ಹೊನ್ನಾವರ : ಇತ್ತೀಚಿನ ದಶಕಗಳಲ್ಲಿ ಸಾಹಿತ್ಯ ಪರಿಷತ್ತು ಕೇವಲ ಸಾಹಿತ್ಯದ ಚಟುವಟಿಕೆ ಮಾತ್ರವಲ್ಲ ರಾಜಕೀಯ ಲೇಪಿತ ಸಾಹಿತ್ಯ ಪರಿಷತ್ ಆಗಿದೆ ಎಂಬ ಆಪಾದನೆಯಿದೆ. ತಾಲೂಕು, ಜಿಲ್ಲೆ, ರಾಜ್ಯ ಮಟ್ಟದ ಎಲ್ಲ ಪರಿಷತ್ತುಗಳ ಕುರಿತು ಇವು ನಡೆಸುವ ಸಮ್ಮೇಲನಗಳ ಕುರಿತು ಸಾಹಿತಿಗಳಲ್ಲೇ ಒಂದು ವರ್ಗಕ್ಕೆ ಅಸಮಾಧಾನವಿದೆ. ಈ ಮಧ್ಯೆ ಹೊನ್ನಾವರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ತನ್ನ ಚಟುವಟಿಕೆಯನ್ನು ಆಪಾದನೆ ರಹಿತವಾಗಿ ಚೊಕ್ಕದಾಗಿ ನಡೆಸುತ್ತ ಬಂದಿದೆ.
ಪ್ರೋ. ನಾಗರಾಜ ಹೆಗಡೆ ಅಪಗಾಲ ಅಧ್ಯಕ್ಷರಾಗಿ, ಭವಾನಿಶಂಕರ ನಾಯ್ಕ ಮತ್ತು ಶಶಿಧರ ದೇವಾಡಿಗ ಗೌರವ ಕಾರ್ಯದರ್ಶಿಗಳಾಗಿ, ಶಂಕರ ಗೌಡ ಸಹಕಾರ್ಯದರ್ಶಿಯಾಗಿ, ಪ್ರೋ. ಪ್ರಶಾಂತ ಮೂಡ್ಲಹೆಗಡೆಮನೆ ಗೌರವಕೋಶಾಧ್ಯಕ್ಷರಾಗಿ 2016ರಿಂದ 2021ರ ವರೆಗೆ ಸಾಹಿತ್ಯ ಚಟುವಟಿಕೆಗಳನ್ನು ತಾಲೂಕಿನಲ್ಲಿ ನಡೆಸಿದ್ದಾರೆ. ಯಶಸ್ವಿಯಾಗಿ ಮೂರು ಸಾಹಿತ್ಯ ಸಮ್ಮೇಲನಗಳನ್ನು ಜರುಗಿಸಿದ್ದಾರೆ. ಮೊದಲ ಬಾರಿ ಪತ್ರಿಕಾ ವೃತ್ತಿಯಲ್ಲಿರುವ ಒಬ್ಬರನ್ನು ಸಾಹಿತ್ಯ ಸಮ್ಮೇಲನದ ಅಧ್ಯಕ್ಷನನ್ನಾಗಿ ಮಾಡಿ ಪತ್ರಿಕಾ ಸಾಹಿತ್ಯಕ್ಕೆ ಪರಿಷತ್ನಲ್ಲಿ ಸ್ಥಾನ ಕೊಡಿಸಿದ್ದಾರೆ. ಪ್ರತಿ ಬಾರಿಯೂ ಸಾಹಿತ್ಯ ಸಮ್ಮೇಲನ ಮುಗಿದ ಎರಡು ವಾರದಲ್ಲಿ ಗೌರವಾಧ್ಯಕ್ಷರನ್ನು ಮುಂದಿಟ್ಟುಕೊಂಡು ಲೆಕ್ಕಪತ್ರವನ್ನು ಮಾಧ್ಯಮಕ್ಕೆ ಬಿಡುಗಡೆ ಮಾಡಿದ್ದಾರೆ. ಆಯಾ ಭಾಗದ ಗಣ್ಯರನ್ನು ಸ್ವಾಗತ ಸಮಿತಿ ಅಧ್ಯಕ್ಷರನ್ನಾಗಿ, ಸದಸ್ಯರನ್ನಾಗಿ ಆಯ್ಕೆಮಾಡಿ ಅವರ ಸಹಕಾರದಲ್ಲಿ, ಹೆಸರಿನಲ್ಲಿ ಇವರು ದುಡಿದಿದ್ದಾರೆ.

