ಹೊನ್ನಾವರ ತಾಲೂಕಿನ ಗುಂಡಬಾಳ ನದಿಗೆ ಬಿದ್ದು ವ್ಯಕ್ತಿಯೊರ್ವ ಮ್ರತಪಟ್ಟ ಘಟನೆ ಸೋಮವಾರ ನಡೆದಿದೆ.
ಮ್ರತಪಟ್ಟ ವ್ಯಕ್ತಿ ಹೊನ್ನಾವರ ತಾಲೂಕಿನ ಹಡಿನಬಾಳ ಪ್ಲಾಟ್ ಕೇರಿಯ 45 ವರ್ಷದ ರಾಜು ದೇವಿದಾಸ ಮಹಾಲೆ ಎಂದು ಗುರುತಿಸಲಾಗಿದೆ.ವೃತ್ತಿಯಲ್ಲಿ ಕ್ಷೌರಿಕರಾಗಿದ್ದು ಸೋಮವಾರ ಬೆಳಗ್ಗೆ 11-30 ಗಂಟೆ ಸಮಯಕ್ಕೆ ಹಡಿನಬಾಳದ ಪ್ಲಾಟ್ಕೇರಿಯ ಹಡಿಬಾಳಹೊಳೆ ದಡದಲ್ಲಿ ತನ್ನ ಮೊಬೈಲ್ ಹಾಗು ಚಪ್ಪಲಿ ಇಟ್ಟು ಹೊಳೆಯಲ್ಲಿ ಆಕಸ್ಮಿಕವಾಗಿ ಜಾರಿಯೊ ಅಥವಾ ಆತ್ಮಹತ್ಯೆ ಮಾಡಿ ಕೊಳ್ಳಲು ಹಾರಿಯೋ ನೀರಿನಲ್ಲಿ ಬಿದ್ದು ಕಾಣೆಯಾಗಿದ್ದರು. ಹೊನ್ನಾವರ ಪೊಲೀಸ್ ಠಾಣೆಯ ಸಿಪಿಐ ಶ್ರೀಧರ್ ಎಸ್.ಆರ್ ಹಾಗೂ ಸಿಬ್ಬಂದಿಗಳ,ಅಗ್ನಿಶಾಮಕ ಅಧಿಕಾರಿ, ಸಿಬ್ಬಂದಿಗಳ ನೇತ್ರತ್ವದಲ್ಲಿ ಗುಂಡಬಾಳ ನದಿಯಲ್ಲಿ ಸತತ ಮೂರ್ನಾಲ್ಕು ಘಂಟೆಗಳ ಕಾಲ ಹುಡುಕಾಟ ನಡೆಸಲಾಯಿತು.
ತದನಂತರ ಮೃತರ ಶವ ಪತ್ತೆಯಾಯಿತು. ಮೃತದೇಹವನ್ನು ಮೇಲೆತ್ತುವ ಸಂಧರ್ಭದಲ್ಲಿ ಸ್ಥಳೀಯರಾದ ಪ್ರಕಾಶ, ಜೀವನ ಡಯಾಸ್, ಬಾಬು ಹಾಗೂ ಇತರ ಸ್ಥಳೀಯರ ಸಹಕಾರದಿಂದ ಶೋಧಿಸಿ ಹೊರತೆಗೆದರು. ಈ ಕುರಿತು ಮೃತ ರಾಜುವಿನ ಚಿಕ್ಕಪ್ಪ ದಾಮೋದರ ಶಾಂತಯ್ಯ ಮಹಾಲೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Leave a Comment