ಉತ್ತರಕನ್ನಡ ಜಿಲ್ಲೆಯಲ್ಲಿ ಹೃದಯಘಾತದ ಸಾವು ತಪ್ಪಿಸಲು ಅಥವಾ ಕಡಿಮೆಮಾಡಲು ಕೂಡಲೇ ಕ್ಯಾಥ್ಲ್ಯಾಬ್ ಆರಂಭವಾಗಬೇಕು ಎಂದು ಹಿರಿಯ ಹೃದಯ ತಜ್ಞ ಡಾ. ಪದ್ಮನಾಭ ಕಾಮತ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಹೃದಯಾಘಾತವಾದರೆ ವೈದ್ಯಕೀಯ ಭಾಷೆಯಲ್ಲಿ ಗೋಲ್ಡನ್ ಟೈಮ್ ಎಂದು ಕರೆಯುವ ಒಂದೆರಡು ಘಂಟೆಯಲ್ಲಿ ಸ್ಟಂಟ್ ಅಳವಡಿಸುವ ಕ್ಯಾಥ್ಲ್ಯಾಬ್ಗಳು ಇಲ್ಲ. ಮಂಗಳೂರು, ಮಣಿಪಾಲ, ಹುಬ್ಬಳ್ಳಿ, ಗೋವಾ, ಶಿವಮೊಗ್ಗಾಕ್ಕೆ ಹೋಗಲು ಕನಿಷ್ಠ 2-3 ಗಂಟೆ ಬೇಕು. ಅಷ್ಟರಲ್ಲಿ ರೋಗಿ ಶವವಾಗಿರುತ್ತಾನೆ.
ಇದನ್ನು ನೋಡಿನೋಡಿ ದಕ್ಷಿಣ ಕನ್ನಡ ಜಿಲ್ಲೆಯಂತೆ ಉತ್ತರಕನ್ನಡಕ್ಕೂ ಇಸಿಜಿ ಉಪಕರಣ ಉಚಿತವಾಗಿ ನೀಡಿ, ವಾಟ್ಸಾಪ್ ಸಂದೇಶ ಪಡೆದು ತಕ್ಷಣ ಸಲಹೆ ನೀಡುವ ವ್ಯವಸ್ಥೆಯನ್ನು ಮಾಡಲಾಗಿದ್ದರೂ ಪ್ರಯಾಣದ ಅಂತರದಿಂದಾಗಿ ಪೂರ್ತಿ ಫಲಕಾರಿಯಾಗುತ್ತಿಲ್ಲ, ಆದ್ದರಿಂದ ಆರೋಗ್ಯ ಮಂತ್ರಿಗಳಿಗೋ, ಅಥವಾ ಮುಖ್ಯಮಂತ್ರಿಗಳಿಗೋ ವಿನಂತಿ ಮಾಡಿ ಜಿಲ್ಲೆಯ ಮಧ್ಯವರ್ತಿ ಸ್ಥಳವಾದ ಕುಮಟಾ-ಹೊನ್ನಾವರಗಳ ಮಧ್ಯೆ ಒಂದು ಕ್ಯಾಥ್ಲ್ಯಾಬ್ ಮಾಡಿಸಿಕೊಳ್ಳಿ ಎಂದು ಸಿಎಡಿಯ ಸಂಚಾಲಕ, ಮಂಗಳೂರು ಕೆಎಂಸಿಯ ಹೃದಯ ವಿಭಾಗದ ಮುಖ್ಯಸ್ಥ ಡಾ. ಪದ್ಮನಾಭ ಕಾಮತ್ ಸಲಹೆ ನೀಡಿದ್ದಾರೆ.
ಡಾ. ಪದ್ಮನಾಭ ಕಾಮತ್
ಕಾರವಾರದವರಿಗೆ ಹತ್ತಿರ ಗೋವಾ ಇದೆ. ಮುಂಡಗೋಡ-ಹಳಿಯಾಳದವರಿಗೆ ಹುಬ್ಬಳ್ಳಿ ಇದೆ. ಭಟ್ಕಳದವರಿಗೆ ಉಡುಪಿ ಇದೆ. ಜಿಲ್ಲೆಯ ಮಧ್ಯದ ತಾಲೂಕುಗಳವರಿಗೆ ಯಾವುದೇ ವ್ಯವಸ್ಥೆ ಇಲ್ಲ. ದಕ್ಷಿಣಕ್ಕೆ ಹೊನ್ನಾವರ-ಭಟ್ಕಳ, ಪೂರ್ವಕ್ಕೆ ಶಿರ್ಸಿ-ಸಿದ್ಧಾಪುರ, ಉತ್ತರಕ್ಕೆ ಅಂಕೋಲಾ-ಕಾರವಾರಗಳಿರುವುದರಿಂದ ಕುಮಟಾ ಮಧ್ಯವರ್ತಿ ಸ್ಥಳವಾಗುತ್ತದೆ. ಕಟ್ಟಡ ಸಹಿತ ಕ್ಯಾಥ್ಲ್ಯಾಬ್ಗೆ 4ಕೋಟಿ ರೂಪಾಯಿ ಬಂಡವಾಳ ಬೇಕು. ಕಟ್ಟಡ ಇದ್ದರೆ 2ಕೋಟಿ ಸಾಕು. ಸ್ಟೆಂಟ್ ಅಳವಡಿಸಬಲ್ಲ ಇಂಟರ್ವೆನ್ಶನಲ್ ಕಾರ್ಡಿಯಾಲಜಿಸ್ಟ್ಗಳ ಕೊರತೆ ಇದೆ.
