ಅವಧಿಯಲ್ಲಿ ಸರ್ಕಾರದ ಅನುದಾನದಲ್ಲಿ ಕೆಲಸ ಮಾಡಿಸಲಾಗದ ಕಡೆಯೆಲ್ಲಾ ಚುನಾವಣೆಯಲ್ಲಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗುವ ಹಾಲಿಗಳು ಸ್ವಂತ ಖರ್ಚಿನಲ್ಲಿ ಕೆಲಸ ಮಾಡಿಸಿಕೊಡುವ ನಾಟಕ ಶುರುವಿಟ್ಟುಕೊಂಡಿದ್ದಾರೆ. ಇನ್ನು ಕೆಲವೆಡೆ ಹಿಂದಿನ ಸದಸ್ಯರಿಗೆ ಟಾಂಗ್ ಕೊಡುವ ಉದ್ದೇಶಕ್ಕೆ ಮಾಜಿ ಸದಸ್ಯರ ವಿರುದ್ಧ ಜನಾಭಿಪ್ರಾಯ ಮೂಡಿಸುವುದಕ್ಕೆ ಎಲ್ಲೆಲ್ಲಿ ಕೆಲಸವಾಗಬೇಕಿತ್ತು ಎನ್ನುವುದನ್ನು ನೆನಪಿಸುವ ಮೂಲಕ ತಾನು ಸಮರ್ಥ ಅಭ್ಯರ್ಥಿ ಎನ್ನುವುದನ್ನು ಬಿಂಬಿಸಿಕೊಳ್ಳುವುದಕ್ಕೆ ಹಾಳಾದ ರಸ್ತೆ, ಬೀದಿ ದೀಪ, ಕಾಲು ಸಂಕ, ಕೆರೆ ಕಟ್ಟೆ ಮುಂತಾದವುಗಳನ್ನು ಬಳಸಿಕೊಳ್ಳುತ್ತಿರುವುದೂ ಕಂಡುಬರುತ್ತಿದೆ. ಆದರೆ ಇದಾವುದರ ರಗಳೆಯೇ ಬೇಡ ಮಳೆಗಾಲದಲ್ಲಿ ಹಾಳಾಗಿದ್ದ ನಮ್ಮೂರಿನ ರಸ್ತೆಯನ್ನು ನಾವೇ ದುರಸ್ಥಿ ಮಾಡಿಕೊಳ್ಳುತ್ತೇವೆ.

ನಾವು ಸ್ಥಳಿಯ ಗ್ರಾಮಪಂಚಾಯತ ಮೇಲಾಗಲಿ,ತಾಲೂಕಾ ಪಂಚಾಯತ, ಜಿಲ್ಲಾಪಂಚಾಯತ ಅಥವಾ ಶಾಸಕರು ಸಹಿತ ಯಾರ ಮೇಲೂ ಗೂಬೆ ಕೂರಿಸುವುದಿಲ್ಲ. ಸೇವೆಯ ಉದ್ದೇಶಕ್ಕಾಗಿ ಈ ಕೆಲಸ ಮಾಡುತ್ತಿರುವುದೇ ಹೊರತ ವಿವಾದವನ್ನು ಸೃಷ್ಟಿಸುವ ಮನಸ್ಸಿಲ್ಲ ಎಂದಿರುವುದು ಗ್ರಾಮಸ್ಥರ ವಿಶಾಲ ಮನಸ್ಸಿಗೆ ಸಾಕ್ಷಿಯಾಗಿದೆ.




Leave a Comment