ಕಾರವಾರ:
ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಳಕ್ಕೆ ಮದ್ಯದ ನಶೆಯೇ ಕಾರಣ ಎಂದು ಮನಗಂಡ ನ್ಯಾಯಾಯಲ ಹೆದ್ದಾರಿ ಪಕ್ಕದಲ್ಲಿನ ಮದ್ಯದಂಗಡಿಗಳ ನಿಷೇಧಕ್ಕೆ ಆದೇಶಿಸಿದ್ದು, ಗೋವಾ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಹೆದ್ದಾರಿಗಳನ್ನು ಸ್ಥಳೀಯ ರಸ್ತೆಗಳನ್ನಾಗಿ ಪರಿವರ್ತಿಸುವ ಪ್ರಸ್ತಾವನೆ ಸಲ್ಲಿಕೆಯಾಗಿದೆ!
ಜಿಲ್ಲೆಯ ಆಯಾ ತಾಲೂಕಿನಲ್ಲಿರುವ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತ್ ವ್ಯಾಪ್ತಿಗಳಲ್ಲಿ ಸಾಗುವ ರಾಜ್ಯ ಹೆದ್ದಾರಿಗಳನ್ನು ನಗರ ರಸ್ತೆಗಳೆಂದು ಮರು ನಾಮಕರಣ ಮಾಡಬೇಕು ಎಂದು ಸರಕಾರ ಮುಂದಾಗಿದ್ದು ಈ ಬಗ್ಗೆ ಲೋಕೋಪಯೋಗಿ ಇಲಾಖೆಗೆ ಆದೇಶ ನೀಡಿದೆ. ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿರುವ ರಾಜ್ಯ ಹೆದ್ದಾರಿಗಳು ನಗರ, ಪಟ್ಟಣ ಪ್ರದೇಶದಲ್ಲಿ ಹಾದು ಹೋಗುತ್ತಿದ್ದು ಆಯಾ ರಾಜ್ಯ ಹೆದ್ದಾರಿಗಳನ್ನು ಆಡಳಿತಾತ್ಮಕ ಹಾಗೂ ನಿರ್ವಹಣೆಯ ಹಿತದೃಷ್ಟಿಯಿಂದ ನಗರ ರಸ್ತೆ, ಸ್ಥಳೀಯ ಸಂಸ್ಥೆಗಳ ರಸ್ತೆಗಳು ಎಂದು ಮರುನಾಮಕರಣ ಮಾಡಲು ಸಿದ್ದತೆ ನಡೆಸಿಕೊಂಡಿದೆ. ರಾಜ್ಯ ಹೆದ್ದಾರಿಗಳು ವಿವಿಧ ನಗರ, ಪಟ್ಟಣ ಪ್ರದೇಶಗಳ್ಲಲಿ ಹಾದು ಹೋಗುತ್ತಿರುವ ಪ್ರಾರಂಭದ ಗಡಿ ಮತ್ತು ಮುಕ್ತಾಯದ ಹಂತಗಳನ್ನು ಸೂಕ್ತ ರೀತಿಯಲ್ಲಿ ಲೋಕೋಪಯೋಗಿ ಇಲಾಖೆಯ ಎಲ್ಲ ಕಾರ್ಯನಿರ್ವಹಣಾ ಅಭಿಯಂತರರು ಪರಿಶೀಲಿಸಿ, ರಾಜ್ಯ ಹೆದ್ದಾರಿಗಳವಾರು ವಿವಿಧ ನಗರ,ಪಟ್ಟಣ ವ್ಯಾಪ್ತಿಯಲ್ಲಿರುವ ಉದ್ದದ ಅಂಕಿ ಅಂಶಗಳನ್ನು ಪರಿಶೀಲನೆ ನಡೆಸಲು ಸೂಚಿಸಿದೆ. ಇದಲ್ಲದೇ ಸಂಬಂಧಿಸಿದ ಕಾರ್ಯಪಾಲಕ ಅಭಿಯಂತರರು ತಮ್ಮ ವ್ಯಾಪ್ತಿಯ ಮಾಹಿತಿಗೆ ದೃಢೀಕರಿಸಿ ವರದಿ ಸಮೇತವಾಗಿ 2017ರ ಮೇ9ರೊಳಗೆ ಸರಕಾರಕ್ಕೆ ನೀಡಬೇಕು ಎಂದು ಸೂಚಿಸಿತ್ತು. ಲೋಕೋಪಯೋಗಿ ಇಲಾಖೆಯ ವರದಿಯಂತೆ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಹಾಯ್ದು ಹೋಗುವ ರಸ್ತೆಗಳ ಪಟ್ಟಿಯನ್ನು ಸಿದ್ದ ಪಡಿಸಿ ಈಗಾಗಲೇ ಸರಕಾರಕ್ಕೆ ಸಲ್ಲಿಸಿದ ಬಳಿಕ ಸರಕಾರ ನಿರ್ವಹಣೆಯ ಜವಾಬ್ದಾರಿಯನ್ನು ಆಯಾ ಸ್ಥಳೀಯ ಸಂಸ್ಥೆಗಳಿಗೆ ವಹಿಸಿದೆ.
ರಾಜ್ಯ ಹೆದ್ದಾರಿ-06ರ ಕಾರವಾರ ತಾಲೂಕಿನ ಕಾರವಾರ ಕೈಗಾ-ಇಳಕಲ್ ರಾಜ್ಯ ಹೆದ್ದಾರಿಯ 3.20ಕಿ.ಮೀ. ರಾಜ್ಯ ಹೆದ್ದಾರಿ, ಕುಮಟಾ ತಾಲೂಕಿನ ಕುಮಟಾ ತಡಸ ರಾಜ್ಯ ಹೆದ್ದಾರಿ-69ರ 1.60 ಕಿ.ಮೀ. ರಸ್ತೆ, ಕುಮಟಾ- ಕೊಡಮಡಗು ರಾಜ್ಯ ಹೆದ್ದಾರಿ-48ರ 2 ಕಿ.ಮೀ. ಹಾಗೂ ಭಟ್ಕಳ ತಾಲೂಕಿನ ಭಟ್ಕಳ-ಸೊರಬ ರಾಜ್ಯ ಹೆದ್ದಾರಿ-50ರ 1ಕಿ.ಮೀ. ರಸ್ತೆ ಸೇರಿದಂತೆ ಒಟ್ಟೂ 7.80ಕಿ.ಮೀ ಉದ್ದದ ರಾಜ್ಯ ಹೆದ್ದಾರಿಯನ್ನು ಆಯಾ ತಾಲೂಕಿನ ನಗರಸಭೆ ಹಾಗೂ ಪುರಸಭೆಗೆ ಹಸ್ತಾಂತರಿಸಲಾಗಿದೆ. ಇನ್ನೂ ಮುಂದೆ ಆಯಾ ತಾಲೂಕಿನ ಮೂಲಕ ಹಾದು ಹೋಗುವ ರಾಜ್ಯ ಹೆದ್ದಾರಿಯನ್ನು ಆಯಾ ಸ್ಥಳೀಯ ಸಂಸ್ಥೆಗಳೇ ನಿರ್ವಹಣೆ ಮಾಡಬೇಕು ಎಂದಿದೆ. ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತ್ ವ್ಯಾಪ್ತಿಗಳಲ್ಲಿ ಸಾಗುವ ರಾಜ್ಯ ಹೆದ್ದಾರಿಗಳನ್ನು ನಗರ ರಸ್ತೆಗಳೆಂದು ಮರು ನಾಮಕರಣ ಮಾಡಬೇಕು ಎನ್ನುವ ಸರಕಾರದ ಸೂಚನೆಯ ಹಿಂದೆ ರಾಜ್ಯ ಹೆದ್ದಾರಿ ಹತ್ತಿರ ಇರುವ ಬಾರ್‍ಗಳ ರಕ್ಷಣೆಗೆ ಸರಕಾರದ ಮುತುವರ್ಜಿಯೇ ಕಾರಣವಾಗಿದೆ. ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ ಬಳಿಯ ಮದ್ಯದಂಗಡಿಗಳನ್ನು ಮುಚ್ಚಬೇಕು ಎಂದು ಸರ್ವೋಚ್ಛ ನ್ಯಾಯಾಲಯ ಆದೇಶ ನೀಡಿದ್ದರಿಂದ ಜಿಲ್ಲೆಯಲ್ಲಿ 30ಕ್ಕೂ ಹೆಚ್ಚು ಬಾರ್‍ಗಳು ಮುಚ್ಚುವ ಭೀತಿಯಲ್ಲಿದೆ. ಇದ್ದರಿಂದ ಆಗುವ ಆರ್ಥಿ ನಷ್ಟವನ್ನು ತಪ್ಪಿಸಿಕೊಳ್ಳಲು ರಾಜ್ಯ ಹೆದ್ದಾರಿಗಳನ್ನು ನಗರ ರಸ್ತೆಗಳು ಎಂದು ಮರು ನಾಮಕರಣ ಮಾಡಲು ಮುಂದಾಗಿದೆ. ಗೋವಾ ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ ಬರುವ ಹಾಗೂ ಬಹುತೇಕ ನಗರದ ಮಧ್ಯ ಭಾಗದಲ್ಲಿಯೇ ಹಾಗೂ ಹೋಗಿರುವ ಮೂರು ಸಾವಿರಕ್ಕೂ ಹೆಚ್ಚು ಬಾರ್, ರೆಸ್ಟೋರೆಂಟ್‍ಗಳು ಮುಚ್ಚಿದೆ. ಗೋವಾದಲ್ಲಿರುವ ಬಾರ್‍ಗಳೆಲ್ಲ ಸುಪ್ರೀಂ ಕೋಟ್ ಆದೇಶ ವ್ಯಾಪ್ತಿಯೊಳಗೆ ಬರುವುದರಿಂದ ಗೋವಾ ಸರಕಾರ ಯಾವುದೇ ಬಾರ್‍ಗಳ ಪರವಾನಗಿಗಳನ್ನು ನಮೀಕರಣ ಮಾಡಿಲ್ಲ. ಅದರಂತೆ ರಾಜ್ಯದಲ್ಲಿ ಬಾರ್ ಮಾಲೀಕರ ಬಾರ್ ಪರವಾನಗಿ ಜೂನ್ ಕೊನೆಯ ವಾರ ಮುಗಿಯಲಿದ್ದು, ಮರು ನವಿಕರಣಕ್ಕಾಗಿ ರಸ್ತೆ ಹೆಸರನ್ನು ಬದಲಾಯಿಸಲಾಗುತ್ತಿದೆ.
ಕಾರವಾರ ಕೈಗಾ-ಇಳಕಲ್, ಕುಮಟಾ- ತಡಸ, ಕುಮಟಾ – ಕೊಡಮಡಗು, ಭಟ್ಕಳ-ಸೊರಬದ ರಾಜ್ಯ ಹೆದ್ದಾರಿಯನ್ನು ನಗರ ರಸ್ತೆಗಳು ಎಂದು ಮರು ನಾಮಕರಣವಾಗಿ ಪರಿವರ್ತನೆಯಾದರೆ ಈ ರಾಜ್ಯ ಹೆದ್ದಾರಿಗಳಲ್ಲಿ ಬರುವ ಎಲ್ಲ ಬಾರ್‍ಗಳು ಸುಪ್ರೀಂ ಕೋರ್ಟ್ ಆದೇಶದಿಂದ ಮುಕ್ತವಾಗಲಿದೆ
Leave a Comment