ತಮ್ಮ ಅಧಿಕಾರಾವಧಿಯಲ್ಲಿ ನಡೆದ ಸಾಹಿತ್ಯ ಸಮ್ಮೇಲನಗಳಲ್ಲಿ ಉಳಿದ ಹಣದ ಭಾಗವನ್ನು ಆ ಊರಿನ ಸಂಸ್ಥೆಗೆ ಕೊಟ್ಟಿದ್ದಾರೆ. ಇನ್ನಷ್ಟು ಉಳಿದ ಹಣವನ್ನು ಅಮೃತ ಪುಸ್ತಕಾಲಯ ಯೋಜನೆಯಲ್ಲಿ ಸ್ವಾತಂತ್ರ್ಯದ ಅಮೃತಮಹೋತ್ಸವದ ನಿಮಿತ್ತ 2 ಪದವಿಕಾಲೇಜು, 3 ಪ.ಪೂ. ಕಾಲೇಜು, 5 ಪ್ರೌಢಶಾಲೆ ಹಾಗೂ 5 ಹಿರಿಯ ಪ್ರಾಥಮಿಕ ಶಾಲೆ ಸಹಿತ 15 ವಿದ್ಯಾಲಯಗಳಿಗೆ ಬೆಂಗಳೂರಿನ ಅಭಿನವದ ಸಹಕಾರದಲ್ಲಿ ಲಕ್ಷ ರೂಪಾಯಿಗಳ ಪುಸ್ತಕವನ್ನು ಹಂಚಿದ್ದಾರೆ.
ಹೀಗೆ ಹಲವು ದಾಖಲೆಗಳನ್ನು ಸಾಹಿತ್ಯ ಸಮ್ಮೇಲನಗಳ ಅಪರೂಪದ ಚಿತ್ರಗಳನ್ನೊಳಗೊಂಡ ಕೃತಿಯ ಮೌಲ್ಯ ಹೆಚ್ಚಿಸಲು ಹೊನ್ನಾವರ ತಾಲೂಕಿನಲ್ಲಿ ಆಗಿ ಹೋದ ಮತ್ತು ಈಗ ಬರೆಯುತ್ತಿರುವ 65 ಕವಿಗಳ ಕವನಗಳನ್ನು ಆಯ್ದು ಸೇರಿಸಿ, ಹೊನ್ನಾವರದ ಕವಿತೆಗಳು ಹೆಸರಿನಲ್ಲಿ 100 ಪುಟಗಳ ಬಣ್ಣದ ಚಿತ್ರಗಳನ್ನೊಳಗೊಂದ ಸುಂದರ ಮುದ್ರಣದ ಪ್ರಾತಿನಿಧಿಕ ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ. ಸಾಹಿತಿ ಪ್ರಾಧ್ಯಾಪಕರ ಜೋಡಿ ಅಪಗಾಲ ಮತ್ತು ಮೂಡ್ಲಹೆಗಡೆ ಈ ಕೃತಿಯನ್ನು ಸಂಪಾದಿಸಿ ಉಚಿತವಾಗಿ ಸಾಹಿತ್ಯ ಪ್ರಿಯರಿಗೆ ಹಂಚಿದೆ. ತಮ್ಮ ಚಟುವಟಿಕೆಗಳನ್ನು ಪ್ರೋತ್ಸಾಹಿಸಿ ಮೆಚ್ಚಿದ ಪರಿಷತ್ನ ರಾಜ್ಯಾಧ್ಯಕ್ಷ ಡಾ. ಮನು ಬಳಿಗಾರ, ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೊಡಿ ಇವರನ್ನು ಸ್ಮರಿಸಿದ್ದಾರೆ. ತಾಲೂಕಾ ಸಾಹಿತ್ಯ ಪರಿಷತ್ಗಳು ಹೀಗೆ ಕೆಲಸ ಮಾಡಿದರೆ ಚೆಂದ ಎಂಬುದನ್ನು ರಾಜ್ಯಕ್ಕೆ ತೋರಿಸಿಕೊಟ್ಟ ತಾಲೂಕಾ ಸಾಹಿತ್ಯ ಪರಿಷತ್ತಿಗೆ ಬೇಷ್ ಅನ್ನಲೇ ಬೇಕು. ಕೃತಿ 52 ವರ್ಷ ಕರಾವಳಿ, ಮಲೆನಾಡನ್ನು ಆಳಿದ ಅಕಳಂಕಿತ ಕಾಳುಮೆಣಸಿನ ರಾಣಿ ಚೆನ್ನಭೈರಾದೇವಿ ಸ್ಮøತಿಗೆ ಅರ್ಪಿತವಾಗಿದೆ.
Leave a Comment