ರಾಜ್ಯದಲ್ಲಿ ಉತ್ತರಕನ್ನಡದವರೆ ನಾಲ್ಕೈದು ವೈದ್ಯರು ಡಿಎಂ ಮಾಡಿ ಹೊರಗೆ ಬರುತ್ತಿದ್ದರೂ ಯಾರೂ ಜಿಲ್ಲೆಗೆ ಬರಲು ಮನಸ್ಸು ಮಾಡುವುದಿಲ್ಲ. ಜಿಲ್ಲೆಯ ಜನ, ರಾಜಕಾರಣಿಗಳು ಇಂತಹ ವೈದ್ಯರಿಗಾಗಿ ಸೌಲಭ್ಯ ಒದಗಿಸಿಕೊಡಬೇಕು ಮತ್ತು ಬೆಂಬಲ ನೀಡಬೇಕು. ಅಂದರೆ ವರ್ಷಕ್ಕೆ ನೂರಾರು ಜೀವ ಉಳಿಸಬಹುದು.

ನಾನು ಕೇವಲ ಮಾತನಾಡುತ್ತಿಲ್ಲ, ಉತ್ತರಕನ್ನಡದವರ ಕಷ್ಟಕಂಡು ಸಿಎಡಿ ಮುಖಾಂತರ ಜಿಲ್ಲೆಯ ಬಹುತೇಕ ತಾಲೂಕುಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ, ಜನೌಷಧಿ ಕೇಂದ್ರಕ್ಕೆ ಮತ್ತು ಕೆಲವು ಖಾಸಗಿ ವೈದ್ಯರಿಗೆ, ಒಟ್ಟು 27ಕ್ಕೂ ಹೆಚ್ಚು ಇಸಿಜಿ ಉಪಕರಣಗಳನ್ನು ದಾನಿಗಳ ನೆರವಿನಿಂದ ಸಿಎಡಿ ಒದಗಿಸಿದೆ. ಇತ್ತೀಚೆ ಪ್ರಾಥಮಿಕ ಆರೋಗ್ಯ ಕೇಂದ್ರ ದೂರವಿರುವ ಹೊನ್ನಾವರ ತಾಲೂಕಿನ ಹಡಿನಬಾಳ, ಮಾವಿನಕುರ್ವಾ, ಗೇರಸೊಪ್ಪಾ ಪಂಚಾಯತಗಳಿಗೆ, ಕುಮಟಾದ ಮಿರ್ಜಾನ ಮತ್ತು ಹಿರೇಗುತ್ತಿಗಳಿಗೆ ಉಚಿತ ಇಸಿಜಿ ಉಪಕರಣ ನೀಡಿದ್ದೇವೆ.
ಅಂಗನವಾಡಿ ಶಿಕ್ಷಕಿಯರಿಗೆ ಮಾತ್ರವಲ್ಲ ಅಂಬುಲೆನ್ಸ್ ಚಾಲಕರಿಗೂ ಸಿಎಡಿ ತರಬೇತಿ ನೀಡಿದೆ. ಉತ್ತರಕನ್ನಡದವರಿಗಾಗಿ ಸಿಎಡಿ ಕೋವಿಡ್ ಸಮಯದಲ್ಲೂ ಸೇವೆ ನೀಡಿದೆ. ಜನ ಮತ್ತು ರಾಜಕಾರಣಿಗಳು ಇದನ್ನು ಅರ್ಥಮಾಡಿಕೊಳ್ಳಬೇಕು. ಬೇಗ ಕ್ಯಾಥ್ಲ್ಯಾಬ್ ಬರಲಿ ಎಂಬ ಕಾರಣಕ್ಕಾಗಿ ಈ ಮಾತು ಹೇಳಿದ್ದೇನೆ, ದಯವಿಟ್ಟು ಇದನ್ನು ಪತ್ರಿಕೆಯಲ್ಲಿ ಬರೆಯಿರಿ ಎಂದಿದ್ದಾರೆ.
Honvar news:ಸುದ್ದಿ ಹಾಗೂ ಮಾಹಿತಿಗಾಗಿ ನಮ್ಮ. Whatsapp group join ಆಗಿ
https://chat.whatsapp.com/G9SxG7l3Wo36m72c85bSOA
Leave a Comment